ತುಮಕೂರು


ನಗರದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಾರ್ಚ್ 5ರಂದು ಹಮ್ಮಿಕೊಂಡಿರುವ “ಫಲಾನುಭವಿಗಳ ಸಮ್ಮೇಳನ” ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಉದ್ಘಾಟಿಸಲಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ಗುರುವಾರ ಸಂಜೆ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ಜರುಗಿದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದ ಅವರು, ಮಾರ್ಚ್ 5ರ ಮುಖ್ಯಮಂತ್ರಿಗಳ ಕಾರ್ಯಕ್ರಮದ ಆಯೋಜನೆಯಲ್ಲಿ ಹಾಗೂ ಶಿಷ್ಟಾಚಾರದ ಪಾಲನೆಯಲ್ಲಿ ಯಾವುದೇ ಲೋಪದೋಷಗಳು ಉಂಟಾಗದಂತೆ ಅಚ್ಚುಕಟ್ಟಾಗಿ ಏರ್ಪಡಿಸಲು ವಿವಿಧ ಅಧಿಕಾರಿಗಳನ್ನು ನಿಯೋಜಿಸಿ, ಕರ್ತವ್ಯಗಳನ್ನು ಸೂಚಿಸಲಾಗಿದೆ ಎಂದು ಸಚಿವರಿಗೆ ತಿಳಿಸಿದರು.
ಕಾರ್ಯಕ್ರಮಕ್ಕೆ ಎಲ್ಲಾ ತಾಲ್ಲೂಕುಗಳಿಂದ ವಿವಿಧ ಯೋಜನೆಗಳ 25,000 ಫಲಾನುಭವಿಗಳು ಆಗಮಿಸಲಿದ್ದು, ಫಲಾನುಭವಿಗಳನ್ನು ಕರೆ ತರಲು ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಸೇರಿದಂತೆ 358 ವಿಶೇಷ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.
ನಂತರ ಜಿಲ್ಲಾಧಿಕಾರಿಗಳು ಮಾತನಾಡುತ್ತಾ, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಂದ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಲು ಎಲ್ಲಾ ರೀತಿಯ ವ್ಯವಸ್ಥೆಯನ್ನು ಈಗಾಗಲೇ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿಗಳು ಮಾರ್ಚ್ 5ರಂದು ಫಲಾನುಭವಿಗಳ ಸಮ್ಮೇಳನದೊಂದಿಗೆ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ 600 ಕೋಟಿ ರೂ. ವೆಚ್ಚದ ಅನುದಾನದಲ್ಲಿ ಕೈಗೊಂಡ ವಿವಿಧ ಯೋಜನೆಗಳ ಲೋಕಾರ್ಪಣೆ, ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ/ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ ಜಿಲ್ಲೆಯ ಎಲ್ಲಾ ಗ್ರಾಮಪಂಚಾಯತಿಗಳಿಂದ ಸಾರಿಗೆ ವ್ಯವಸ್ಥೆ ಮಾಡಲಾಗಿದ್ದು, ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಮಧ್ಯಾಹ್ನ 12 ಗಂಟೆಯೊಳಗಾಗಿ ಕರೆತರುವುದರೊಂದಿಗೆ ಕರೆದೊಯ್ಯುವ ಜವಾಬ್ದಾರಿಯನ್ನು ಸ್ಥಳೀಯ ಪಿಡಿಓ, ಗ್ರಾಮಲೆಕ್ಕಾಧಿಕಾರಿಗಳಿಗೆ ವಹಿಸಿದರು.
ಜಲಜೀವನ್ ಮಿಷನ್, ವಿವೇಕಾನಂದ ಸ್ವಸಹಾಯ ಸಂಘ, ವಸತಿ ಯೋಜನೆ, ಎನ್‍ಆರ್‍ಎಲ್‍ಎಂ ಯೋಜನೆಯ ಫಲಾನುಭವಿಗಳೊಂದಿಗೆ ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ, ರೇಷ್ಮೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೀನುಗಾರಿಕೆ, ಕಾರ್ಮಿಕ ಇಲಾಖೆಗಳು ಸೇರಿದಂತೆ ವಿವಿಧ ನಿಗಮಗಳು ನೀಡುವ ಸಾಲ-ಸಹಾಯಧನ, ರೈತ ವಿದ್ಯಾನಿಧಿ, ವಿದ್ಯಾಸಿರಿ, ಗಂಗಾ ಕಲ್ಯಾಣ, ವಿದ್ಯಾರ್ಥಿವೇತನ, ಪಿಎಂ ಕಿಸಾನ್, ಪ್ರೋತ್ಸಾಹಧನ, ಕಾನೂನು ತರಬೇತಿ ಹಾಗೂ ಮತ್ತಿತರ ಸೌಲಭ್ಯಗಳನ್ನು ಪಡೆಯುವ ಫಲಾನುಭವಿಗಳನ್ನು ಕರೆ ತರಬೇಕು ಎಂದು ತಿಳಿಸಿದರು.
ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ವೇದಿಕೆಯ ಮುಂಭಾಗ ಪಾಲಿಕೆ ಸದಸ್ಯರು ಸೇರಿದಂತೆ ವಿವಿಧ ಜನಪ್ರತಿನಿಧಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಬೇಕು. ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಎಲ್ಲಾ ಜನಪ್ರತಿನಿಧಿಗಳಿಗೂ ತಲುಪಿಸಬೇಕು. ಯಾವುದೇ ತೊಂದರೆಯಾಗದಂತೆ ಫಲಾನುಭವಿಗಳನ್ನು ವಿಶೇಷ ಕಾಳಜಿಯಿಂದ ಕಾರ್ಯಕ್ರಮದ ಸ್ಥಳಕ್ಕೆ ಕರೆತರಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮರಿಯಪ್ಪ ಮಾತನಾಡಿ, ಮಾರ್ಚ್ 5ರಂದು ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಅನುವಾಗುವಂತೆ ನಗರದಲ್ಲಿ ಸರ್ವೋದಯ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸೇರಿದಂತೆ 4 ಕಡೆ ಪಾರ್ಕಿಂಗ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಹೆಚ್.ಶಿವಪ್ಪ, ತಹಶೀಲ್ದಾರರು ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

(Visited 8 times, 1 visits today)