ತುಮಕೂರು
ಮಹಿಳಾ ದಿನದಂದು ಕೋಲಾರದ ಸಂಸದರು ಕುಂಕುಮವಿಡದ ಸುಜಾತಳಿಗೆ ಬೆದರಿಕೆ ಹಾಕಿರುವುದು ಅಜ್ಞಾನದ, ಸ್ತ್ರೀದ್ವೇಷದ ನಡೆಯಾಗಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
ಕುಂಕುಮ ಮದುವೆಯಾದ ಮೇಲೆ ಬರುವುದಲ್ಲ. ಅದೊಂದು ಅಲಂಕಾರ. ಮದುವೆಯಾದವರೂ, ಆಗದಿದ್ದವರೂ. ಹೆಣ್ಣುಗಳೂ ಗಂಡುಗಳೂ ತಮಗಿಷ್ಟದ ಆಕಾರ, ಬಣ್ಣಗಳ ಬೊಟ್ಟಿಡುತ್ತಾರೆ. ಅದು ಸಂಪೂರ್ಣ ಅವರವರ ಆಯ್ಕೆಗೆ ಬಿಟ್ಟದ್ದು. ಅದು ಅವರ ಹಕ್ಕು ಎಂದು ಒಕ್ಕೂಟ ಹೇಳಿದೆ.
ಇನ್ನೊಂದೆಡೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಮಹಿಳಾ ಲೇಖಕರಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಮಾಡದೇ ಇದ್ದುದಕ್ಕೆ ಪ್ರಶ್ನೆ ಮಾಡಿದ್ದ ನಿರ್ಮಲಾ ಎಲಿಗಾರ್ ಅವರ ಸದಸ್ಯತ್ಚವನ್ನು ಕ.ಸಾಪ. ಅಧ್ಯಕ್ಷರು ರದ್ದುಗೊಳಿಸಿದ್ದಾರೆ. ಇವೆರೆಡೂ ಮಹಿಳಾ ದೌರ್ಜನ್ಯದ ಬೀಜರೂಪಿ ಮನಃಸ್ಥಿತಿಯಾಗಿದೆ. ಸರ್ವಸಮಾನತೆ ಪ್ರತಿಪಾದಿಸುವ ಸಂವಿಧಾನಕ್ಕೆ ವಿರೋಧಿಯಾಗಿದೆ ಎಂದು ಒಕ್ಕೂಟ ಖಂಡಿಸಿದೆ.
ಜನಪ್ರತಿನಿಧಿಗಳು ತಾವು ಜನಸೇವಕರೇ ಹೊರತು ಸರ್ವಾಧಿಕಾರಿಗಳಲ್ಲ ಎಂದರಿತು ಮೊದಲು ಸಂವಿಧಾನವನ್ನು, ಬಾಬಾಸಾಹೇಬರನ್ನು ಸರಿಯಾಗಿ ಓದಿಕೊಳ್ಳಲಿ. ತಕ್ಷಣವೇ ಸಮಾಜದ ಕ್ಷಮೆ ಕೋರಲಿ. ಇಲ್ಲದಿದ್ದಲ್ಲಿ ಸಮತೆಯನ್ನು ಬಯಸುವ ಸ್ತ್ರೀಪುರುಷರೆಲ್ಲರೂ ತಕ್ಕಪಾಠ ಕಲಿಸುತ್ತಾರೆನ್ನುವುದನ್ನು ಮರೆಯದಿರಲಿ ಎಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಬಿಹಾ ಭೂಮಿಗೌಡ. ಬಾ.ಹ.ರಮಾಕುಮಾರಿ, ಸುಮನಾ ನೆಟ್ಟಾರ್, ವಾಣಿ ಪೆರಿಯೋಡಿ, ರತಿರಾವ್, ಅಖಿಲಾ ವಿದ್ಯಾಸಂದ್ರ, ಮಲ್ಲಿಗೆ ಸಿರಿಮನೆ, ಗೌರಿ, ಶಾಂತಮ್ಮ ಕೋಲಾರ, ಸಬಿತಾ ಬನ್ನಾಡಿ, ಎಚ್. ಎಸ್. ಅನುಪಮಾ, ರೇಖಾಂಬಾ ಟಿ.ಎಲ್., ಕಲ್ಯಾಣಿ ತುಮಕೂರು, ಅರುಂಧತಿ ಡಿ., ಮಲ್ಲಿಕಾ ಬಸವರಾಜು, ಎನ್.ಇಂದಿರಮ್ಮ, ರಾಮಕೃಷ್ಣಪ್ಪ, ಸುಗುಣಾದೇವಿ, ಸುನಂದಮ್ಮ. ಪ್ರವೇಣಿ, ರಾಣಿ ಚಂದ್ರಶೇಖರ್, ಚಂದ್ರಶೇಖರಯ್ಯ, ಸೈಯದ್ ಮುಜೀಬ್, ಅಜ್ಜಪ್ಪ ಎಂದು ಹೇಳಿದ್ದಾರೆ.