ತುಮಕೂರು
ಅಧ್ಯಯನಗಳ ಮೂಲಕ ಅನೇಕ ಬಿಕ್ಕಟ್ಟುಗಳು ಮತ್ತು ಸಾಮಾಜಿಕ ತೊಂದರೆಗಳನ್ನು ಸವಾಲಿನಂತೆ ಎದುರಿಸಿ ದೂರಮಾಡಬೇಕು ಎಂದು ವಿಮರ್ಶಕ ಪ್ರೊ. ಕೇಶವಶರ್ಮ ಕೆ. ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಕನ್ನಡ ವಿಭಾಗ, ಮಹಿಳಾ ಸಬಲೀಕರಣ ಘಟಕ ಹಾಗೂ ಸಾಂಸ್ಕøತಿಕ ಚಟುವಟಿಕೆಗಳ ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ‘ಸಮಕಾಲೀನ ಮಹಿಳೆ: ಸವಾಲು ಮತ್ತು ಸಾಧ್ಯತೆಗಳು’ ವಿಷಯದ ಕುರಿತು ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದಿನಿಂದಲೂ ನಮ್ಮ ಮನಸ್ಸು ಮತ್ತು ಪ್ರಜ್ಞೆಯನ್ನು ನಿಯಂತ್ರಿಸಲಾಗಿದೆ. ಚರಿತ್ರೆಯ ಉದ್ದಗಲಕ್ಕೂ ಹೆಣ್ಣು ಗಂಡು ಎಂಬ ಮನೋಭಾವವನ್ನು ಒಂದು ಅಚ್ಚಿನ ಎರಕದಲ್ಲಿ ಹೊಯ್ದು ಇಡಲಾಗಿದೆ. ಲಿಂಗತಾರತಮ್ಯ ನಮ್ಮನ್ನು ಆವರಿಸಿಕೊಂಡಿದೆ. ನಮಗೆ ಸಾಮಾನ್ಯ ಜ್ಞಾನದ ಅವಶ್ಯಕತೆ ಇದೆ ಎಂದರು.
ಪ್ರತಿ ಗಂಡು ಮತ್ತು ಹೆಣ್ಣಿನ ಸಂಬಂಧದ ನಡುವೆ ಮೌನ ಪ್ರಭಲವಾಗಿ ಆವರಿಸದೆ. ಅನೇಕ ಸಾಮಾಜಿಕ ಸವಾಲುಗಳನ್ನು ಸಕಾರಾತ್ಮಕ ಮನೋಭಾವನೆಯಿಂದ ಚರ್ಚಿಸಿ ದೂರಮಾಡಬೇಕಾಗಿದೆ ಎಂದು ಹೇಳಿದರು.
ತುಮಕೂರು ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ ಮಾತನಾಡಿ, ಇಂದಿನ ಸಮಕಾಲೀನ ಯುಗದಲ್ಲಿ ನಾವು ಸ್ತ್ರೀಯರನ್ನು ಯಾವ ದಿಕ್ಕಿನತ್ತ ನಡೆಸಬೇಕು ಎಂದು ತಿಳಿದಿರಬೇಕು. ಜಗತ್ತು ಮೌನವಾಗಿದೆ, ನಿಜ. ಆದರೆ, ಆ ಮೌನವನ್ನು ಮುರಿಯಬೇಕಾಗಿದೆ. ಆಗ ಮಾತ್ರ ಸಮಾನತೆ ಸಾಧ್ಯ ಎಂದರು.
ವಿಮರ್ಶಕರಾದ ಡಾ. ತಾರಿಣಿ ಶುಭದಾಯಿನಿ ‘ಜಾಗತಿಕ ಸ್ತ್ರೀವಾದ: ಉತ್ತರೋತ್ತರ’, ಡಾ. ಸುರೇಶ್ ನಾಗಲಮಡಿಕೆ ‘ಕನ್ನಡದಲ್ಲಿ ಪ್ರಚಲಿತವಿರುವ ಸ್ತ್ರೀವಾದದ ಚಹರೆ’, ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಪ್ರೊ. ಸುಶೀಲ ಎನ್. ‘ಮಹಿಳೆ ಮತ್ತು ಸಮಾಜ’, ಲೇಖಕಿ ಡಾ. ಚಂದ್ರಿಕಾ ಪಿ. ‘ಮಹಿಳೆ ಮತ್ತು ದೃಶ್ಯ ಮಾಧ್ಯಮ’ ವಿಚಾರಗಳ ಕುರಿತು ಮಾತನಾಡಿದರು.
ತುಮಕೂರು ವಿವಿ ಕಲಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ವೆಂಕಟರೆಡ್ಡಿ ರಾಮರೆಡ್ಡಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ತುಮಕೂರು ವಿವಿ ಕಲಾ ಕಾಲೇಜಿನ ಮಹಿಳಾ ಸಬಲೀಕರಣ ಘಟಕದ ಸಂಚಾಲಕಿ ಡಾ. ಎಚ್. ಆರ್. ರೇಣುಕ ನಿರೂಪಿಸಿದರು. ಸಾಂಸ್ಕøತಿಕ ಚಟುವಟಿಕೆಗಳ ಘಟಕದ ಸಂಚಾಲಕ ಡಾ. ಶಿವಣ್ಣ ಬೆಳವಾಡಿ ವಂದಿಸಿದರು.