ತುಮಕೂರು
ಆರೋಗ್ಯ ವರ್ಧಕ ಮತ್ತು ನೈಸರ್ಗಿಕ ಉಂಡೆ ಕೊಬ್ಬರಿ ಬೆಲೆ ತೀವ್ರ ಕುಸಿತದ ಹಿನ್ನೆಲಯಲ್ಲಿ ಕಳೆದ ಇಪ್ಪತ್ತೆಂಟು ದಿನಗಳಿಂದ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ, ತಿಪಟೂರು ಅಡಿಯಲ್ಲಿ ಕ್ವಿಂಟಾಲ್‍ಗೆ 20,000 ಕನಿಷ್ಟ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು ಮತ್ತು ರಾಜ್ಯ ಸರ್ಕಾರ ರೂ.5,000 ಪ್ರೋತ್ಸಾಹ ಧನವನ್ನು ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಹಾಗೂ ಅನಿರ್ಧಿಷ್ಟಾವಧಿ ಧರಣಿಯನ್ನು ತಿಪಟೂರು ಉಪವಿಭಾಗಾಧಿಕಾರಿಗಳ ಕಚೇರಿ ಎದುರು ನಡೆಸಲಾಗುತ್ತಿದೆ. ಆಡಳಿತ ಪಕ್ಷದ ಉಸ್ತುವಾರಿ ಸಚಿವರಾಗಲಿ, ಈ ನೆಲದಿಂದ ಆರಿಸಿ ಹೋಗಿ, ಮಂತ್ರಿಗಳಾಗಿರುವ ಬಿ.ಸಿ.ನಾಗೇಶ್ ಹಾಗೂ ಜೆ.ಸಿ. ಮಾಧುಸ್ವಾವಿಯವರಾಗಲೀ ಮಧ್ಯಪ್ರವೇಶ ಮಾಢಿ, ಹೋರಾಟ ಸ್ಥಳಕ್ಕೆ ಬಂದು ಅಧಿಕಾರದಲ್ಲಿ ಇರುವಾಗಲೇ ಸಮಸ್ಯೆ ಇತ್ಯರ್ಥ ಮಾಡಲು ಪ್ರಯತ್ನಿಸದೆ ಇರುವುದು ಜಿಲ್ಲೆಯ ರೈತರಿಗೆ ದೊಡ್ಡ ದ್ರೋಹ ಬಗೆದಂತಾಗಿದೆ. ಅಷ್ಟು ಮಾತ್ರವಲ್ಲ, ಆಡಳಿತ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವಾರು ರಾಜ್ಯ ಮುಖಂಡರನ್ನು ತಿಪಟೂರಿಗೆ ಚುನಾವಣಾ ಪ್ರಚಾರಕ್ಕೆ ಕರೆಸಿ ರೈತರ ಸಮಸ್ಯೆ ಆಲಿಸಬೇಕಾಗುತ್ತದೆ ಎಂದು ವಿಜಯ ಸಂಕಲ್ಪ ಯಾತ್ರೆಯ ಮಾರ್ಗವನ್ನೇ ಮಾರ್ಗವನ್ನೇ ಬದಲಿಸಿ ರೈತರ ಶ್ರಮಕ್ಕೆ ಅಪಮಾನ ಮಾಡಲಾಗಿದೆ. ಮಾತ್ರವಲ್ಲ, ಪ್ರಧಾನಿ ಮೋದಿಯವರು ಸಹ ಹಲವಾರು ಬಾರಿ ರಾಜ್ಯಕ್ಕೆ ಬಂದವರು ಕೃಷಿ ಅಭಿವೃದ್ಧಿ, ರೈತರ ಆದಾಯ ದ್ವಿಗುಣಗೊಳಿಸಲು ನೀಡಿರುವ ತಮ್ಮ ಭರವಸೆ ಬಗ್ಗೆ ವಿವರಿಸದೆ ದ್ವೇಷದ ಹಾಗೂ ಜನಸಾಮಾನ್ಯರಿಗೆ ಅನಗತ್ಯವಾದ ಭಾಷಣ ಮಾಡಿ, ಓಟಿನ ರಾಜಕಾರಣವನ್ನು ನಡೆಸಿದ್ದಾರೆ.
ತೆಂಗು ಬೆಳೆಗಾರರು ನಡೆಸುತ್ತಿರುವ ಹೋರಾಟವು ರಾಜ್ಯದ ಜನತೆಯ ಬೆಂಬಲವನ್ನು ಪಡೆಯುತ್ತಿದೆ. ತುಮಕೂರು, ಹಾಸನ, ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿದೆಡೆ ಹೋರಾಟಗಳು ರೈತ ಪರ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿದೆ. ಹೋರಾಟಕ್ಕೆ ಬೆಂಬಲ ನೀಡಲು ಧರಣಿಯ ಸ್ಥಳಕ್ಕೆ, ವೈದ್ಯರು, ಸ್ವಾಮೀಜಿಗಳು, ವಕೀಲರು, ಸಾಹಿತಿಗಳು, ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ಕಾಂಗ್ರೆಸ್ ಮತ್ತು ಜೆಡಿ (ಎಸ್) ನಾಯಕರು, ಸ್ಥಳೀಯ ಮುಖಂಡರು ತೆಂಗು ಬೆಳೆಗಾರರ ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇಷ್ಟೆಲ್ಲಾ ಹೋರಾಟಗಳು ನಡೆಯುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಸ್ವಲ್ಪವೂ ಸ್ಪಂದಿಸದೆ ಇರುವುದು ಅತ್ಯಂತ ಖಂಡನೀಯ. ಸರ್ಕಾರವು ನಾಡಿನ ಕೊಬ್ಬರಿ ಬೆಳೆಗಾರರನ್ನು ಮೇಲೆತ್ತಲು ಮುಂದೆ ಬರುತ್ತಿಲ್ಲ. ಕನಿಷ್ಟ ಬೆಂಬಲ ಬೆಲೆಯನ್ನು ಪುಡಿಗಾಸಿನಷ್ಟು ಏರಿಸಿ, ರೈತರ ಮೂಗಿಗೆ ತುಪ್ಪ ಸವರುತ್ತಿದೆ. ರಾಜ್ಯ ಸರ್ಕಾರವೂ ರೈತರ ಬೆಂಬಲಕ್ಕೆ ನಿಂತು ಪ್ರೋತ್ಸಾಹ ಧನವನ್ನೂ ನೀಡುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಬೆನ್ನೆಲುಬನ್ನೇ ಮುರಿಯುತ್ತಿವೆ. ಈ ನಿಟ್ಟಿನಲ್ಲಿ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿಯು ತನ್ನ ಹಕ್ಕೊತ್ತಾಯಗಳನ್ನು ಈಡೇರಿಸಲು ತೀವ್ರ ಹೋರಾಟ ನಡೆಸುವ ಉದ್ದೇಶದಿಂದ 2023ರ ಮಾರ್ಚ್ 24 ರಂದು ತಿಪಟೂರಿನಲಿವ್ಲ್ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಸ್ವಾಭಿಮಾನಿ ಸಮಾವೇಶವನ್ನು ಸಂಘಟಿಸುತ್ತಿದೆ. ಈ ಸಮಾವೇಶಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ ಮತ್ತು ರೈತ ನಾಯಕರುಗಳಾದ ಕೆ.ಟಿ.ಗಂಗಾಧರ್, ಬಡಗಲಪುರ ನಾಗೇಂದ್ರ, ಚುಕ್ಕಿ ನಂಜುಂಡಸ್ವಾಮಿ, ಚಾಮರಸ ಪಾಟೀಲ್ ಎಸ್. ಪಾಟೀಲ್, ಸಿದ್ದನಗೌಡ ಪಾಟೀಲ್, ಜೆ.ಸಿ.ಬೈಯಾರೆಡ್ಡಿ, ಹೆಚ್.ವಿ.ದಿವಾಕರ್, ಮಂಜೇಗೌಡ, ಬಿ.ಯೋಗೀಶ್ವರಸ್ವಾಮಿ, ಸಿ;ಯತಿರಾಜು ಮಾತನಾಡಲಿದ್ದಾರೆ.