ತುಮಕೂರು
ವಿಶ್ವ ಕ್ಷಯರೋಗ ದಿನದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದಲ್ಲಿ ಜನಜಾಗೃತಿ ಜಾಥಾ ನಡೆಸಲಾಯಿತು.
ನಗರದ ಟೌನ್‍ಹಾಲ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಜಾಥಾಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ್ ಮತ್ತು ಐಎಂಎ ಅಧ್ಯಕ್ಷ ಡಾ. ಚಂದ್ರಶೇಖರ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಡಿಹೆಚ್‍ಓ ಡಾ. ಮಂಜುನಾಥ್ ಅವರು, 1882 ಮಾರ್ಚ್ 24 ರಂದು ವಿಜ್ಞಾನಿ ರಾಬರ್ಟ್ ಕಾಕ್ ಎಂಬುವರು ಕ್ಷಯ ರೋಗವನ್ನು ಕಂಡು ಹಿಡಿದರು. ಅಂದಿನಿಂದಲೂ ಪ್ರಪಂಚದಾದ್ಯಂತ ವಿಶ್ವಕ್ಷಯ ರೋಗ ದಿನವನ್ನು ಪ್ರತಿ ವರ್ಷವೂ ಒಂದೊಂದು ಘೋಷವಾಕ್ಯದಡಿ
ಆಚರಿಸಲಾಗುತ್ತಿದೆ. ಈ ಬಾರಿ “ಕ್ಷಯ ರೋಗವನ್ನು ಕೊನೆಗಾಣಿಸಬಹುದು” ಎಂಬ ಘೋಷ ವಾಕ್ಯದಡಿ ವಿಶ್ವ ಕ್ಷಯ ರೋಗ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಕ್ಷಯ ರೋಗ ನಿರ್ಮೂಲನೆ ಕಾರ್ಯಕ್ರಮದಡಿ ಇಡೀ ರಾಜ್ಯದಲ್ಲೇ ತುಮಕೂರು ಜಿಲ್ಲೆ 2ನೇ ಸ್ಥಾನದಲ್ಲಿ ಆಯ್ಕೆಯಾಗಿದ್ದು, ಈ ಬಾರಿ ಬೆಳ್ಳಿ ಪದಕವನ್ನು ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಈ ಕ್ಷಯರೋಗವನ್ನು ಮತ್ತಷ್ಟು ತಡೆಗಟ್ಟುವ ಮೂಲಕ ಚಿನ್ನದ ಪದಕ ಪಡೆದುಕೊಳ್ಳುವತ್ತ ನಾವೆಲ್ಲಾ ಗಮನ ಹರಿಸಬೇಕಿದೆ ಎಂದರು.
ಜನರಿಗೆ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸುವುದರಿಂದಲೇ ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟಬಹುದು. ಇದು ಕೇವಲ ಶ್ವಾಸಕೋಶ ಮಾತ್ರವಲ್ಲ, ಕಣ್ಣು, ಕಿವಿ ಸೇರಿದಂತೆ ದೇಹದ ಎಲ್ಲ ಭಾಗಗಳಿಗೂ ಹರಡುತ್ತದೆ. ಆದ್ದರಿಂದ ಸರಿಯಾದ ಚಿಕಿತ್ಸೆ ನೀಡುವುದರಿಂದ ಈ ಕಾಯಿಲೆಯನ್ನು ಗುಣಪಡಿಸಬಹುದಾಗಿದೆ ಎಂದರು.
ಕ್ಷಯ ರೋಗದಿಂದ ಬಳಲುತ್ತಿರುವವರನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವುದು ನಮ್ಮ ಉದ್ದೇಶವಾಗಿದೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದವರಲ್ಲಿ ಕ್ಷಯ ರೋಗ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಕೊಡುವ ಕೆಲಸವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ ಎಂದರು.
ಕ್ಷಯರೋಗ ಅಧಿಕಾರಿ ಡಾ. ಸನತ್‍ಕುಮಾರ್ ಮಾತನಾಡಿ, 1882 ರಲ್ಲಿ ವಿಜ್ಞಾನಿ ರಾಬರ್ಟ್ ಕಾಕ್ ಅವರು ರೋಗವನ್ನು ಕಂಡು ಹಿಡಿದ ದಿನ. ಹಾಗಾಗಿ ಪ್ರತಿ ವರ್ಷವೂ ಮಾ. 24ನ್ನು ವಿಶ್ವ ಕ್ಷಯರೋಗ ದಿನವನ್ನು ಆಚರಿಸಲಾಗುತ್ತಿದೆ. ಶೇ. 45 ರಷ್ಟು ಕ್ಷಯರೋಗಿಗಳು ಇಳಿಮುಖವಾಗಿರುವುದರಿಂದ ಕೇಂದ್ರ ಸರ್ಕಾರ ಬೆಳ್ಳಿಪದಕವನ್ನು ನೀಡುತ್ತಿದೆ ಎಂದರು.
ಕ್ಷಯ ರೋಗಿಗಳಿಗೆ ಚಿಕಿತ್ಸೆ ಮತ್ತು ಪರೀಕ್ಷೆ ಸಂಪೂರ್ಣ ಉಚಿತವಾಗಿರುತ್ತದೆ. ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆದರೆ ಬಹುಬೇಗ ಗುಣಮುಖರಾಗಬಹುದು. ದೀರ್ಘಾವಧಿ, ಕೆಮ್ಮು, ಕಡಿಮೆ ತೂಕ ಇದ್ದರೆ ಹತ್ತಿರದ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ಷಯ ರೋಗಿಗಳಿಗೆ 6 ತಿಂಗಳಿನಿಂದ 12 ತಿಂಗಳವರೆಗೂ ಚಿಕಿತ್ಸೆ ಉಚಿತವಾಗಿರುತ್ತದೆ. ಕೆಮ್ಮಿದಾಗ, ಸೀನಿದಾಗ ಕರವಸ್ತ್ರ ಬಳಸಬೇಕು. ಹೀಗೆ ಮಾಡುವುದರಿಂದ ಒಬ್ಬರಿಂದ ಒಬ್ಬರಿಗೆ ಈ ರೋಗ ಹಡುವುದನ್ನು ತಪ್ಪಿಸಬಹುದು ಎಂದು ಅವರು ಹೇಳಿದರು.
ನಗರದ ಟೌನ್‍ಹಾಲ್ ವೃತ್ತದಿಂದ ಆರಂಭವಾದ ಕ್ಷಯ ರೋಗದ ಅರಿವು ಮೂಡಿಸುವ ಜಾಥಾವು ಅಶೋಕ ರಸ್ತೆ, ಜಿಲ್ಲಾಧಿಕಾರಗಳ ಕಚೇರಿ ಮುಖೇನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ತಲುಪಿತು.
ಜಾಥಾದಲ್ಲಿ ಕ್ಷಯರೋಗ ಅಧಿಕಾರಿ ಡಾ. ಸನತ್‍ಕುಮಾರ್, ಐಎಂಎ ಅಧ್ಯಕ್ಷರಾದ ಡಾ. ಚಂದ್ರಶೇಖರ್, ಡಾ. ರೇಖಾ, ಆರೋಗ್ಯ ಸಮಿತಿ ಸದಸ್ಯ ಎಂ. ಗೋಪಿ, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿವರ್ಗ ಪಾಲ್ಗೊಂಡಿದ್ದರು.