ತುಮಕೂರು :

      ತುಮಕೂರು ನಗರದವರೆಗೂ ಮೆಟ್ರೋ ರೈಲು ಸಾರಿಗೆಯನ್ನು ವಿಸ್ತರಿಸಲು ಚಿಂತನೆ ನಡೆಸಿದ್ದು, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅನಗತ್ಯ ಕಾಮಗಾರಿಗಳನ್ನು ತೆಗೆದುಕೊಳ್ಳದೆ ರಸ್ತೆ, ಚರಂಡಿ ಸೇರಿದಂತೆ ಅತ್ಯಗತ್ಯವಾಗಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಎಂದು ಉಪ ಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ ಅವರು ಇಂದಿಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ತುಮಕೂರು ನಗರದಲ್ಲಿಂದು ವರ್ತುಲ ರಸ್ತೆಯ ಜೀರ್ಣೋದ್ದಾರ, ಸ್ಮಾರ್ಟ್ ರಸ್ತೆ ನಿರ್ಮಾಣಗಳಿಗೆ ಶಂಕುಸ್ಥಾಪನೆ, ಸ್ಮಾರ್ಟ್ ಲಾಂಜ್ ಸೇರಿದಂತೆ ಸ್ಮಾರ್ಟ್ ಸಿಟಿ ಯೋಜನೆಯ ಮೊದಲ ಹಂತದ 195 ಕೋಟಿ ರೂ. ವೆಚ್ಚ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿದ ಬಳಿಕ ಅವರು ಮಾತನಾಡಿದರು.

      ಮೆಟ್ರೊ ರೈಲನ್ನು ತುಮಕೂರು ನಗರದವರೆಗೂ ವಿಸ್ತರಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ತುಮಕೂರು ನಗರದಲ್ಲಿ ಪ್ರತಿದಿನ 50 ಸಾವಿರ ಜನ ಓಡಾಡುತ್ತಾರೆ ಮೆಟ್ರೊ ವಿಸ್ತರಣೆ ನಮ್ಮ ಕನಸು. ವೈಫೈ ಸೇರಿದಂತೆ ಎಲ್ಲಾ ಆಧುನಿಕ ಸೌಲಭ್ಯಗಳು ತುಮಕೂರಿನಲ್ಲಿ ಸಿಗುವಂತಾಗಬೇಕು. ಕಳೆದ 2 ವರ್ಷದಿಂದ ಪುಸ್ತಕದಲ್ಲಿಯೇ ಇದ್ದ ಸ್ಮಾರ್ಟ್ ಸಿಟಿ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಸ್ಮಾರ್ಟ್ ಎಂದಾಕ್ಷಣ ಏನೊ ಹೊಸ ಚಮತ್ಕಾರ ಎಂದು ಭಾವಿಸಬೇಕಿಲ್ಲ, ಎಲ್ಲಾ ಮೂಲಸೌಕರ್ಯ ಒಳಗೊಂಡಿರುವ ನಗರವಾಗಬೇಕು ಹಳ್ಳಿ, ಪಟ್ಟಣ ಹಾಗೂ ನಗರದಲ್ಲೂ ಒಂದೇ ರೀತಿ ಮೂಲಭೂತ ಸೌಕರ್ಯ ಇರಬೇಕು ಎಂದರು.

      2006ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಗಳಾಗಿದ್ದಾಗ ಈ ಚಿಂತನೆ ಆರಂಭವಾಯಿತು, ಪ್ರಧಾನಿ ಮೋದಿಯವರು ಶೇ.100ರಷ್ಟು ಹಣ ನೀಡಬಹುದಿತ್ತು, ಆದರೆ ರಾಜ್ಯಕ್ಕೂ ಜವಾಬ್ಧಾರಿ ಇರಲಿ ಎಂಬ ಕಾರಣಕ್ಕೆ ರಾಜ್ಯದಿಂದಲೂ ಶೇ.50ರಷ್ಟು ಪಾಲು ಪಡೆದಿದ್ದಾರೆ. ತುಮಕೂರು ನಗರದಲ್ಲಿ ರಸ್ತೆ ಹಾಗೂ ಚರಂಡಿಗಳಾಗಬೇಕು, ಚಿಕ್ಕಪೇಟೆ, ಬಾರ್‍ಲೈನ್ ರಸ್ತೆಗಳು ಇಂದಿಗೂ ಕಿರಿದಾಗಿವೆ. ನಗರದ ಮುಖ್ಯರಸ್ತೆಯೇ ಕಳಪೆಯಾಗಿದೆ ಎಲ್ಲಾ ಮಹಾನಗರ ಪಾಲಿಕೆಗಳಲ್ಲಿಯೇ ತುಮಕೂರು ಅತೀ ಹೆಚ್ಚು ಹಿಂದುಳಿದಿದೆ. ಇಲ್ಲಿಯ ರಸ್ತೆ ಚರಂಡಿಗಳು ಅಭಿವೃದ್ಧಿಯಾಗಬೇಕಿವೆ ಎಂದು ಅವರು ಹೇಳಿದರು.

      ರಾಮನಗರ, ಕೋಲಾರ ನಗರಗಳಿಗಿಂತ ತುಮಕೂರು ನಗರವು ಬೆಂಗಳೂರು ನಗರಕ್ಕೆ ಪರ್ಯಾಯವಾಗಿದ್ದು, ಸೂಕ್ತವಾಗಿದೆ. ತುಮಕೂರು ಶರವೇಗದಲ್ಲಿ ಬೆಳೆಯುತ್ತಿದೆ, ಭವಿಷ್ಯವಿದೆ ಹಾಗಾಗಿ, ಸ್ಥಳೀಯರು ಬಳಸಿಕೊಳ್ಳಬೇಕು. ತುಮಕೂರು ಎಜುಕೇಷನ್ ಹಬ್, ಹೆಬ್ಬಾಕ, ಮರಳೂರು ಕೆರೆಗಳ ಸಾಮಥ್ರ್ಯ ಹೆಚ್ಚಿಸಿಕೊಂಡು ನಗರಕ್ಕೆ ನೀರು ಪೂರೈಕೆ ಮಾಡಲು ಬಳಸಿಕೊಳ್ಳಬೇಕು ಎಂದರು.

      ಬೆಂಗಳೂರು ನಗರದಲ್ಲಿ 1.30ಕೋಟಿ ಜನರಿದ್ದಾರೆ ಮೂಲಸೌಕರ್ಯ ಒದಗಿಸುವುದು ಕಷ್ಟವಾಗಿದೆ. ತುಮಕೂರು ನಗರದಲ್ಲಿ ದುಭಾರಿ ಖರ್ಚುಮಾಡಿ ಕಾರ್ಯಕ್ರಮ ರೂಪಿಸಬೇಡಿ, ಯೋಜನೆ ತಡವಾಗಿರುವುದನ್ನು ಪರಿಶೀಲಿಸಲು ಮುಖ್ಯ ಕಾರ್ಯದರ್ಶಿ ಗೆ ಸೂಚಿಸಿದ್ದೇನೆ. ಗುಣಮಟ್ಟದ ಕೆಲಸವಾಗಬೇಕು, ಸುಮ್ನನೆ ಸುಣ್ಣ ಬಳಿಯುವ ಕೆಲಸವಾಗಬಾರದು ಎಂದು ಅವರು ಹೇಳಿದರು.

      ನಗರಾಭಿವೃದ್ಧಿ ಸಚಿವ ಯು.ಟಿ.ಅಬ್ದುಲ್ ಖಾದರ್ ಮಾತನಾಡಿ, ನಗರದ ಆಸ್ತಿ ನಿರ್ಮಿಸುವ ಕೆಲಸ ಸ್ಮಾರ್ಟ್ ಸಿಟಿ ಯೋಜನೆಯಿಂದಾಗಬೇಕು. 2 ಸಾವಿರ ಕೋಟಿ ರೂ. ಮುಂದೆ 10 ಸಾವಿರ ಕೋಟಿ ಆಸ್ತಿಯಾಗಬೇಕು. ಬಂಡವಾಳ ಹಾಕಿದರೆ ಲಾಭ ಬರಬೇಕು ಹಾಗೆಯೇ ನಗರದಲ್ಲಿ ಆಸ್ತಿ ನಿರ್ಮಾಣ ಮಾಡಬೇಕು. ಆಲೋಚನೆಯಲ್ಲಿಯೂ ನಗರವಾಸಿಗಳು ಸ್ಮಾರ್ಟ್ ಆಗಲಿ, ನಗರಾಭಿವೃದ್ಧಿ ಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

      ಘನತ್ಯಾಜ್ಯದ ಬಗ್ಗೆಯೂ ಜಾಗೃತಿ ಅಗತ್ಯವಿದೆ, ಮೂಲಭೂತ ಸೌಕರ್ಯ ಕೇಳುವವರು ತೆರಿಗೆಯನ್ನು ಸರಿಯಾಗಿ ಕಟ್ಟಬೇಕು. ನಗರದಲ್ಲಿರುವ ಶ್ರೀಮಂತರೇ ಹೆಚ್ಚು ತೆರಿಗೆ ಉಳಿಸಿಕೊಂಡಿದ್ದಾರೆ ಇದನ್ನು ತಡಯಲೆಂದೇ ಹೊಸ ಕಾನೂನು ಜಾರಿಗೆ ತರುವ ಚಿಂತನೆಯಿದೆ ಎಂದು ಅವರು ಹೇಳಿದರು.
ವಸತಿ ನಿರ್ಮಿಸುವವರಿಗೆ ಯಾರಿಗೂ ಕಿರುಕುಳವಾಗದಂತೆ ನಿಯಮ ಸರಳೀಕೃತವಾಗಿಸಲಾಗುವುದು. ಆನ್ ಲೈನ್ ಅರ್ಜಿ ಹಾಕಿದರೆ ಒಂದು ತಿಂಗಳಲ್ಲಿ ಅನುಮತಿ ನೀಡುವ ಏಕ ಗವಾಕ್ಷಿ ಯೋಜನೆ ಮುಂದಿನ ಒಂದು ವಾರದಲ್ಲಿ ಜಾರಿಯಾಗಲಿದೆ ಎಂದು ತಿಳಿಸಿದರು.  

      ಜನಸಾಮಾನ್ಯರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಮೊಬೈಲ್ ಟವರ್ ಲಾಬಿಗೆ ಕಡಿವಾಣ ಹಾಕಲಾಗುವುದು. ಅಕ್ರಮ ಕಟ್ಟಡ ನಿರ್ಮಾಣಕ್ಕೆ ಪ್ರಚೋದನೆ ನೀಡುವ ಅಧಿಕಾರಿಗೂ ಶಿಕ್ಷೆ ಯಾಗುವ ಕಾನೂನು ಜಾರಿಯಾಗಲಿದೆ ಎಂದು ಅವರು ಹೇಳಿದರು.

      ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಬೆಂಗಳೂರು ಮೇಲಿನ ಒತ್ತಡ ಕಡಿಮೆ ಮಾಡಲು ಪರ್ಯಾಯ ನಗರವಾಗಿ ತುಮಕೂರು ಬೆಳೆಯಲೇಬೇಕು. ಈ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಬಳಸಿಕೊಳ್ಳಬೇಕು ಎಂದರು.

 

     ಇಸ್ರೋ, ಎಚ್.ಎ.ಎಲ್. ತುಮಕೂರು ಜಿಲ್ಲೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ, ವೇಗವಾಗಿ ಬೆಳೆಯುತ್ತಿರುವ ತುಮಕೂರು ಸ್ಮಾರ್ಟ್ ಸಿಟಿಯಾಗಬೇಕು.

      ಪಾಸ್‍ಪೋರ್ಟ್ ಕಛೇರಿ ಆರಂಭವಾದ ಐದು ತಿಂಗಳಲ್ಲಿ ಹತ್ತು ಸಾವಿರ ಪಾಸ್‍ ಪೋರ್ಟ್ ಗಳನ್ನು ವಿತರಣೆ ಮಾಡಲಾಗಿದೆ. ಎಲ್ಲಾ ಪೂರಕ ಯೋಜನೆಗಳು ಇಡೀ ಜಿಲ್ಲೆ, ರಾಜ್ಯ, ದೇಶದ ಆಸ್ತಿಯಾಗಿ ತುಮಕೂರು ಸಿಟಿ ಬಿಂಬಿಸಿಕೊಳ್ಳಲಿದೆ, ತುಮಕೂರನ್ನು ವ್ಯವಸ್ಥಿತವಾಗಿ ನಿರ್ಮಿಸಲು ನಾಗರೀಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

      ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ತುಮಕೂರು ಆರೋಗ್ಯವಾಗಿರಲು ರಸ್ತೆ ಅಭಿವೃದ್ಧಿ, ಘನತ್ಯಾಜ್ಯ ನಿರ್ವಹಣೆ, ಆರೋಗ್ಯ ಶಿಕ್ಷಣ, ಬೀದಿದೀಪ ನಿರ್ವಹಣೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ. ಯಾವುದೇ ಕಾಮಗಾರಿ ಆರಂಭಿಸುವ ಮುನ್ನ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಅವರಿಗೆ ಆ ವಾರ್ಡಿನ ಸಮಸ್ಯೆಯ ಅರಿವು ಇರುತ್ತದೆ. ತುಮಕೂರು ಸ್ಮಾರ್ಟ್ ಸಿಟಿ ಯೋಜನೆಗೆ ನಮ್ಮ ಸಹಕಾರವಿದೆ, ಡಿಸಿಎಂ ನಮ್ಮ ಜಿಲ್ಲೆಯವರೇ ಆಗಿದ್ದು ಬಳಸಿಕೊಳ್ಳೊಣ ಎಂದರು.

      ಸಮಾರಂಭದಲ್ಲಿ ಮಾಜಿ ಶಾಸಕ ಡಾ.ರಫೀಕ್ ಅಹಮದ್, ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿ.ಪಂ. ಸಿಇಒ ಅನ್ನಿಸ್ ಕೆ.ಜಾಯ್, ಪೊಲೀಸ್ ಅಧೀಕ್ಷಕಿ ಡಾ.ದಿವ್ಯಾ ಗೋಪಿನಾಥ್ ಮತ್ತಿತರರು ಹಾಜರಿದ್ದರು.

(Visited 23 times, 1 visits today)