ತುಮಕೂರು
ಚುನಾವಣಾ ಅಕ್ರಮಗಳ ಆರೋಪದಡಿ ತುಮಕೂರು ಗ್ರಾಮಾಂತರ ಶಾಸಕ
ಗೌರಿಶಂಕರ್ ಆಯ್ಕೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿದೆ. ಈ ಕುರಿತಂತೆ ಮಹತ್ವದ ತೀರ್ಪನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಕಲಬುರ್ಗಿ ಪೀಠದಿಂದ ಪ್ರಕಟಿಸಿದೆ.
ಚುನಾವಣೆ ವೇಳೆ ಮತದಾರರಿಗೆ ಇನ್ಸೂರೆನ್ಸ್ ಪಾಲಿಸಿಯ ಆಮಿಷ ನೀಡಿ ಜಯಗಳಿಸಿದ್ದ ಆರೋಪ ಗೌರಿಶಂಕರ್ ಮೇಲಿತ್ತು. ಗೌರಿಶಂಕರ್ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸುವಂತೆ ಪರಾಜಿತ ಅಭ್ಯರ್ಥಿ ಸುರೇಶ್ ಗೌಡ ಅರ್ಜಿ ಸಲ್ಲಿಸಿದ್ದರು.
32 ಸಾವಿರ ವಯಸ್ಕರು ಹಾಗೂ 16 ಸಾವಿರ ಮಕ್ಕಳಿಗೆ ನಕಲಿ ವಿಮಾ ಪಾಲಿಸಿ ಬಾಂಡ್ ವಿತರಿಸಿದ್ದಾರೆ. 2018ರ ಚುನಾವಣೆಯಲ್ಲಿ ನಕಲಿ ಬಾಂಡ್ ಆಮಿಷ ಒಡ್ಡಿ ಅಕ್ರಮವಾಗಿ ಗೆದ್ದಿದ್ದಾರೆ ಎಂದು ಅರ್ಜಿ ಸಲ್ಲಿಸಲಾಗಿತ್ತು.
ಬಿ.ಸುರೇಶ್ ಗೌಡ ಪರ ಹಿರಿಯ ವಕೀಲೆ ನಳಿನಾ ಮಾಯೇಗೌಡ ಸುದೀರ್ಘ ವಾದ ಮಂಡಿಸಿದ್ದರು. ಇನ್ನು ತೀರ್ಪು ಹೊರಬೀಳುತ್ತಲೇ ಗೌರಿಶಂಕರ್ ಪರ ವಕೀಲ ಆರ್.ಹೇಮಂತ್ ರಾಜ್, ವಿಧಾನಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆ ತೀರ್ಪಿಗೆ ತಡೆ ನೀಡಬೇಕು ಎಂದು ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಾಲಯ 30 ದಿನಗಳ ಕಾಲ ಆದೇಶಕ್ಕೆ ತಡೆ ನೀಡಿದೆ.
ನ್ಯಾಯಾಲಯ ಶಾಸಕ ಆಯ್ಕೆಯನ್ನು ಅಸಿಂಧುಗೊಳಿಸಿರುವ ಹಿನ್ನೆಲೆಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ ಗೌರಿಶಂಕರ್ ಮುಂದಿನ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹರಾಗಬಹುದು. ಈಗಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗಬೇಕು ಎಂದ ಅವರು ತೀರ್ಪನ್ನು ಪ್ರಶ್ನಿಸಿ 30 ದಿನಗಳಲ್ಲಿ ಸುಪ್ರೀಂಕೋರ್ಟ್‍ಗೆ ಮನವಿ ಸಲ್ಲಿಸಬೇಕಾಗಿದೆ.
ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮಾಜಿ ಶಾಸಕ ಸುರೇಶ್ ಗೌಡ ‘2018 ರ ಎಂಎಲ್‍ಎ ಚುನಾವಣೆಯಲ್ಲಿ ಈಗಿನ ಶಾಸಕರು ಸುಮಾರು 16 ಸಾವಿರ ಮಕ್ಕಳಿಗೆ ಪಾಲಿಸಿ ಇನಶೂರೆನ್ಸ್ ಬಾಂಡ್ ವಿತರಣೆ ಮಾಡಿದ್ರು. ಅದು ನಕಲಿ ಬಾಂಡ್ ನೀಡಿ ಆಮಿಷವೊಡ್ಡಿ ಮತದಾರರನ್ನ ಸೆಳೆಯುವ ಕೆಲಸ ಮಾಡಿದ್ರು. ನಕಲಿ ಬಾಂಡ್‍ಗಳನ್ನ ವಿತರಣೆ ಮಾಡುವ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು ಚುನಾವಣಾ ಅಧಿಕಾರಿಗಳಿಗೆ ಚುನಾವಣಾ ಅಕ್ರಮ ಎಸಗಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ರು, ಕಳೆದ 2018 ರ ಮೇ 12 ಕ್ಕೆ ಚುನಾವಣೆ ಇತ್ತು. ಮೇ 8 ಕ್ಕೆ ನಕಲಿ ಬಾಂಡ್ ರದ್ದು ಮಾಡ್ತಾರೆ. ಇದಾದ ಬಳಕ ಹಿರೇಹಳ್ಳಿ ಮಹೇಶ್ ಹಾಗೂ ಶಾರದಮ್ಮ ಎಂಬುವವರು ಸುದ್ದಿಗೊಷ್ಠಿ ನಡೆಸಿ ಇದು ಒರಿಜಿನಲ್ ಬಾಂಡ್, ನಕಲಿ ಅಲ್ಲಾ ಎಂದು ಹೇಳುತ್ತಾರೆ. ಗೂಳೂರಿನ ಜಿಲ್ಲಾ ಪಂಚಾಯ್ತಿ ಸದಸ್ಯ ಪಾಲನೆತ್ರಯ್ಯ ಎಂಬಾತ ಬಾಂಡ್ ಗಳನ್ನ ತಮ್ಮ ಕಾರಿನಲ್ಲಿ ತೆಗೆದುಕೊಂಡು ಹೋಗುವಾಗ ರೇಡ್ ಹ್ಯಾಂಡ್ ಆಗಿ ಸಿಕ್ಕಿ ಬಿಳ್ತಾರೆ. ಚುನಾವಣಾ ಅಕ್ರಮ ನಡೆಸಿದ್ರೆ 45 ದಿನದ ಒಳಗೆ, ಚುನಾವಣಾ ಆಯೋಗಕ್ಕೆ ನಾವು ತಕರಾರು ಅರ್ಜಿ ಸಲ್ಲಿಸಬೇಕು. ನಾವು ಆ ತಕರಾರು ಅರ್ಜಿ ಸಲ್ಲಿಸಿದ್ದೆವು.
ತಿಂಗಳಲ್ಲಿ ತಿರ್ಪು ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಇಷ್ಟು ದಿನ ಸಮಯ ಹಿಡಿತು.
ಇದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಹೈಕೋರ್ಟ್ ರಿಜೆಕ್ಟ್ ಮಾಡಿ ತನಿಖೆಗೆ ಸಹಕರಿಸುವಂತೆ ನಮಗೆ ಮಾಹಿತಿ ಕೊಡ್ತು. ಕರೋನಾ ಹಿನ್ನೆಲೆಯಲ್ಲಿ ಒಂದೂವರೆ ವರ್ಷಗಳ ಕಾಲ ಕೋರ್ಟ್ ಮುಚ್ಚಿತ್ತು. ಹೀಗಾಗಿ ತಿರ್ಪು ಬರಲು ತಡವಾಯ್ತು. ಇವತ್ತು ನಕಲಿ ಬಾಂಡ್ ಕೇಸ್ ಬಗ್ಗೆ ತೀರ್ಪು ಬಂದಿದೆ. ಗೌರಿಶಂಕರ್ ಅವರನ್ನ ಶಾಸಕ ಸ್ಥಾನದಿಂದ ಅನರ್ಹ ಮಾಡೋಕು ಅಂತ ನ್ಯಾಯಾಲಯ ತಿರ್ಪು ನೀಡಿದ್ದು ನಾನು ಅದನ್ನ ಸ್ವಾಗತ ಮಾಡ್ತಿನಿ. ಇವತ್ತು ರಾಮನವಮಿ ದಿನವೇ ತಿರ್ಪು ಬಂದಿದೆ. ಸತ್ಯಕ್ಕೆ ಜಯ ಸಿಕ್ಕಿದೆ. ಅಕ್ರಮ ಎಸಗಿ ಚುನಾವಣೆ ನಡೆಸಬಾರದು ಎಂಬ ಸಂದೇಶವನ್ನ ಕೊಟ್ಟಿದೆ. ಈಗ ಅವರಿಗೆ ಒಂದು ತಿಂಗಳ ಕಾಲ ಮೇಲ್ಮನವಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಗೌರಿಶಂಕರ್ ಜೊತೆ ಇನ್ನು ಐದು ಜನ ಅನರ್ಹರಾಗಿದ್ದಾರೆ. ಹಿರೇಹಳ್ಳಿ ಮಹೇಶ್, ರೇಣುಕಮ್ಮ, ಪಾಲನೇತ್ರಯ್ಯ. ಸೇರಿದಂತೆ ಐದು ಜನ ಅನರ್ಹರಾಗಿದ್ದಾರೆ. ಇವತ್ತಿನಿಂದಲೇ ಅವರ ಸ್ಥಾನ ಅನರ್ಹ ಆಗುತ್ತೆ. ತಪ್ಪು ಮಾಡಿದ್ರೆ ಪ್ರತಿಯೊಬ್ಬರಿಗೂ ಶಿಕ್ಷೆ ಆಗುತ್ತೆ ಅನ್ನೋದಿಕ್ಕೆ ಇದೊಂದು ಐತಿಹಾಸಿಕ ತಿರ್ಪು ಸಾಕ್ಷಿ’’ ಎಂದು ಹೇಳಿದ್ದಾರೆ.