ತುಮಕೂರು


ಕಾರ್ಯಾಗಾರಗಳು ನಾಳಿನ ಕರ್ತವ್ಯಗಳನ್ನು ತಿಳಿಸಿ ಸಂಶೋಧನೆಗೆ ಪೂರಕವಾಗುವ ಕಲಿಕೆಯಲ್ಲಿನ ಅಗತ್ಯ ಬದಲಾವಣೆಗಳನ್ನು ಅಳವಡಿಸಿಕೊಳ್ಳುವಲ್ಲಿ ಸಹಕಾರಿಯಾಗುತ್ತದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜೀವರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಗಣೇಶ್ ನಾಗರಾಜು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯ ವಿವಿ ವಿಜ್ಞಾನ ಕಾಲೇಜಿನ ಜೀವ ರಸಾಯನಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಆಹಾರ ವಿಜ್ಞಾನ ಮತ್ತು ಪೌಷ್ಠಿಕಾಂಶ ಅಧ್ಯಯನ ವಿಭಾಗ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಜೀವರಸಾಯನಶಾಸ್ತ್ರ ಮತ್ತು ಆಹಾರ ವಿಜ್ಞಾನದಲ್ಲಿ ಇತ್ತೀಚಿನ ಆವಿಷ್ಕಾರಗಳು’ ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ನಿರಂತರ ವಿಷಯಾಭ್ಯಾಸ, ಉನ್ನತ ಶಿಕ್ಷಣ, ಅಧ್ಯಯನ, ಸಂಶೋಧನೆ ದೇಶಕ್ಕೆ ಕೊಡುಗೆಯಾಗಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಅವಶ್ಯಕತೆಗೆ ಅನುಗುಣವಾಗಿ ಸಂಶೋಧನೆಗಳಿಂದ ಅಗತ್ಯ ಪೂರೈಕೆಯಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ರಸಾಯನಶಾಸ್ತ್ರ ವಿಜ್ಞಾನದ ಕೇಂದ್ರಬಿಂದು. ಗುಣಮಟ್ಟದ ಸಂಶೋಧನೆಗಳಾಗಬೇಕು. ಆ ಸಂಶೋಧನೆಗಳು ಮಾನವ ಕುಲಕ್ಕೆ ಅನ್ವಯವಾಗಬೇಕು. ವಿಶ್ವವಿದ್ಯಾನಿಲಯಗಳಲ್ಲಿನ ಸಂಪನ್ಮೂಲ ಬಳಕೆ, ಹಂಚಿಕೆಯಾದಾಗಲೇ ಯುವ ಪೀಳಿಗೆಯಲ್ಲಿ ಹೊಸ ಕಲ್ಪನೆಗಳ ಬೆಳವಣಿಗೆಯಾಗುತ್ತದೆ. ಆಗ ಮಾತ್ರ ಆವಿಷ್ಕಾರ ಸಾಧ್ಯ ಎಂದು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯ ವಿವಿ ವಿಜ್ಞಾನ ಕಾಲೇಜಿನ ಜೀವ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರೊ. ಮನೋಹರ್ ಶಿಂಧೆ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಆಹಾರ ವಿಜ್ಞಾನ ಮತ್ತು ಪೌಷ್ಠಿಕಾಂಶ ಅಧ್ಯಯನ ವಿಭಾಗದ ಸಂಯೋಜಕ ಡಾ. ದೇವರಾಜ ಎಸ್. ವಂದಿಸಿದರು.
ಕಾರ್ಯಕ್ರಮದಲ್ಲಿ ಜೀವ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕರಾದ ಡಾ. ಕೆ. ಎಸ್. ಗಿರೀಶ್, ಡಾ. ನಾಗರಾಜು ಎಸ್., ಡಾ. ತಿಪ್ಪೇಸ್ವಾಮಿ ಟಿ. ಜಿ. ಭಾಗವಹಿಸಿದ್ದರು.

(Visited 1 times, 1 visits today)