ತುಮಕೂರು
ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಎಫ್‍ಎಸ್‍ಟಿ/ವಿಎಸ್‍ಟಿ/ ಎಸ್‍ಎಸ್‍ಟಿ ತಂಡಗಳಲ್ಲಿ ವಿಡಿಯೋಗ್ರಫಿ ಕರ್ತವ್ಯ ನಿರ್ವಹಿಸಲು ಉತ್ತಮ ನೈಪುಣ್ಯತೆ ಹೊಂದಿರುವ ವಿಡಿಯೋಗ್ರಾಫರ್‍ಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದರು.
ತಮ್ಮ ಕಚೇರಿಯಲ್ಲಿ ಇತ್ತೀಚೆಗೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದ ಅವರು, ಚುನಾವಣಾ ಕರ್ತವ್ಯಕ್ಕಾಗಿ ನೇಮಕ ಮಾಡಿಕೊಳ್ಳುವ ವಿಡಿಯೋಗ್ರಾಫರ್‍ಗಳು ಕನಿಷ್ಠ 21 ವರ್ಷ ವಯೋಮಿತಿ ಹಾಗೂ ದ್ವಿತೀಯ ಪಿಯುಸಿ ಉತ್ತೀರ್ಣ ಹೊಂದಿರಬೇಕು. ವಿಡಿಯೋಗ್ರಾಫಿ ಬಗ್ಗೆ ಅನುಭವ, ವೃತ್ತಿ ನೈಪುಣ್ಯತೆ ಹಾಗೂ ಉತ್ತಮ ವಿಡಿಯೋ ಉಪಕರಣ ಹೊಂದಿರುವವರನ್ನು ನೇಮಕ ಮಾಡಿಕೊಳ್ಳಬೇಕೆಂದು ಅವರು ನಿರ್ದೇಶನ ನೀಡಿದರು.
ನೇಮಕವಾದ ವಿಡಿಯೋಗ್ರಾಫರ್‍ಗಳು ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ವೇಳೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳಿಂದ ಪಡೆದಿರುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಿರಬೇಕು. ದಿನದ 24 ಗಂಟೆಗಳು ವಿಡಿಯೋಗ್ರಾಫಿ ಮಾಡಬೇಕಾಗಿರುವುದರಿಂದ ಪಾಳಿ ಆಧಾರದಲ್ಲಿ ವಿಡಿಯೋಗ್ರಾಫರ್‍ಗಳನ್ನು ನಿಯೋಜಿಸಬೇಕು ಎಂದು ತಿಳಿಸಿದರು.
ವಿಡಿಯೋಗ್ರಾಫರ್‍ಗಳು ಪ್ರತಿದಿನ ನಿಗಧಿಪಡಿಸಿದ ಸಮಯಕ್ಕೆ ಅರ್ಧ ಗಂಟೆ ಮುನ್ನವೇ ಕರ್ತವ್ಯಕ್ಕೆ ಹಾಜರಾಗಬೇಕು. ಕರ್ತವ್ಯಕ್ಕೆ ಹಾಜರಾದ ನಂತರ ತಾವು ಕರ್ತವ್ಯ ನಿರ್ವಹಿಸುವ ಚೆಕ್‍ಪೋಸ್ಟ್/ಸ್ಥಳ/ಸಮಯ/ ವಿಧಾನಸಭಾ ಕ್ಷೇತ್ರ/ ತಂಡದ ಅಧಿಕಾರಿಗಳ ವಿವರದೊಂದಿಗೆ ಗೊತ್ತುಪಡಿಸಿದ ತಂಡಕ್ಕೆ ವರದಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಚುನಾವಣಾ ತರಬೇತಿದಾರ ಡಾ: ಜಿ.ವಿ. ಗೋಪಾಲ್ ಮಾತನಾಡಿ, ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ವಿಡಿಯೋಗ್ರಾಫರ್‍ಗಳು ಪ್ರತಿದಿನ ತಮ್ಮ ಹೆಸರು, ವಿಡಿಯೋ ಚಿತ್ರೀಕರಣ ಮಾಡುತ್ತಿರುವ ಸ್ಥಳ, ದಿನಾಂಕದೊಂದಿಗೆ ವಿಡಿಯೋ ಚಿತ್ರೀಕರಣ ಪ್ರಾರಂಭಿಸಬೇಕು. ಚುನಾವಣಾ ಅಭ್ಯರ್ಥಿಗಳ ಪ್ರಚಾರ, ರಾಜಕೀಯ ಪಕ್ಷಗಳ ಕಾರ್ಯಕ್ರಮಗಳನ್ನು ವಿಡಿಯೋ ಚಿತ್ರೀಕರಣ ಮಾಡುವಾಗ ಮಧ್ಯದಲ್ಲಿ ನಿಲ್ಲಿಸಬಾರದು ಎಂದು ಮಾಹಿತಿ ನೀಡಿದರು.
ವಿಡಿಯೋ ಚಿತ್ರೀಕರಣದ ಮೂಲ ಪ್ರತಿಯನ್ನು ತಮ್ಮ ಸ್ವವಿವರೊಂದಿಗೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನೀಡಬೇಕು. ಚಿತ್ರೀಕರಣದಲ್ಲಿರುವ ಅಂಶ/ವಿಷಯ/ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳದೆ ಗೌಪ್ಯವಾಗಿಡಬೇಕು. ಚೆಕ್‍ಪೋಸ್ಟ್‍ಗಳಲ್ಲಿ ಪ್ರಯಾಣಿಕರೊಂದಿಗೆ ಸಭ್ಯವಾಗಿ ವರ್ತಿಸಬೇಕು. ಯಾವುದೇ ಸಾರ್ವಜನಿಕ ದೂರು ಬಾರದಂತೆ ಕರ್ತವ್ಯ ನಿರ್ವಹಿಸಲು ವಿಡಿಯೋಗ್ರಾಫರ್‍ಗಳಿಗೆ ಎಚ್ಚರಿಕೆ ನೀಡಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಪಾಲಿಕೆ ಆಯುಕ್ತ ಹೆಚ್.ವಿ.ದರ್ಶನ್, ಉಪವಿಭಾಗಾಧಿಕಾರಿ ಹೆಚ್. ಶಿವಪ್ಪ, ತಹಶೀಲ್ದಾರ್ ಸಿದ್ಧೇಶ್ ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.