ತುಮಕೂರು
ಚುನಾವಣಾ ನೀತಿ ಸಂಹಿತೆ ಜಾರಿ ಇರುವ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಭಗವಾನ್ ಮಹಾವೀರರ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದಿಗಂಬರ ಜೈನ ಮತ್ತು ಶ್ವೇತಾಂಬರ ಜೈನ ಸಮುದಾಯದ ಬಾಂಧವರು, ಜಿಲ್ಲಾಡಳಿತ ಅಧಿಕಾರಿಗಳು ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಪದ್ಮಪ್ರಸಾದ್ ಮಾತನಾಡಿ, ಮಹಾವೀರರು ಜೈನ ಧರ್ಮದ 24ನೇ ತೀರ್ಥಂಕರರು. ಅವರು ಬೋಧಿಸಿದಂತಹ ಅಹಿಂಸಾ ಸಿದ್ದಾಂತ ಇಡೀ ಜಗತ್ತಿನಲ್ಲಿ ಹೊಸ ಅಲೆಯನ್ನು ಸೃಷ್ಠಿಸಿತು. ಇದರೊಂದಿಗೆ ಮಹಾವೀರರು ದೇಶಿ ಭಾಷೆಗಳಿಗೆ ಬಹಳ ಪ್ರಾಮುಖ್ಯತೆಯನ್ನು ಕೊಟ್ಟಿದ್ದರು ಎಂದರು.
ಮಹಾವೀರರು ದಿನವಾಣಿ ಸರ್ವಭಾಷಾಮಯಿ ಎಂದು ಸದಾ ಹೇಳುತ್ತಿದ್ದರು. ಯಾರು ಏನೇ ವಿಚಾರ ಹೇಳಿದರೂ ಅದರಲ್ಲಿನ ಸತ್ಯಾಂಶವನ್ನು ಗ್ರಹಿಸಿಕೊಳ್ಳಬೇಕು. ನೀನು ಬದುಕು, ಬೇರೆಯವರನ್ನು ಬದುಕಲಿಕ್ಕೆ ಬಿಡು ಎನ್ನುವುದು ಮಹಾವೀರರ ಸಿದ್ದಾಂತವಾಗಿದೆ ಎಂದು ಅವರು ಹೇಳಿದರು.
ಕೆಟ್ಟದಾರಿಯಲ್ಲಿ ಹೋಗುತ್ತಿರುವವರನ್ನು ಯಾವತ್ತೂ ಸಮರ್ಥಿಸಿಕೊಳ್ಳುವ ಕೆಲಸ ಮಾಡಬಾರದು. ಈ ಕೆಲಸವೂ ತಪ್ಪು ಮಾಡಿದಷ್ಟೇ ಪಾಪ ಎಂಬುದು ಮಹಾವೀರ ತೀರ್ಥಂಕರರ ಸಂದೇಶವಾಗಿದೆ. ಮನುಷ್ಯನ ಆಸೆಗೆ ಕೊನೆಯಿಲ್ಲ. ನಿಮ್ಮ ಆಸೆಗಳನ್ನು, ವಸ್ತುಗಳನ್ನು ಪರಿಮಿತಿಯಲ್ಲಿಟ್ಟುಕೊಳ್ಳಬೇಕು ಎಂಬುದು ಸೇರಿದಂತೆ ಅನೇಕ ಅಂಶಗಳನ್ನು ಮಹಾವೀರರು ಎಲ್ಲ ಕಾಲಕ್ಕೂ ಅನ್ವಯವಾಗುವಂತೆ ಬೋಧಿಸುತ್ತಿದ್ದರು. ಜತೆಗೆ ಪ್ರಾಣಿ ಹಿಂಸೆಯನ್ನು ಸದಾ ವಿರೋಧಿಸಿದ್ದರು ಎಂದರು.
ಮಹಾವೀರರ ಪ್ರಭಾವದಿಂದಾಗಿ ಹಿಂಸೆ ಕಡಿಮೆಯಾಗಿ ಅಹಿಂಸೆ ಹೆಚ್ಚಾಗಿರುವುದನ್ನು ನಾವು ಕಾಣಬಹುದು. ಮಹಾವೀರರು ಸರ್ವಕಾಲಕ್ಕೂ ಪೂಜ್ಯನೀಯರಾಗಿದ್ದಾರೆ ಎಂಜು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ಹೋಟೆಲ್ ಶಿವಪ್ಪ, ಯೋಜನಾ ಅಭಿವೃದ್ಧಿ ಅಧಿಕಾರಿ ಆಂಜಿನಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ಸುರೇಶ್‍ಕುಮಾರ್, ದಿಗಂಬರ ಜೈನ್ ಸಮುದಾಯದ ಅಧ್ಯಕ್ಷರಾದ ಎಸ್.ಜೆ. ನಾಗರಾಜು, ಆರ್.ಎ. ಸುರೇಶ್, ವಿನಯ್ ಜೈನ್, ಬಿ.ಎಲ್. ಚಂದ್ರಕೀರ್ತಿ, ಶ್ವೇತಾಂಬರ ಜೈನ್ ಸಮುದಾಯದ ಅಧ್ಯಕ್ಷರಾದ ಉತ್ತಮ್ ಬಾಯ್, ಸುರೇಂದ್ರ ಷಾ ಮತ್ತಿತರರು ಉಪಸ್ಥಿತರಿದ್ದರು.