ಮತದಾನ ಕೇವಲ ಪ್ರತಿಯೋರ್ವ ನಾಗರೀಕನ ಹಕ್ಕು ಅಷ್ಟೇ ಅಲ್ಲ, ಪ್ರತಿಯೊಬ್ಬ ವಯಸ್ಕ ಪ್ರಜೆಯ ಕರ್ತವ್ಯವೂ ಕೂಡ. ಮತದಾನ ಭಾರತೀಯರಿಗೆ ನೀಡಿರುವ ಹಕ್ಕಾಗಿದ್ದು, ಭವ್ಯ ಭಾರತ ಹಾಗೂ ಸದೃಢ ಸಮಾಜ ಕಟ್ಟಲು ಪೂರಕ ವ್ಯವಸ್ಥೆಯಾಗಿದೆ. ನಮ್ಮ ದೇಶದಲ್ಲಿ ಸಾಮಾಜಿಕ ಅಂತಸ್ತು, ಜಾತಿಬೇಧ, ಲಿಂಗ ತಾರತಮ್ಯಗಳಾವುದನ್ನು ಲೆಕ್ಕಿಸದೇ ಎಲ್ಲರಿಗೂ ಸರ್ವಸಮಾನವಾಗಿ ನೀಡಿರುವ ಹಕ್ಕಾಗಿರುವುದೇ ಈ ಮತದಾನ. ಮತದಾನವು ಜನತೆಯು ಅಭ್ಯರ್ಥಿಗಳ ಆಯ್ಕೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸೂಚಿಸಲು ಅನುವು ಮಾಡಿಕೊಂಡಿರುವ ಒಂದು ಸುಲಭ ಪ್ರಕ್ರಿಯೆ ಎನ್ನಬಹುದು.
ಈ ಹಿಂದಿನ ಕಾಲದಲ್ಲೆಲ್ಲಾ ರಾಜಮಹಾರಾಜರು ತಮ್ಮ ತಮ್ಮ ಪ್ರಾಂತ್ಯಗಳಲ್ಲಿ ಆಳುತ್ತಿದ್ದರು. ಆಗೆಲ್ಲಾ ಜನರು ರಾಜರನ್ನು ಆರಿಸುತ್ತಿರಲಿಲ್ಲ. ರಾಜರೇ ಅವರ ತೋಳ್ಬಲದಿಂದ, ವೀರತ್ವದಿಂದ, ಶೌರತ್ವದಿಂದ ಹೋರಾಡಿ ಗೆದ್ದು ಆಳುತ್ತಿದ್ದರು. ಕೆಲ ರಾಜರನ್ನು ನೋಡಿದ ಕೂಡಲೆ ಅವನು ನಮ್ಮನ್ನು ಆಳಲು ಸೂಕ್ತ ಎಂದು ಎನಿಸಿಬಿಡುತ್ತಿತ್ತಂತೆ. ಆದರೆ ಪ್ರಸ್ತುತ ದಿನಮಾನದಲ್ಲಿ ಒಬ್ಬ ವ್ಯಕ್ತಿಯ ಬಾಹ್ಯರೂಪದಿಂದ, ಮೈಕಟ್ಟಿನಿಂದ ಆತ ನಮ್ಮನ್ನು ಆಳಲು ಮತ್ತು ನಮಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಮರ್ಥನೋ? ಇಲ್ಲವೆ ಅಸಮರ್ಥನೋ? ಕಳಂಕಿತನೋ? ಎಂದು ಪರಿಗಣಿಸಿ ಆರಿಸಲು ಸಾಧ್ಯವಿಲ್ಲ. ಕಾರಣ ಈಗ ಪ್ರಾಮಾಣಿಕವಾಗಿ ಬದುಕುತ್ತಿರುವುದನ್ನು ಕಾಣಲಾಗದು. ಈಗೇನಿದ್ದರೂ ಮುಖವಾಡ ಧರಿಸಿಕೊಂಡು ಜೀವಿಸುತ್ತಿರುವವರೇ ಹೆಚ್ಚು ಎಂದರೆ ಅತಿಶಯೋಕ್ತಿ ಎನಿಸದು! ಯಾರನ್ನೂ ನಂಬಲಾಗದ ಈ ಜಗತ್ತಿನಲ್ಲಿ ಚುನಾವಣಾ ಪ್ರಕ್ರಿಯೆಯಿಲ್ಲದೆ ಆರಿಸಿ ನಮ್ಮನ್ನು ಆಳಲು ಬಿಡಲು ಸಾಧ್ಯವೇ ಇಲ್ಲ. ಆದ್ದರಿಂದ ಈ ಮತದಾನ ಪ್ರಕ್ರಿಯೆಯನ್ನು ಹೊರತುಪಡಿಸಿ ಜನನಾಯಕನನ್ನು ಆರಿಸಲು ಸೂಕ್ತ ಪ್ರಕ್ರಿಯೆ ಯಾವುದೂ ಇಲ್ಲ.
ಈ ಮತದಾನ ವ್ಯವಸ್ಥೆ ಪ್ರಜೆಗಳಿಗೆ ಪರೋಕ್ಷವಾಗಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ನೀಡಿದೆ. ಇದರಿಂದಲೇ ಭ್ರಷ್ಠ ಸರ್ಕಾರಗಳನ್ನು ಶಾಂತಿಯುತವಾಗಿಯೇ ಕಿತ್ತೊಗೆಯಲು ಸಾಧ್ಯವಾಗುವುದು. ಆದ್ದರಿಂದಲೇ ಮತದಾನವನ್ನು ‘ಪ್ರಜಾಪ್ರಭುತ್ವ’ದ ಆಧಾರಸ್ತಂಭ ಎಂದಿರುವುದು. ಚುನಾವಣಾ ಸಮಯದಲ್ಲಿ ಜನರು ಆಸೆ-ಆಮಿಷಗಳಿಗೆ ಬಲಿಯಾಗುವುದು ಸಹಜ. ಆದರೆ ಇದರ ಬಗ್ಗೆ ಅರಿವು ಮೂಡಿಸಿದರೆ ಅವರಾಗಿಯೇ ಬದಲಾಗುತ್ತಾರೆ. ಇನ್ನು ಮತದಾನವನ್ನು ಕಡ್ಡಾಯಗೊಳಿಸದೇ ಇದ್ದಲ್ಲಿ ರಾಮರಾಜ್ಯವಾಗಬೇಕಿದ್ದ ಭಾರತ ರಾವಣನ ಲಂಕೆಯಾಗಿ ಭ್ರಷ್ಠರ ಕೋಟೆಯಾಗುವುದರಲ್ಲಿ ಯಾವುದೇ ಸಂದೇಹವೇ ಇಲ್ಲ. ಆದ್ದರಿಂದ ಮತದಾನ ಎಲ್ಲರ ಹಕ್ಕಾಗಿ ಮತ್ತು ಕರ್ತವ್ಯವಾಗಿ ಹೊರಹೊಮ್ಮಿ ದೇಶೋದ್ಧಾರಕ್ಕೆ ಮುನ್ನುಡಿ ಬರೆಯಬೇಕಿದೆ.
ಗಂಭೀರ ಅಪರಾಧಗಳನ್ನು ಎಸಗಿದ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಬೇಕೆ?
ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಲು ಚುನಾವಣೆಯೇ ಹೆಬ್ಬಾಗಿಲು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯ ಪಾತ್ರ ಹಿರಿದು. ಚುನಾವಣೆಯ ಪ್ರಕ್ರಿಯೆ ಕಟ್ಟುನಿಟ್ಟಾಗಿದ್ದಷ್ಟೂ ಜೊಳ್ಳುಗಳನ್ನು ಜರಡಿ ಹಿಡಿದು ಗಟ್ಟಿ ಕಾಳುಗಳನ್ನು ಆರಿಸಲು ಸಾಧ್ಯವಾಗುತ್ತದೆ. ಆದರೆ ಭ್ರಷ್ಟಾಚಾರ ಇಂದಿನ ಜೀವನ ವಿಧಾನವಾಗಿದೆ. ರಾಜಕಾರಣದಲ್ಲಿ ಇದು ಗರಿಷ್ಠ ಪ್ರಮಾಣದಲ್ಲಿದೆ ಎಂದರೆ ಅಚ್ಚರಿಯೇನಲ್ಲ.
ಭಾರತದ ನಿವೃತ್ತ ಮುಖ್ಯ ಚುನಾವಣಾ ಆಯುಕ್ತರೋರ್ವರು “ರಾಜಕಾರಣಿಗಳನ್ನು ಸಮಾಜಕ್ಕಂಟಿದ ಕ್ಯಾನ್ಸರ್” ಎಂದು ಕರೆದಾಗ ಒಬ್ಬಿಬ್ಬರು ದುರ್ಬಲ ಪ್ರತಿಕ್ರಿಯೆ ವ್ಯಕ್ತಪಡಿಸಿದರಷ್ಟೇ. ಅಲ್ಲ ಎಂದು ಹೇಳಲು ಯಾವ ರಾಜಕಾರಣಿಗೂ ನೈತಿಕ ಧೈರ್ಯವಿಲ್ಲ. ಪಕ್ಷವು ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಾಗ ಅವರ ಅಪರಾಧದ ಹಿನ್ನೆಲೆಯಲ್ಲಿ ಪರಿಶೀಲಿಸುವ ಕ್ರಮ ಈಚೆಗೆ ಬಳಕೆಗೆ ಬರುತ್ತಿದೆ. ಆದರೇನಂತೆ ಒಬ್ಬ ಆಪಾದಿತನು ಅಪರಾಧಿಯೆಂದು ಸಾಬೀತಾಗುವವರೆಗೂ ಅಪರಾಧಿಯಲ್ಲ ಎನ್ನುತ್ತದೆ ನ್ಯಾಯಾಲಯ. ಇದರ ಪರಿಣಾಮವಾಗಿ ಕೊಲೆ, ಸುಲಿಗೆ, ಡಕಾಯಿತಿ, ಅತ್ಯಾಚಾರದಂಥ ಗಂಭೀರ ಗುರುತರ ಅಪರಾಧದ ಆಪಾದನೆ ಹೊತ್ತವರೂ, ಕೋಟ್ಯಂತರ ರೂಪಾಯಿ ಸಾರ್ವಜನಿಕರ ಹಣವನ್ನು ಗುಳುಂ ಮಾಡಿದವರು ಹಗರಣಗಳ ಆಪಾದನೆ ಹೊತ್ತು ಜೈಲು ಸೇರಿದವರೂ ಚುನಾವಣೆಗೆ ನಿಲ್ಲುವಂತಹ ಅಭಾಸಕರ ಪ್ರಸಂಗಗಳು ಹೆಚ್ಚಾಗಿಯೇ ನಡೆಯುತ್ತಿವೆ. ಸೆರೆಮನೆಯಲ್ಲಿದ್ದೇ ಅನುಕಂಪದ ಅಲೆಯೇರಿ ಗೆದ್ದು ಬಂದವರ ಉದಾಹರಣೆಗಳೂ ಸಾಕಷ್ಟಿವೆ.
ತಾವು ಚುನಾವಣೆಗೆ ನಿಲ್ಲುತ್ತೇವೆ ಎಂದು ಅಭ್ಯರ್ಥಿಗಳು ಮುಂದೆ ಬಂದಾಗ ಅವರ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸುವಂತೆಯೇ ಅವರ ಸಚ್ಚಾರಿತ್ರ್ಯ, ಗುಣಾವಗುಣ, ನಡತೆಗಳನ್ನು ಪರಿಶೀಲಿಸುವುದು ಅವಶ್ಯಕ. ಕಾರಣ ‘ಯಥಾರಾಜ ತಥಾ ಪ್ರಜಾ’ ಎಂಬಂತೆ ನಮ್ಮನ್ನು ಆಳುವ ರಾಜನು ಸರ್ವಗುಣಗಳನ್ನು ತನ್ನಲ್ಲಿ ರೂಢಿಸಿಕೊಂಡಿರಬೇಕಾದ ಅವಶ್ಯಕತೆಯಿದೆ. ಅದನ್ನೂ ಬಿಟ್ಟು ಆ ರಾಜನೇ (ನಾಯಕ) ಕ್ರೂರಿ, ಹಂತಕ, ಪ್ರಜಾಪೀಡಕನಾದರೆ (ಬೇಲಿಯೇ ಎದ್ದು ಹೊಲವನ್ನು ಮೆಯ್ದಡೆ ರಕ್ಷಿಪರಾರುಂಟು ಸರ್ವಜ್ಞ) ಆತನಿಂದ ಪ್ರಜೆಗಳಿಗಿನ್ನೇನು ಲಾಭವಿದೆ ಸ್ವಲ್ಪ ಆಲೋಚಿಸಿ…??
(Visited 1 times, 1 visits today)