ತುಮಕೂರು
ಹಸಿರು ಕ್ರಾಂತಿ ಹರಿಕಾರ, ಶ್ರೇಷ್ಟ ರಾಜಕಾರಣಿ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಧೀಮಂತ ವ್ಯಕ್ತಿಯಾಗಿದ್ದರು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಭಿಪ್ರಾಯಪಟ್ಟರು.
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾಂಕೇತಿಕವಾಗಿ ಏರ್ಪಡಿಸಿದ್ದ ಡಾ: ಬಾಬು ಜಗಜೀವನರಾಮ್ ಅವರ 116ನೇ ಜನ್ಮ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದ ಅವರು, ದಲಿತರು, ನಿರ್ಗತಿಕರು, ಕಾರ್ಮಿಕರ ಅಭ್ಯುದಯಕ್ಕಾಗಿ ತಮ್ಮ ಬದುಕಿನುದ್ದಕ್ಕೂ ಶ್ರಮಿಸಿದರು. ಸಮಾಜದಲ್ಲಿ ಶೋಷಿತರಿಗಾಗಿ ಅವರು ಜಾರಿ ಮಾಡಿದ ಕಾನೂನು, ನೀತಿ, ನಿಯಮಗಳನ್ನು ಯಾರೂ ಮರೆಯುವಂತಿಲ್ಲ. ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರದಲ್ಲಿಯೂ ಕೇಂದ್ರದ ಹಲವಾರು ಖಾತೆಗಳಿಗೆ ಮಂತ್ರಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಬಾಬು ಜಗಜೀವನರಾಮ್ ಅವರಿಗೆ ಸಲ್ಲುತ್ತದೆ. ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆ, ಕೈಗಾರಿಕಾ ಕಾಯ್ದೆ ಸೇರಿದಂತೆ ಹಲವಾರು ಕಾಯ್ದೆಗಳು ಜಾರಿಯಾಗಲು ಶ್ರಮಿಸಿದ್ದರು ಎಂದು ತಿಳಿಸಿದರಲ್ಲದೆ, ಇವರ ತತ್ವಾದರ್ಶಗಳ ಬಗ್ಗೆ ಇಂದಿನ ಮಕ್ಕಳಿಗೆ ತಿಳಿಸುವ ಅಗತ್ಯವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ಹೋಟೆಲ್ ಶಿವಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಸ್. ಕೃಷ್ಣಪ್ಪ, ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಇಲಾಖಾ ಮುಖ್ಯಸ್ಥರು, ಸಿಬ್ಬಂದಿವರ್ಗ ಹಾಜರಿದ್ದರು.