ತುಮಕೂರು


2023-24ನೇ ಸಾಲಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಕಾರ್ಯಗಳಿಗೆ 18 ವರ್ಷದೊಳಗಿನ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದ್ದು, ಯಾವುದೇ ರಾಜಕೀಯ ಪಕ್ಷದವರು ಚುನಾವಣಾ ಮತ್ತು ಪ್ರಚಾರ ಕಾರ್ಯಗಳಿಗೆ 18 ವರ್ಷದೊಳಗಿನ ಮಕ್ಕಳನ್ನು ಬಳಸಿಕೊಳ್ಳದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರೂ ಆದ ವೈ.ಎಸ್. ಪಾಟೀಲ ಅವರು ಮನವಿ ಮಾಡಿದ್ದಾರೆ.
ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಮಕ್ಕಳ ದುಡಿಮೆಯನ್ನು ನಿಯಂತ್ರಿಸಲು ಹಾಗೂ ನಿಷೇಧಿಸಲು ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರನ್ವಯ ಯಾವುದೇ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದನ್ನು ನಿಷೇಧಿಸಿದೆ ಹಾಗೂ 14-18 ವಯಸ್ಸಿನ ಕಿಶೋರ ಕಾರ್ಮಿಕ ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನಿಯೋಜಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಎಲ್ಲಾ ತಾಲ್ಲೂಕಿನ ತಹಶೀಲ್ದಾರರುಗಳು ಮಕ್ಕಳ ರಕ್ಷಣಾ ಸಮಿತಿ ಹಾಗೂ ಬಾಲ ಕಾರ್ಮಿಕ ಯೋಜನೆಯ ಅಧ್ಯಕ್ಷರುಗಳು ಆಗಿರುವುದರಿಂದ ತಮ್ಮ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಪಕ್ಷಗಳು 18 ವರ್ಷದ ಮಕ್ಕಳನ್ನು ಚುನಾವಣಾ ಪ್ರಚಾರ ಹಾಗೂ ಇನ್ನಿತರೆ ಚುನಾವಣಾ ಕಾರ್ಯಗಳಿಗೆ ಬಳಸಿಕೊಳ್ಳುತ್ತಿರುವುದು ಕಂಡು ಬಂದಲ್ಲಿ ತಮ್ಮ ಕ್ಷೇತ್ರದ ಕಾರ್ಮಿಕ ನಿರೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.
ಅಂತೆಯೇ, ಕಾರ್ಮಿಕ ನಿರೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನೊಳಗೊಂಡ ತಂಡ, ಸ್ಥಳೀಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ/
ವಾರ್ಡ್ ಸದಸ್ಯರುಗಳಿಗೆ ಮಕ್ಕಳನ್ನು ಚುನಾವಣಾ ಕಾರ್ಯಗಳಿಗೆ ಬಳಸಿಕೊಳ್ಳದಂತೆ ಸೂಚಿಸುವುದು ಜೊತೆಗೆ ವಿವಿಧ ರಾಜಕೀಯ ಪಕ್ಷಗಳು ಕೈಗೊಳ್ಳುವ ಪ್ರಚಾರ ಕಾರ್ಯ ಹಾಗೂ ಇನ್ನಿತರೆ ಚುನಾವಣಾ ಕಾರ್ಯಗಳನ್ನು ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಳ್ಳುವವರೆಗೆ ನಿಯಮಾನುಸಾರ ತಪಾಸಣೆಗಳನ್ನು ಕೈಗೊಳ್ಳುವುದು ಹಾಗೂ ಯಾವುದೇ ಪಕ್ಷದವರು ಕಾಯ್ದೆಯನ್ನು ಉಲ್ಲಂಘಿಸಿ ಮಕ್ಕಳನ್ನು ಬಳಸಿಕೊಂಡಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು
ಆದೇಶಿಸಿದ್ದಾರೆ.

(Visited 10 times, 1 visits today)