ಪಾವಗಡ
2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು ಈಗಾಗಲೇ ರಾಷ್ರ್ಟೀಯ ಮತ್ತು ಪ್ರಾದೇಶಿಕ ಪಕ್ಷಗಳಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಮಾಧ್ಯಮದ ಪ್ರತಿನಿಧಿಗಳನ್ನು ಕಡೆಗಣಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ. ಪತ್ರಕರ್ತರ ಪ್ರಶ್ನೆಗಳಿಗೆ ಅಭ್ಯರ್ಥಿಗಳ ಬಳಿ ಉತ್ತರ ಇಲ್ಲವೇ? ಅಥವಾ ಇವರ ಕಾರ್ಯವೈಖರಿ ಬಗ್ಗೆ ಜನತೆಯ ಮುಂದೆ ಇಡುತ್ತಾರೆ ಎಂಬ ಭಯವೇ?
ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಹಲವು ಪ್ರಶ್ನೆಗಳು:
ಪಾವಗಡ ವಿಧಾನಸಭಾ ಕ್ಷೇತ್ರದ ಜನತೆಗೆ ಕಳೆದ 75 ವರ್ಷಗಳಿಂದ ಆಳಿದ ನಾಯಕರೆಲ್ಲ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿ ಪಾವಗಡ ವಿಧಾನಸಭಾ ಕ್ಷೇತ್ರದ ಜನತೆಗೆ ಉಂಡೇ ನಾಮ ಹಾಕಿರುತ್ತಾರೆ.
ಕ್ಷೇತ್ರದ ಜನತೆ ಮಾಧ್ಯಮದ ಮೂಲಕ ಕೇಳುತ್ತಿರುವ ಪ್ರಶ್ನೆಗಳು:
ಪಾವಗಡ ತಾಲ್ಲೂಕಿಗೆ ಬೈಪಾಸ್ ರಸ್ತೆ ಇಲ್ಲದಿರುವುದೇಕೆ?
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣ ನಿರ್ಮಾಣ ಮಾಡುವಲ್ಲಿ ವಿಫಲ ಹಾಗೂ ತುಮಕೂರು ಜಿಲ್ಲೆಗೆ ಸೇರಿದ್ದ ಪಾವಗಡ ವಿಧಾನಸಭಾ ಕ್ಷೇತ್ರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಡಿಪೋವನ್ನು ತಾರತಮ್ಯವೆಸಗಿ ಚಿತ್ರದುರ್ಗ ಜಿಲ್ಲೆಗೆ ಸೇರಿಸಿ ತಾಲ್ಲೂಕಿನ ಜನತೆಗೆ ಮಾಡಿರುವ ಅನ್ಯಾಯ
ಪಾವಗಡ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯದ ಗಡಿನಾಡಿನ ತಾಲ್ಲೂಕು ಇಲ್ಲಿ ಕನ್ನಡ ಭಾಷೆಗೆ ಸೂಕ್ತ ಸ್ಥಾನಮಾನ ಕಲ್ಪಿಸದೇ ಕನ್ನಡ ಸಂಸ್ಕøತಿಯನ್ನು ಉಳಿಸಲು ಕನ್ನಡ ಭವನ ನಿರ್ಮಿಸದೇ ನಾಡಿನ ಸಂಸ್ಕøತಿಗೆ ಒತ್ತು ಕೊಡದೇ ವಿಫಲರಾಗಿದ್ದಾರೆ.
ಕ್ಷೇತ್ರದ ಜನತೆ ತಾಲ್ಲೂಕಿಗೆ ಶಾಶ್ವತ ಕುಡಿಯುವ ನೀರು ಹಾಗೂ ನೀರಾವರಿ ಯೋಜನೆಗಳಿಗೆ ತಾಲ್ಲೂಕಿನ ಎಲ್ಲಾ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರ ಬೆಂಬಲದೊಂದಿಗೆ 33 ದಿನಗಳ ಕಾಲ ಹೋರಾಟ ಮಾಡಿದ ಫಲವಾಗಿ ಕಾರ್ಯರೂಪಕ್ಕೆ ಬಂದ ಯೋಜನೆಯನ್ನು ರಾಜಕೀಯೇತರ ಅಭ್ಯರ್ಥಿಗಳು ತಾವೊಬ್ಬರೇ ಹೋರಾಡಿ ನಿಮಗೆ ಬಳುವಳಿಯಾಗಿ ಕೊಟ್ಟಿದ್ದೇವೆ ಎಂದು ಬಹಿರಂಗ ಸಭೆಗಳಲ್ಲಿ ಬಿಂಬಿಸಿಕೊಳ್ಳುತ್ತಿದ್ದಾರೆ.
ಕ್ಷೇತ್ರದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದು ಯುವ ಜನತೆಗಾಗಿ ಕಳೆದ 30 ವರ್ಷಗಳಿಂದ ಉದ್ಯೋಗ ಕಲ್ಪಿಸದೇ ಗುಳೆ ಹೋದರೂ ತಲೆ ಕೆಡಿಸಿಕೊಳ್ಳದೇ ಈಗ ಗುಳೆ ಹೊರಟ ಸ್ಥಳಗಳಿಗೆ ಭೇಟಿ ಕೊಟ್ಟು ಮತಯಾಚನೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ.
ಪಾವಗಡ ಕ್ಷೇತ್ರದ ಕೇಂದ್ರ ಹೃದಯಭಾಗದಲ್ಲಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಪ್ರತಿದಿನ ಸಾವಿರಾರು ಜನ ಸಂಚಾರ ಮಾಡುತ್ತಿದ್ದು ಕುಳಿತುಕೊಳ್ಳುವ ಆಸನಗಳ ವ್ಯವಸ್ಥೆ, ಕುಡಿಯುವ ನೀರು ಇಲ್ಲದಿರುವುದು ಕ್ಷೇತ್ರದ ಜನತೆಯ ದೌರ್ಭಾಗ್ಯವೇ ಸರಿ.
ಕ್ಷೇತ್ರದ ಜನತೆ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿತ ರೋಗಗಳಿಗೆ ತುತ್ತಾದರೇ ಚಿಕಿತ್ಸೆಗಾಗಿ ರಾಜ್ಯದ ರಾಜಧಾನಿಗೆ ಹೋಗುವ ಪರಿಸ್ಥಿತಿ.
ಕ್ಷೇತ್ರ ಸುತ್ತಲೂ ಆಂಧ್ರದ ಗಡಿಭಾಗಗಳಿಂದ ಆವರಿಸಿಕೊಂಡಿದ್ದು ಕ್ಷೇತ್ರದಿಂದ ಜಿಲ್ಲಾ ಹಾಗೂ ರಾಜ್ಯ ಕೇಂದ್ರ ಸ್ಥಾನಗಳಿಗೆ ಪ್ರಯಾಣ ಬೆಳೆಸಬೇಕೆಂದರೆ, 17 ಕಿ.ಮೀ. ಆಂಧ್ರಪ್ರದೇಶ ಬರುತ್ತದೆ. ಇಲ್ಲಿನ ಸಾರಿಗೆ ಅಧಿಕಾರಿಗಳು ಸಾವಿರಾರು ರೂಪಾಯಿ ದಂಡ ವಿಧಿಸುತ್ತಿದ್ದಾರೆ. ಇದರಿಂದ ಖಾಸಗಿ ಬಸ್, ಲಾರಿ, ಕಾರು, ಆಟೋ ಮಾಲೀಕರು ಮತ್ತು ಚಾಲಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ವಿಧಿಸುವ ದಂಡಕ್ಕೆ ವಾಹನವನ್ನು ಮಾರಿಕೊಳ್ಳುವ ಪರಿಸ್ಥಿತಿ ಎದುರಾಗುತ್ತಿದೆ.
ಕ್ಷೇತ್ರದಲ್ಲಿ ಉನ್ನತ ಶಿಕ್ಷಣದ ಡಿಪ್ಲಾಮೋ, ಇಂಜಿನಿಯರಿಂಗ್, ಮೆಡಿಕಲ್, ಸ್ನಾತಕೋತ್ತರ ಪದವಿ ಕಾಲೇಜುಗಳು ಇಲ್ಲದೇ ತಾಲ್ಲೂಕಿನ ಪ್ರತಿಭಾವಂತ ವಿದ್ಯಾವಂತರು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ.
ಕ್ಷೇತ್ರದ ಕೇಂದ್ರಸ್ಥಾನದಲ್ಲಿ ಇಲಾಖೆಗಳ ಅಧಿಕಾರಿಗಳಿಗೆ ವಸತಿಗಳು ಇಲ್ಲದ ಕಾರಣ ಹಲವು ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಲಭ್ಯವಿರುವುದಿಲ್ಲ.
ಕ್ಷೇತ್ರದ ಆರಕ್ಷಕ ಠಾಣೆಗಳು ಅಭದ್ರತೆಯಿಂದ ಕೂಡಿದ್ದು ಶಿಥಿಲಾವಸ್ಥೆಯಲ್ಲಿದರೂ ಸಹ ಆರಕ್ಷಕರಿಗೆ ಠಾಣೆಗಳಲ್ಲಿ ಅಭದ್ರತೆಯ ಅಳುಕುನಲ್ಲಿ ಕರ್ತವ್ಯ ನಿರ್ವಹಿಸುವ ಅನಿವಾರ್ಯತೆ ಇದೆ.
ತಾಲ್ಲೂಕು ದಂಡಾಧಿಕಾರಿ ಕಛೇರಿಗೆ ಸರ್ಕಾರಿ ಸೌಲಭ್ಯ ಕೋರಿ ಭೇಟಿ ನೀಡುವ ಸಾರ್ವಜನಿಕರಿಗೆ ಆಸನಗಳ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ಇಲ್ಲದೇ ಪರದಾಡುವ ಪರಿಸ್ಥಿತಿ.
ಕ್ಷೇತ್ರದ ಅತ್ಯಂತ ಪುರಾತನ ಇತಿಹಾಸವುಳ್ಳ ಪ್ರಸಿದ್ಧ ದೇವಾಲಯಗಳಿಗೆ ಜೀರ್ಣೋದ್ಧಾರ ಕಲ್ಪಿಸದೆ ಕಡೆಗಣಿಸಿ ದುಸ್ಥಿತಿಯ ಅವನ್ನತಿಗೆ ತಲುಪಿವೆ.
ಕ್ಷೇತ್ರದ ಮಲೆನಾಡೆಂದೆ ಪ್ರಖ್ಯಾತಿ ಪಡೆದಿರುವ ನಿಡಗಲ್ ದುರ್ಗವನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಬೇಕಾಗಿದೆ.
ಕ್ಷೇತ್ರದ ತಿರುಮಣಿ ಬಳಿ ವಿಶ್ವವಿಖ್ಯಾತಿ ಸೋಲಾರ್ ಪಾರ್ಕ್‍ನಲ್ಲಿ ಸ್ಥಳೀಯ ವಿದ್ಯಾವಂತರಿಗೆ ಉದ್ಯೋಗ ಕಲ್ಪಿಸದೇ ಇತರೆ ರಾಜ್ಯದವರಿಗೆ ಉದ್ಯೋಗ ಕಲ್ಪಿಸಿ ಸ್ಥಳೀಯರಿಗೆ ಅನ್ಯಾಯವೆಸಗಿದ್ದಾರೆ.
ಇಷ್ಟೆಲ್ಲಾ ಸಮಸ್ಯೆಗಳು ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ತಾಂಡವವಾಡುತ್ತಿದ್ದರೂ 2023 ರ ಸಾರ್ವತ್ರಿಕ ಚುನವಣಾ ಅಖಾಡದಲ್ಲಿರುವ ಅಭ್ಯರ್ಥಿಗಳು ಮತ್ತೊಮ್ಮೆ ನಮಗೆ ಅಧಿಕಾರ ಕೊಡಿ ಎಂದು ಕೇಳುತ್ತಿರುವುದು ವಿಪರ್ಯಾಸವೇ ಸರಿ.