ತುಮಕೂರು:
ನಾನು ಶಾಸಕನಾಗಿದ್ದ ಕಾಲದಲ್ಲಿ ರಸ್ತೆ,ಕುಡಿಯುವ ನೀರು, ಚರಂಡಿ, ಶಿಕ್ಷಣ, ಕೈಗಾರಿಕೆ ಎಲ್ಲದರಲ್ಲಿಯೂ ಮುಂದಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರವನ್ನು 2018ರಲ್ಲಿ ಆಯ್ಕೆಯಾದ ಜೆಡಿಎಸ್ ಶಾಸಕರ ನಿರ್ಲಕ್ಷದಿಂದಾಗಿ ದರಿದ್ರ ಕ್ಷೇತ್ರವಾಗಿ ಮಾರ್ಪಡಿಸಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಬಿ.ಸುರೇಶಗೌಡ ಆರೋಪಿಸಿದ್ದಾರೆ.
ಗ್ರಾಮಾಂತರ ಕ್ಷೇತ್ರದ ಕಚೇರಿ ಶಕ್ತಿ ಸೌಧದಲ್ಲಿ ತುಮಕೂರು ಗ್ರಾಮಾಂತರದ ಬೋವಿ ಸಮುದಾಯದ ಮುಖಂಡರ ಸಭೆ ನಡೆಸಿ ಮಾತನಾಡಿದ ಅವರು, ಪ್ರತಿ ಮನೆಗೆ ನಲ್ಲಿ,ಕುಡಿಯುವ ನೀರು, ರಸ್ತೆ, ಚರಂಡಿ,ಶೈಕ್ಷಣಿಕ ಅಭಿವೃದ್ದಿ ಒತ್ತು ನೀಡಿದ್ದರ ಪರವಾಗಿ ಕ್ಷೇತ್ರದಲ್ಲಿ ಸುಮಾರು 20ಕ್ಕು ಹೆಚ್ಚು ಸರಕಾರಿ ಶಾಲೆಗಳು ನವೀಕರಣಗೊಂಡ ಪರಿಣಾಮ ಕ್ಷೇತ್ರದ ಸಾವಿರಾರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಯಿತು.ಆದರೆ ಇಂದು ಬಹುತೇಕ ಶಾಲೆಗಳಲ್ಲಿ ಬಿಸಿಯೂಟಕ್ಕೆ ನೀರಿಲ್ಲ. ಶೌಚಾಲಯಕ್ಕೆ ನೀರಿಲ್ಲ. ಇಂತಹ ಪರಿಸ್ಥಿತಿಗೆ ಹಾಲಿ ಶಾಸಕರ ನಿರ್ಲಕ್ಷವೇ ಕಾರಣ ಎಂದರು.
ಬೋವಿ ಸಮಾಜ ಪರಿಶ್ರಮಕ್ಕೆ ಹೆಸರಾದ ಸಮುದಾಯ. ಮಾನಸಿಕ ಶ್ರಮಕ್ಕಿಂತ ದೈಹಿಕ ಶ್ರಮ ಹೆಚ್ಚು. ಆದರೆ ಇಂದಿಗೂ ಶಿಕ್ಷಣ, ಉದ್ಯೋಗದಲ್ಲಿ ಇಂದಿಗೂ ಅತ್ಯಂತ ಹಿಂದುಳಿದ ಸಮಾಜವಾಗಿದೆ. ಇಂತಹ ಸಮುದಾಯಗಳು ವಾಸಿಸುವ ಜಾಗಗಳನ್ನು ಗುರುತಿಸಿ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದೇನೆ. ಸುಮಾರು 2500 ಕೋಟಿ ರೂಗಳನ್ನು ಕರ್ಚು ಮಾಡಿ, ಕ್ಷೇತ್ರವನ್ನು ಅಭಿವೃದ್ದಿ ಪಡಿಸಿದ್ದೇನೆ.250 ಕೋಟಿ ರೂಗಳಲ್ಲಿ 21500 ಮನೆಗಳು, 500 ಕೋಟಿ ರೂಗಳ ವೆಚ್ಚದಲ್ಲಿ ಪ್ರತಿ ರೈತರ ಪಂಪ್ಸೆಟ್ಗೆ ಪ್ರತ್ಯೇಕ ಟಿ.ಸಿ. ಅಳವಡಿಸಲಾಗಿದೆ. ಹೆಬ್ಬೂರು-ಗೂಳೂರು ಏತ ನೀರಾವರಿ ಜಾರಿಗೆ ತಂದು ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದೇನೆ ಎಂದು ಸುರೇಶಗೌಡ ನುಡಿದರು.
ಕಳೆದ ಬಾರಿ ನಿವೆಲ್ಲರೂ ನನಗೆ ಬಹುಮತ ನೀಡಿದ್ದರೂ, ಹಾಲಿ ಶಾಸಕರು 16500 ಮಕ್ಕಳು ಮತ್ತು 32 ಸಾವಿರ ತಾಯಂದಿರ ಹೆಸರಿನಲ್ಲಿ ನಕಲಿ ಬಾಂಡ್ಗಳನ್ನು ಹಂಚಿ ವಾಮ ಮಾರ್ಗದಿಂದ ಚುನಾವಣೆ ಗೆದ್ದಿರುವುದು ಹೈಕೋರ್ಟ ತೀರ್ಪಿನಿಂದ ಸಾಭೀತಾಗಿದೆ.ಸುಪ್ರಿಂ ಕೋರ್ಟು ಅವರಿಗೆ ಷರತ್ತು ಬದ್ದ ತಡೆಯಾಜ್ಞೆ ನೀಡಿದೆ. ಇವುಗಳನ್ನು ಕ್ಷೇತ್ರದ ಮತದಾರರು ಅರ್ಥ ಮಾಡಿಕೊಂಡು ಮತ ನೀಡಬೇಕೆಂದು ಸುರೇಶಗೌಡ ಮನವಿ ಮಾಡಿದರು.
ನಿವೃತ್ತ ಸಿಪಿಐ ಮುನಿರಾಜು ಮಾತನಾಡಿ,ಅರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬಹಳ ಹಿಂದುಳಿದಿರುವ ಬೋವಿ ಸಮಾಜ ಅಭಿವೃದ್ದಿಯಾಗಬೇಕಾದರೆ ನಾವೆಲ್ಲರೂ ಬಿ.ಸುರೇಶಗೌಡರಿಗೆ ಮತ ನೀಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಬೋವಿ ಸಮಾಜದ ಅಧ್ಯಕ್ಷ ಒಂಕಾರ್,2008ರಿಂದ 2018ರವರೆಗೆ ಸುರೇಶಗೌಡರು ಶಾಸಕರಾಗಿದ್ದಾಗ ನಮ್ಮ ಸಮಾಜವನ್ನು ಗುರುತಿಸಿ ಅನೇಕ ಅವಕಾಶವನ್ನು ಕಲ್ಪಿಸಿದ್ದಾರೆ. ಬಡವರು ಮಕ್ಕಳು ಓದಲು ಸರಕಾರಿ ಶಾಲೆಗಳ ಅಭಿವೃದ್ದಿ,ಎಲ್ಲರಿಗೂ ಕುಡಿಯುವ ನೀರು ಎಲ್ಲವನ್ನು ನೀಡಿದ್ದಾರೆ.ಗ್ರಾಮಾಂತರದಲ್ಲಿ ಬಿಜೆಪಿ ಅಲೆಯಿದ್ದು, ಅದನ್ನು ಮತವಾಗಿ ಪರಿವರ್ತಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಸಭೆಯಲ್ಲಿ ನಿವೃತ್ತ ಎಇಇ ಗಂಗಯ್ಯ, ಅರಿಯೂರು ಗ್ರಾ.ಪಂ.ಸದಸ್ಯೆ ಸಿದ್ದಗಂಗಮ್ಮ, ಗ್ರಾ.ಪಂ.ಸದಸ್ಯರಾದ ಆಶಾ ಸುಲೋಚನ, ಸಮಾಜದ ಮುಖಂಡರಾದ ರಾಜಕುಮಾರ್,ಗಂಗಮ್ಮ ಆನಂದ, ಮುನೇಶ್, ಚಂದ್ರಪ್ಪ, ನಟರಾಜು, ನಾಗರಾಜು, ಮಂಜುನಾಥ್, ಪ್ರಸನ್ನಕುಮಾರ್,ರುಕ್ಮಣಿ ವೆಂಕಟೇಶ್,ಜಯಚಂದ್ರ, ಹನುಮಂತಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.