ತುಮಕೂರು
ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಂದ 80 ವರ್ಷ ಮೇಲ್ಪಟ್ಟ 6595 ಮತದಾರರು ಹಾಗೂ ವಿಶೇಷ ಚೇತನ ಮತದಾರರು 2845 ಸೇರಿ ಒಟ್ಟು 9,440 ಮತದಾರರು ಅಂಚೆ ಮತದಾನ ಮಾಡಲು ಇಚ್ಛಿಸಿದ್ದು, ಅರ್ಹ ಅಂಚೆ ಮತದಾರರ ಮಾಹಿತಿ ಪಡೆದು ಸೆಕ್ಟರ್‍ವಾರು ಮಾರ್ಗ ನಕ್ಷೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.
ತುಮಕೂರಿನ ಗುಬ್ಬಿ ವೀರಣ್ಣ ಕಲಾ ಮಂದಿರದಲ್ಲಿಂದು ಕರ್ನಾಟಕ ವಿಧಾನಸಭಾ ಚುನಾವಣೆ-2023ರ ಸಂಬಂಧ ಹೋಂ ವೋಟಿಂಗ್ ಕಾರ್ಯಕ್ಕೆ ನಿಯೋಜನೆಗೊಂಡಿರುವ ಪೋಲಿಂಗ್ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 85742 ಮಂದಿ ದಿವ್ಯಾಂಗ ಮತ್ತು 80+ ಮತದಾರರಿಗೆ 12 ಡಿ ಅರ್ಜಿಗಳನ್ನು ವಿತರಿಸಲಾಗಿದ್ದು, ಈ ಪೈಕಿ 9440 ಮತದಾರರು ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಇಚ್ಛಿಸಿದ್ದು, ಅವರುಗಳ ವಾಸ ಸ್ಥಳಕ್ಕೆ ಮತಗಟ್ಟೆ ಅಧಿಕಾರಿಗಳ ತಂಡ ಭೇಟಿ ನೀಡಿ ಅಂಚೆ ಮತ ಪತ್ರ ಮೂಲಕ ಹೋಂ ವೋಟಿಂಗ್ ಮಾಡಿಸುವ ಸಂಬಂಧ ಮತಗಟ್ಟೆ ಅಧಿಕಾರಿಗಳ ತಂಡ ಕಾರ್ಯ ನಿರ್ವಹಿಸುವುದು ಎಂದು ತಿಳಿಸಿದರು.
ಅಂಚೆ ಮತಪತ್ರ ಮತದಾರರು ಮತ್ತು ಸೆಕ್ಟರ್ ಆಧಾರದ ಮೇಲೆ ಮಾರ್ಗ ನಕ್ಷೆಗಳನ್ನು ಸಿದ್ಧಪಡಿಸುವುದು, ಮತಗಟ್ಟೆಗಳಿಗೆ ಭೇಟಿ ನೀಡುವ ದಿನಾಂಕ ಮತ್ತು ಸಮಯವನ್ನು ನಿಗಧಿಪಡಿಸಿಕೊಳ್ಳುವುದು, ಅನುಮೋದಿತ ಸೆಕ್ಟರ್ ಮಾರ್ಗ ನಕ್ಷೆಯನ್ನು ಅಭ್ಯರ್ಥಿಗಳೊಂದಿಗೆ ಹಂಚಿಕೊಳ್ಳುವುದು ಎಂದು ವಿವರಿಸಿದರು.
ಇಬ್ಬರು ಚುನಾವಣಾಧಿಕಾರಿಗಳು, ಒಬ್ಬರು ಮೈಕ್ರೋ ಅಬ್ಸರ್ವರ್, ಒಬ್ಬ ಪೊಲೀಸ್ ಸಿಬ್ಬಂದಿ, ಒಬ್ಬ ವಿಡಿಯೋಗ್ರಾಫರ್ ಒಳಗೊಂಡ ಮತಗಟ್ಟೆಗೆ ತೆರಳುವ ತಂಡವನ್ನು ರಚಿಸಿಕೊಂಡು ನಮೂನೆ 12ಡಿ ರಲ್ಲಿ ದಾಖಲಿಸಿರುವ ಮತದಾರರ ವಿಳಾಸಕ್ಕೆ ತೆರಳುವುದು, ಮತದಾನದ ತಂಡವು ಅಂಚೆ ಮತದಾರರಿಗೆ ಮತದಾನಕ್ಕೆ ಆಗಮಿಸುವ ಬಗ್ಗೆ ಬಿಎಲ್‍ಒ ಎಸ್.ಎಂ.ಎಸ್. ಅಥವಾ ಅಂಚೆ ಮೂಲಕ ಮುಂಚಿತವಾಗಿ ತಿಳಿಸುವುದು. ಅಂಚೆ ಮತಪತ್ರವನ್ನು ಮತದಾರರಿಗೆ ವಿತರಿಸುವ ಮುನ್ನ ಸದರಿ ಮತದಾರರ ಹೆಸರು ದಾಖಲೆಗಳು ಮತಪಟ್ಟಿಯಲ್ಲಿ ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು ಎಂದು ಸೂಚಿಸಿದರು.
ಹೋಂ ವೋಟಿಂಗ್ ಪ್ರಕ್ರಿಯೆ ಏಪ್ರಿಲ್ 29, 2023 ರಿಂದ ಪ್ರಾರಂಭಿಸಿ ಮತದಾನ ಮಾಡುವ ಪ್ರಕ್ರಿಯೆಯನ್ನು ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ಕಟ್ಟುನಿಟ್ಟಾಗಿ ಕ್ರಮವಹಿಸಲು ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಿಇಓ ಹಾಗೂ ಸ್ವೀಪ್ ಅಧ್ಯಕ್ಷೆ ಡಾ: ಕೆ. ವಿದ್ಯಾಕುಮಾರಿ ಹಾಗೂ 11 ವಿಧಾನಸಭಾ ಕ್ಷೇತ್ರಗಳ ಆರ್‍ಓ ಮತ್ತು ಇತರೆ ಪೋಲಿಂಗ್ ಅಧಿಕಾರಿಗಳು ತರಬೇತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.