ತುಮಕೂರು


ಕಾಂಗ್ರೆಸ್‍ನ ಗಾಂಧಿವಾದ ಮತ್ತು ಬಿಜೆಪಿಯ ನಾಥೂರಾಮ್ ಗೂಡ್ಸೆ ವಾದದ ನಡುವೆ ಪ್ರಸಕ್ತ ಚುನಾವಣೆ ನಡೆಯುತ್ತಿದ್ದು, ಜನರ ಆಶೀರ್ವಾದ ಬಲದಿಂದ ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ದೆಹಲಿ ಕಾಂಗ್ರೆಸ್ ಶಾಸಕಿ ಹಾಗೂ ಎಐಸಿಸಿ ಮಾಧ್ಯಮ ವಕ್ತಾರೆ ಅಲ್ಕಾಲಂಬಾ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಹೊಸ ಭರವಸೆಗಳು ಮತ್ತು ಬಿಜೆಪಿ ಪಕ್ಷದ ಶೂನ್ಯ ಸಾಧನೆ ಪ್ರಸಕ್ತ ಚುನಾವಣೆಯಲ್ಲಿ ಚರ್ಚೆಗೆ ಗ್ರಾಸವಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಜನಮತ ವ್ಯಕ್ತವಾಗಲಿದೆ ಎಂದರು.
ಶೇ.40 ರಷ್ಟು ಕಮೀಷನ್ ಪಡೆಯುವಲ್ಲಿ ಮಗ್ನವಾದ ರಾಜ್ಯ ಬಿಜೆಪಿ ಸರ್ಕಾರ ಅಭಿವೃದ್ಧಿಯತ್ತ ಗಮನಹರಿಸದೆ ಕೋಮು ದ್ವೇಶ ಬಿತ್ತಿ ಸಮಾಜದ ಶಾಂತಿ, ಸೌಹಾರ್ಧತೆ, ಸ್ವಾಸ್ತ್ಯವನ್ನು ಕೆಡಿಸುವ ಹುನ್ನಾರ ನಡೆಸಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಅವಕಾಶ ನೀಡುವುದಿಲ್ಲ ಎಂದರು.
ಕೇಂದ್ರ ಸರ್ಕಾರದಲ್ಲಿ ಗೃಹಮಂತ್ರಿಯಾಗಿರುವ ಅಮಿತ್ ಶಾ ಚುನಾವಣಾ ಪ್ರಚಾರದ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಂಗೆ, ಗಲಾಟೆಗಳನ್ನು ಮಾಡಿಸುತ್ತದೆ ಎಂಬ ಅರ್ಥ ಬರುವ ಮಾತುಗಳನ್ನಾಡಿದ್ದು, ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಟೀಕಿಸಿದರು.
ಈ ಹೇಳಿಕೆ ವಿರುದ್ಧ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಚುನಾವಣಾ ಆಯೋಗವನ್ನು ಭೇಟಿ ಮಾಡಿ ದೂರು ನೀಡಿದ್ದಾರೆ ಎಂದರು.
ಕರ್ನಾಟಕದಲ್ಲಿ ಮರಾಠಿಗರು ಮತ್ತು ಕನ್ನಡಿಗರ ನಡುವೆ ಕಿಚ್ಚು ಹಚ್ಚಿರುವ ಬಿಜೆಪಿ ಈಗ ನಂದಿನಿ ಮತ್ತು ಅಮೂಲ್ ನಡುವೆ ಗೊಂದಲ ಸೃಷ್ಠಿ ಮಾಡಿ ನಂದಿನಿಯನ್ನು ರದ್ದುಪಡಿಸಿ ಅಮೂಲ್ ಅನ್ನು ಕರ್ನಾಟಕದಲ್ಲಿ ಅಸ್ಥಿತ್ವಕ್ಕೆ ತರಲು ಸಂಚು ರೂಪಿಸಿದೆ ಎಂದು ಆರೋಪಿಸಿದರು.
ತುಮಕೂರು ಜಿಲ್ಲೆಯಲ್ಲಿ ಎಲ್ಲ ಸಮುದಾಯದವರನ್ನು ಒಗ್ಗಟ್ಟಾಗಿ ಸೇರಿಸಿ ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳು ಎಲ್ಲರ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಇದ್ದು, ಉತ್ತಮ ಸಾಧನೆ ಮಾಡಲಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮದೆ ಪಕ್ಷದ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಜಗದೀಶ್‍ಶೆಟ್ಟರ್ ಪ್ರಸಕ್ತ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ರಕ್ತದಲ್ಲಿ ಬರೆದುಕೊಡುವುದಾಗಿ ಹೇಳಿದ್ದಾರೆ. ಇಂತಹ ದ್ವೇಷದ ರಾಜಕಾರಣ ಅವರಿಗೆ ಶೋಭೆ ತರುವುದಿಲ್ಲ ಎಂದರು.
ಬಿಜೆಪಿ ಪಕ್ಷ ಲಿಂಗಾಯತ ಸಮುದಾಯದ ಅನೇಕ ನಾಯಕರನ್ನು ಮೂಲೆಗುಂಪು ಮಾಡಲು ಹೊರಟ್ಟಿದ್ದು, ಇದರಿಂದ ಅಸಮಾಧಾನಗೊಂಡ ಅನೇಕ ನಾಯಕರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇದರಿಂದಾಗಿ ಆ ಸಮುದಾಯದ ಜನ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಮಾತನಾಡಿ, ಎಐಸಿಸಿ ನಾಯಕಿ ಪ್ರಿಯಾಂಕಗಾಂಧಿ ಅವರು ಹಿರಿಯೂರಿನಲ್ಲಿ ಈಗಾಗಲೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಅದ್ದೂರಿ ಪ್ರಚಾರ ನಡೆಸಿದ್ದು, ಈ ಪ್ರಚಾರದಲ್ಲಿ ತುಮಕೂರು ಜಿಲ್ಲೆಯ ಪಾವಗಡ, ಶಿರಾ, ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು ಎಂದರು.
ಮೇ.1 ರಂದು ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿಗೆ ರಾಹುಲ್ ಗಾಂಧಿ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ. ಹಾಗೆಯೇ ಮೇ.5ರೊಳಗೆ ಪ್ರಿಯಾಂಕಗಾಂಧಿ ಅವರೂ ಸಹ ಜಿಲ್ಲೆಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಕೈಗೊಳ್ಳಲಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪರ ಅಲೆ ಎದ್ದಿದ್ದು, 11 ವಿಧಾನಸಭಾ ಕ್ಷೇತ್ರಗಳಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ, ರಾಜ್ಯ ವಕ್ತಾರೆ ಭವ್ಯ ನರಸಿಂಹಮೂರ್ತಿ, ಬೆಂಗಳೂರು ನಗರ ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯಾಧ್ಯಕ್ಷ ಎಂ.ಆರ್.ಮಹೇಶ್, ನಿಂಗರಾಜು, ಮರಿಚನ್ನಮ್ಮ, ಡಾ. ಅರುಂಧತಿ ಮುಂತಾದವರು ಹಾಜರಿದ್ದರು.

(Visited 4 times, 1 visits today)