ತುಮಕೂರು-
ರಾಜ್ಯದಲ್ಲಿ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ 80 ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಇಂದಿನಿಂದ 80 ವರ್ಷ ಮೇಲ್ಪಟ್ಟ ಮತದಾರರು ಮನೆಯಲ್ಲಿ ಮತದಾನ ಮಾಡುವ ಕಾರ್ಯಕ್ಕೆ ಚಾಲನೆ ದೊರೆಯಿತು.
80 ವರ್ಷ ಮೇಲ್ಪಟ್ಟ ಮತದಾರರಿಗೆ ಅನುಕೂಲವಾಗುವಂತೆ ಆಯೋಗ ನಮೂನೆ-12ಡಿ ಮೂಲಕ ಅರ್ಜಿ ಸಲ್ಲಿಸಿ ಅಂಚೆ ಮತಪತ್ರಗಳನ್ನು ಪಡೆದು ಮತದಾನ ಮಾಡಲು ಮೊದಲ ಬಾರಿಗೆ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಬಿಎಲ್‍ಓಗಳು, ಪಿಡಬ್ಲ್ಯೂಡಿ ಮತ್ತು 80 ವರ್ಷ ಮೇಲ್ಪಟ್ಟ ಮತದಾರರ ಮನೆಗಳಿಗೆ ತೆರಳಿ ನಮೂನೆ-12 ಡಿ ಅರ್ಜಿಗಳನ್ನು ಹಂಚಿಕೆ ಮಾಡಿದ್ದು, ಮತಗಟ್ಟೆಗಳಿಗೆ ಬರಲು ಇಚ್ಛಿಸದ 80 ವರ್ಷ ಮೇಲ್ಪಟ್ಟ ಮತದಾರರು ಅಂಚೆ ಮತಪತ್ರಗಳ ಮೂಲಕ ಮನೆಯಲ್ಲೆ ಮತ ಚಲಾಯಿಸಿದರು.
ನಗರದ ಚಿಕ್ಕಪೇಟೆಯಲ್ಲಿರುವ 80 ವರ್ಷ ಮೇಲ್ಪಟ್ಟ ಸುಗಂಧರಾಜು ಮತ್ತು ಅವರ ಪತ್ನಿ ವಸಂತಮ್ಮ ಅವರು ತಮ್ಮ ಮನೆಯಲ್ಲೇ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳ ಏಜೆಂಟರ್ ಸಮ್ಮುಖದಲ್ಲೇ ಅಂಚೆ ಮತಪತ್ರದ ಮೂಲಕ ಮತದಾನ ಮಾಡಿದರು.
ಇಂದಿನಿಂದ 80 ವರ್ಷ ಮೇಲ್ಪಟ್ಟ ಮತದಾರರ ಅಂಚೆ ಮತಪತ್ರ ಮತದಾನ ಆರಂಭವಾಗಿದ್ದು, ಜಿಲ್ಲೆಯಾದ್ಯಂತ ಈ ಪ್ರಕ್ರಿಯೆ ನಡೆದಿದ್ದು, ಬಿಎಲ್‍ಓ, ಸೆಕ್ಟರ್ ಅಧಿಕಾರಿ, ಮತಗಟ್ಟೆ ಅಧಿಕಾರಿಗಳು, ಮೈಕ್ರೋ ಅಬ್ಸರ್ವರ್, ವಿಡಿಯೋ ಗ್ರಾಫರ್‍ಗಳು ಮತದಾರರ ಮನೆಗಳಿಗೆ ತೆರಳಿ ಅಂಚೆ ಮತಪತ್ರಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಇಂದಿನಿಂದ ಜಿಲ್ಲೆ 11 ವಿಧಾನಸಭಾ ಕ್ಷೇತ್ರಗಳಲ್ಲೂ 80 ವರ್ಷ ಮೇಲ್ಪಟ್ಟ ಮತದಾರರ ಮತದಾನ ಕಾರ್ಯ ನಡೆಯುತ್ತಿದೆ.