ತುಮಕೂರು


ಭರಣಿ ಮಳೆ ಹುಯ್ದರೆ ಧರಣಿಯೆಲ್ಲಾ ಆರಂಭ ಎಂಬ ಗಾದೆ ಮಾತಿದೆ. ಹಾಗಾಗಿ ಧರಣಿ ಮಳೆಗಾಗಿ ರೈತ ಸಮೂಹ ಆಗಸದತ್ತ ಮುಖಮಾಡಿ ಕುಳಿತಿದ್ದ ಸಂದರ್ಭದಲ್ಲಿ ರಾತ್ರಿಯಿಡೀ ಧಾರಾಕಾರ ವರ್ಷಧಾರೆಯಿಂದ ಹಳ್ಳಿಗಳಲ್ಲಿ ತೋಟಗಳು, ಕೃಷಿ ಭೂಮಿಗಳು ನೀರು ತುಂಬಿದ್ದರೆ, ನಗರ ಪ್ರದೇಶಗಳಲ್ಲಿನ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ಕಳೆದ ವರ್ಷ ನಿಗದಿಗಿಂತ ಹೆಚ್ಚು ಮಳೆ ಸುರಿದ ರೀತಿಯಲ್ಲೆ ರಾತ್ರಿಯೂ ವರ್ಷಧಾರೆ ಸುರಿದಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಆದರೆ ನಗರ ಪ್ರದೇಶದ ಕೆಲ ತಗ್ಗು ಪ್ರದೇಶಗಳು ಜಲಾವೃತಗೊಂಡಿರುವುದರಿಂದ ಆ ಭಾಗದ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.


ಕಳೆದ 3-4 ತಿಂಗಳಿಂದ ವರ್ಷಧಾರೆ ಇಲ್ಲದೆ ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನಸಾಮಾನ್ಯರಿಗೆ ರಾತ್ರಿ 11 ಗಂಟೆಗೆ ಆರಂಭವಾದ ಮಳೆ ಮಧ್ಯರಾತ್ರಿ 2 ಗಂಟೆವರೆಗೂ ಧಾರಾಕಾರವಾಗಿ ಸುರಿದಿದ್ದು, ನಂತರ ಮುಂಜಾನೆ ವರೆಗೂ ತುಂತುರು ಮಳೆಯಾಯಿತು.
ಇಡೀ ರಾತ್ರಿ ವರ್ಷಧಾರೆ ಸುರಿದಿದ್ದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ತಾಕುಗಳು, ಅಡಿಕೆ, ತೆಂಗಿನ ತೋಟಗಳು ಜಲಾವೃತಗೊಂಡರೂ ಸಹ ಬೇಸಿಗೆಯ ಬಿಸಿಲಿನ ಝಳದಿಂದ ತತ್ತರಿಸಿದ್ದ ತೋಟಗಳು ಮಳೆಯಿಂದಾಗಿ ನಳನಳಿಸುತ್ತಿವೆ.
ರಾತ್ರಿ ಧಾರಾಕಾರವಾಗಿ ಭರಣಿ ಮಳೆ ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಶುಭ ಸೂಚನೆಯಾಗಿದೆ ಎಂಬುದು ರೈತರ ಸಂತಸದ ಮಾತು.
ತಗ್ಗು ಪ್ರದೇಶಗಳಿಗೆ ನುಗ್ಗಿದ ಮಳೆ ನೀರು
ಇನ್ನು ನಗರದಲ್ಲೂ ಸಹ ಧಾರಾಕಾರ ಮಳೆ ಸುರಿದಿರುವುದರಿಂದ ಶೆಟ್ಟಿಹಳ್ಳಿ ಗೇಟ್‍ನಲ್ಲಿರುವ ರೈಲ್ವೆ ಅಂಡರ್ ಪಾಸ್, ಕುಣಿಗಲ್ ರಸ್ತೆಯ ಅಂಡರ್ ಪಾಸ್, ಅಳಶೆಟ್ಟಿಕೆರೆ ಪಾಳ್ಯದಲ್ಲಿರುವ ಬಾಲಕಿಯ ಬಾಲಮಂದಿರ ಸ್ವೀಕಾರ ಕೇಂದ್ರ, ಆದಾಯ ತೆರಿಗೆ ಇಲಾಖೆ ಕಚೇರಿ ಆವರಣ, ಸಿದ್ದಗಂಗಾ ಬಡಾವಣೆ ಸೇರಿದಂತೆ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಜನರು ಮಳೆ ನೀರನ್ನು ಹೊರ ಹಾಕಲು ಹರಸಾಹಸ ಪಡುವಂತಾಯಿತು.
ಸಿದ್ದಗಂಗಾ ಬಡಾವಣೆ ಸೇರಿದಂತೆ ನಗರದ ವಿವಿಧೆಡೆ ತಗ್ಗುಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಆ ಭಾಗದ ನಿವಾಸಿಗಳು ಇಡೀ ರಾತ್ರಿ ನಿದ್ದೆಯಿಲ್ಲದೆ ಮನೆಗೆ ನುಗ್ಗಿದ ಮಳೆ ನೀರನ್ನು ಹೊರ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕುಣಿಗಲ್ ರಸ್ತೆ ಮತ್ತು ಶೆಟ್ಟಿಹಳ್ಳಿ ಗೇಟ್‍ನ ಅಂಡರ್‍ಪಾಸ್‍ಗಳು ಮಳೆ ನೀರಿನಿಂದ ಜಲಾವೃತಗೊಂಡಿದ್ದರಿಂದ ರಾತ್ರಿ ವಾಹನಗಳು ಸಂಚರಿಸಲು ಪರದಾಡುವಂತಾಗಿತ್ತು. ಬೆಳಿಗ್ಗೆ ವೇಳೆಗೆ ನೀರು ಕಡಿಮೆಯಾಗಿದ್ದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅನುವಾಯಿತು.
ಕೆರೆಯಾದ ಅಂಡರ್‍ಪಾಸ್
ಶೆಟ್ಟಿಹಳ್ಳಿ ಅಂಡರ್ ಪಾಸ್‍ನಲ್ಲಿ ಆರಡಿಗೂ ಹೆಚ್ಚು ನೀರು ನಿಂತು ಕೆರೆಯಂತಾಗಿದೆ. ಬೆಳಿಗ್ಗೆ ಕಾಲೇಜಿಗೆ ಹೋಗುವವರಿಗೆ, ಕಛೇರಿಗೆ ಹೋಗುವವರಿಗೆ ತೀವ್ರ ತೊಂದರೆ ಉಂಟಾಗಿತ್ತು.
ಸ್ಮಾರ್ಟ್ ಸಿಟಿಯೆಂದು ಕರೆಸಿಕೊಳ್ಳುತ್ತಿರುವ ತುಮಕೂರಿಗೆ ಸ್ಮಾರ್ಟ್‍ಸಿಟಿ ಯೋಜನೆಗಳು ಜಾರಿಯಾದ ಮೇಲೆ ಪ್ರತಿ ವರ್ಷ ಮಳೆ ಪ್ರಾರಂಭವಾದ ಕೂಡಲೇ ಹಲವಾರು ಸಮಸ್ಯೆಗಳು ಎದುರಾಗುತ್ತಿವೆ.
ವರ್ಷದ ಮೊದಲ ಮಳೆಗೆ ಶೆಟ್ಟಿಹಳ್ಳಿ ಅಂಡರ್ ಪಾಸ್ ಮತ್ತು ಕೋತಿ ತೋಪಿನಲ್ಲಿ ಕೆರೆಯಂತೆ ನೀರು ನಿಂತಿವೆ.
ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣವಾಗಿರುವ ಈ ಅಂಡರ್ ಪಾಸ್, ನಿರ್ಮಾಣವಾದ ಮೇಲೆ ನನಗೂ, ಅಂಡರ್ ಪಾಸ್‍ಗೂ ಸಂಬಂಧವಿಲ್ಲ ಎಂಬಂತೆ ನಡೆದುಕೊಳ್ಳುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ಮಳೆಗಾಲ ಪ್ರಾರಂಭಕ್ಕೂ ಮುನ್ನ ಎಚ್ಚೆತ್ತು ಶೆಟ್ಟಿಹಳ್ಳಿ, ಮಾರುತಿನಗರ, ನೃಪತುಂಗ ಬಡಾವಣೆ, ಜಯನಗರ, ಬಡಾವಣೆಗಳ ಜನರ ಬವಣೆಯನ್ನು ಈಗಲಾದರೂ ಸಂಬಂಧಪಟ್ಟವರು ಗಮನಿಸಿ ಅಂಡರ್ ಪಾಸ್‍ನಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವ ಅಗತ್ಯವಿದೆ.
ಇಡೀ ರಾತ್ರಿ ವರ್ಷಧಾರೆ ಧಾರಾಕಾರವಾಗಿ ಸುರಿದ ಪರಿಣಾಮ ತಗ್ಗುಪ್ರದೇಶಗಳು ಜಲಾವೃಗೊಂಡರೂ ಸಹ ಅದೃಷ್ಟವಶಾತ್ ಯಾವುದೇ ಅನಾಹುತಗಳು ಸಂಭವಿಸಿಲ್ಲ.

(Visited 1 times, 1 visits today)