ತುಮಕೂರು
2023-24ನೇ ಶೈಕ್ಷಣಿಕ ವರ್ಷಾರಂಭದ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿಯೇ ಪ್ರಪ್ರಥಮವಾಗಿ ಆರಂಭಿಸಲ್ಪಟ್ಟಿರುವ ಆಹಾರ ವಿತರಣಾ ಯೋಜನೆ ಮತ್ತೆ ಪುನರಾರಂಭವಾಗಿದೆ. ಇಂದು ತುಮಕೂರು ವಿಶ್ವವಿದ್ಯಾನಿಲಯದ ಕಲಾ ವಿಭಾಗದ ಪ್ರಾಂಗಣದಲ್ಲಿ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳ ವಿದ್ಯಾರ್ಥಿ / ವಿದ್ಯಾರ್ಥಿನಿಯರು ಸಾಲು ಸಾಲಾಗಿ ನಿಂತು ಆಹಾರವನ್ನು ಪಡೆಯುತ್ತಿರುವ ದೃಶ್ಯ ಅದ್ಭುತವಾಗಿತ್ತು. ಆಹಾರ ವಿತರಣಾ ಸಮಿತಿಯ ಅಧ್ಯಕ್ಷರಾದ ಪರಮ ಪೂಜ್ಯ ಸ್ವಾಮಿ ಜಪಾನಂದಜೀ ರವರು ವಿದ್ಯುಕ್ತವಾಗಿ ಚಾಲನೆ ನೀಡಿದರು.
ಸರಿಸುಮಾರು 1500 ವಿದ್ಯಾರ್ಥಿ / ವಿದ್ಯಾರ್ಥಿನಿಯರಿಗೆ ಪ್ರತಿ ದಿನ ಮಧ್ಯಾನ್ಹದ ಭೋಜನ ವ್ಯವಸ್ಥೆಯನ್ನು 6 ಮಾರ್ಚ್ 2023ರಂದು ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ನ್ಯಾ. ಶ್ರೀ ಸಂತೋಷ್ ಹೆಗ್ಡೆ, ನ್ಯಾ.ಶ್ರೀಮತಿ ರತ್ನಕಲಾ ಹಾಗೂ ವಿಶ್ವವಿದ್ಯಾನಿಲಯದ ಕುಲಪತಿಗಳು ಮತ್ತು ಶ್ರೀ ಶ್ರೀ ಸಿದ್ಧಗಂಗಾ ಶ್ರೀಗಳ ಸಮ್ಮುಖದಲ್ಲಿ ಆರಂಭವಾದ ಯೋಜನೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಏತನ್ಮಧ್ಯೆ ಚುನಾವಣೆಯ ನಿಮಿತ್ತ 15 ದಿನಗಳ ಕಾಲ ಸ್ಥಗಿತವಾಗಿದ್ದ ಈ ಯೋಜನೆ ಪುನರಾರಂಭವಾಗಿದೆ. ಇಂದು ಪೂಜ್ಯ ಸ್ವಾಮಿ ಜಪಾನಂದಜೀ ರವರು ತಾವೇ ಸ್ವತಃ ನಿಂತು ವಿದ್ಯಾರ್ಥಿ / ವಿದ್ಯಾರ್ಥಿನಿಯರಿಗೆ ಆಹಾರವನ್ನು ವಿತರಿಸುವ ಮೂಲಕ ಯೋಜನೆಗೆ ಚಾಲನೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಈ ಆಹಾರ ವಿತರಣಾ ಯೋಜನೆಗೆ ಬೇಕಾದ ಪಾತ್ರೆ ಸರಂಜಾಮುಗಳನ್ನು ಪೂಜ್ಯ ಸ್ವಾಮೀಜಿಯವರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಆದ ಶ್ರೀಮತಿ ನಾಹೀದಾ ಜಮ್ ಜಮ್ ರವರು ಉಪಸ್ಥಿತರಿದ್ದರು. ಹಾಗೆಯೇ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಕರಿಯಣ್ಣ, ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ.ಪರಶುರಾಮ್ ಹಾಗೂ ಈ ಯೋಜನೆಯ ಸಂಯೋಜಕರಾದ ಶ್ರೀ ಗುಂಡೇಗೌಡ ರವರು, ಶ್ರೀ ನಾಗರಾಜ್ ರವರು ಉಪಸ್ಥಿತರಿದ್ದರು.
ಶುದ್ಧವಾದ, ರುಚಿಕರವಾದ ಹಾಗೂ ವಿವಿಧ ರೀತಿಯ ಆಹಾರವನ್ನು ಸಿದ್ಧಪಡಿಸಲು ಸರ್ವರೀತಿಯಲ್ಲಿ ಸಹಕಾರ ನೀಡುತ್ತಿರುವ ಶ್ರೀ ಶಿರಡಿ ಬಾಬಾ ಮಂದಿರ, ಆದರ್ಶನಗರದ ಅಧ್ಯಕ್ಷರಾದ ಶ್ರೀ ನಟರಾಜಶೆಟ್ಟಿ ಮತ್ತು ಅವರ ತಂಡ ಹಾಗೆಯೇ ಈ ಯೋಜನೆಯ ಗೌರವಾನ್ವಿತ ಸದಸ್ಯರುಗಳಾದ ಶ್ರೀ ನಾಗಣ್ಣ, ಶ್ರೀ ರಮೇಶ್ ಬಾಬು, ಶ್ರೀ ಚಂದ್ರಶೇಖರ್, ಶ್ರೀ ರಾಮಮೂರ್ತಿ ಹಾಗೂ ಶ್ರೀ ಮಹಾಬಲಭಟ್ ರವರುಗಳು ಅತ್ಯಂತ ಶ್ರದ್ಧೆ ಹಾಗೂ ಸೇವಾ ತತ್ಪರತೆಯಿಂದ ಸಹಕಾರ ನೀಡುತ್ತಿರುತ್ತಾರೆ.
ಒಟ್ಟಿನಲ್ಲಿ ಪೂಜ್ಯ ಸ್ವಾಮಿ ಜಪಾನಂದಜೀ ರವರ ಅಧ್ಯಕ್ಷತೆಯಲ್ಲಿ ಆರಂಭವಾಗಿರುವ ಈ ಮಧ್ಯಾನ್ಹ ಭೋಜನ ಯೋಜನೆ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿ / ವಿದ್ಯಾರ್ಥಿನಿಯರು ಹಾಗೂ ಸ್ನಾತಕೋತ್ತರ ಪದವೀದರ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಮತ್ತು ಸಂಶೋಧನಾ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಮತ್ತಿತರರೂ ಸಹ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಈ ಯೋಜನೆಯು ಮುಖ್ಯವಾಗಿ ಗ್ರಾಮಾಂತರ ಪ್ರದೇಶದಿಂದ ಅಂದರೆ ದಾಬಸ್‍ಪೇಟೆ, ದೊಡ್ಡಬಳ್ಳಾಪುರ, ಚಿಕ್ಕನಾಯಕನಹಳ್ಳಿ, ಕುಣಿಗಲ್, ತುರುವೇಕೆರೆ, ವೈ.ಎನ್.ಹೊಸಕೋಟೆ, ಕೊರಟಗೆರೆ ಮುಂತಾದ ಭಾಗಗಳಿಂದ ಪ್ರತಿನಿತ್ಯ ಸಂಚಾರ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅತ್ಯಂತ ಸಹಕಾರಿಯಾಗಿದೆ. ಇಂದು ಪೂಜ್ಯ ಸ್ವಾಮಿ ಜಪಾನಂದಜೀ ರವರೇ ಆಹಾರ ವಿತರಣೆ ಮಾಡುತ್ತಾ ಮೇಲೆ ತಿಳಿಸಿದ ದೂರದೂರ ಪ್ರದೇಶದ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು.
ವಿದ್ಯಾರ್ಥಿ/ವಿದ್ಯಾರ್ಥಿನಿಯರು ತಮ್ಮ ಸಂತೋಷ ಹಾಗೂ ತೃಪ್ತಿಯನ್ನು ಪೂಜ್ಯ ಸ್ವಾಮೀಜಿಯವರಿಗೆ ತಿಳಿಸಿದರು. ತಾವು ಈ ಯೋಜನೆಯಿಂದ ಅತ್ಯಂತ ಶ್ರೇಷ್ಠತಮವಾದ ಪ್ರಯೋಜನವನ್ನು ಪಡೆಯುತ್ತಿದ್ದೇವೆ ಎಂದು ತಿಳಿಸಿದರು.