ತುಮಕೂರು :
ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ ರಾಜಧನ ವಂಚಿಸುತ್ತಿರುವ ಗುತ್ತಿಗೆದಾರರನ್ನು ಹೆಡೆಮುರಿ ಕಟ್ಟಲು ಶಾಸಕ ಡಿ ಸಿ ಗೌರೀಶಂಕರ್ ಮುಂದಾಗಿದ್ದು ಗಣಿ ಪ್ರದೇಶದಲ್ಲಿ ವಾಸ ಮಾಡುವ ಬಡವರ ಸಂಕಷ್ಟ ವನ್ನು ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವ ದಂಧೆಕೋರರ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಗಣಿ ಮತ್ತು ಭೂ ವಿಜ್ಙಾನ ಸಚಿವರನ್ನು ಆಗ್ರಹಿಸಿದ್ದಾರೆ.
ಬೆಳಗಾವಿ ವಿಧಾನಸಭಾ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ತುಮಕೂರು ಗ್ರಾಮಾಂತರ ಶಾಸಕ ಡಿಸಿ ಗೌರಿಶಂಕರ್ ಗ್ರಾಮಾಂತರ ಕ್ಷೇತ್ರದಲ್ಲಿ ಇದುವರೆಗೂ ಮಂಜೂರಾದ ಗ್ರಾನೈಟ್ ಕ್ವಾರಿಗಳು ಹಾಗೂ ಜಲ್ಲಿಕ್ರಶರ್ ಗಳ ಸಂಖ್ಯೆ ಎಷ್ಟು? ಅವು ಯಾವುವು? ಗ್ರಾನೈಟ್ ಕ್ವಾರಿಗಳಿಂದ ಸರಕಾರಕ್ಕೆ ಕೋಟ್ಯಂತರ ರೂಪಾಯಿಗಳ ರಾಜಧನ ನಷ್ಟ ಹಾಗೂ ಪರಿಸರಕ್ಕೆ ಉಂಟಾಗುತ್ತಿರುವ ಹಾನಿ ಸರ್ಕಾರದ ಗಮನಕ್ಕೆ ಬಂದಿದೆಯೇ? ಸರ್ಕಾರದ ಗಮನಕ್ಕೆ ಬಂದಿದ್ದರೆ ರಾಜಧನ ವಂಚಿಸಿರುವ ಎಷ್ಟು ಪ್ರಕರಣ ಸರ್ಕಾರ ಪತ್ತೆಹಚ್ಚಿದ? ಈ ಬಗ್ಗೆ ಇದುವರೆಗೂ ಕೈಗೊಂಡಿರುವ ಕ್ರಮಗಳೇನು ಎಂದು ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಡಿ ಸಿ ಗೌರೀಶಂಕರ್ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ್ದರು. ಶಾಸಕ ಡಿ ಸಿ ಗೌರಿಶಂಕರ್ ಪ್ರಶ್ನೆಗೆ ಗಣಿ ಮತ್ತು ಭೂ ವಿಜ್ಙಾನ ಖಾತೆ ಸಚಿವ ರಾಜಶೇಖರ ಬಿ ಪಾಟೀಲ ಲಿಖಿತ ಉತ್ತರ ನೀಡಿದ್ದಾರೆ.
ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ19 ಎಕರೆ 22 ಗುಂಟೆ ಪ್ರದೇಶದಲ್ಲಿ 8 ಗ್ರಾನೈಟ್ ಕ್ವಾರೆಗಳಿವೆ.159ಎಕರೆ 09 ಗುಂಟೆ ಪ್ರದೇಶದಲ್ಲಿ 44 ಕಟ್ಟಡ ಕಲ್ಲು ಕ್ವಾರೆಗಳಿವೆ.64 ಎಕರೆ 03 ಗುಂಟೆ ಪ್ರದೇಶದಲ್ಲಿ ಕ್ರಷರ್ ಗಳಿವೆ ಎಂದು ಸರ್ಕಾರದ ಗಮನಕ್ಕೆ ಬಂದಿದೆ.2015-16 ರಿಂದ 2017-18 ರ ವರೆಗೆ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಮಂಜೂರು ಮಾಡಿರುವ ಕಲ್ಲು ಗಣಿಗುತ್ತಿಗೆ ಪ್ರದೇಶಗಳಲ್ಲಿ ತೆಗೆದ 26.29.829 ಮೆಟ್ರಿಕ್ ಟನ್ ಉಪಖನಿಜ ಪರವಾನಗಿ ಇಲ್ಲದೆ ಮಾರಾಟ ಮಾಡಿರುವ ಸಂಬಂದ 39 ಗುತ್ತಿಗೆದಾರರಿಗೆ 78.89 ಕೋಟಿ ದಂಡವನ್ನು ವಿಧಿಸಲಾಗಿದೆ.ಈ ಪೈಕಿ 94.88ಲಕ್ಷ ಸಂಗ್ರಹಣೆ ಮಾಡಲಾಗಿದ್ದು ಉಳಿದ 77.94 ಕೋಟಿ ಮೊತ್ತ ಸಂಗ್ರಹಿಸಲು ಕ್ರಮ ವಹಿಸಲಾಗಿದೆ.ಕಳೆದ ಮೂರು ವರ್ಷಗಳಲ್ಲಿ ಮಗನೇ ಗುತ್ತಿಗೆ ಪಡೆಯದೆ ಅನಧಿಕೃತವಾಗಿ ಗಣಿಗಾರಿಕೆ ನಡೆಸಿರುವ 46 ಪ್ರಕರಣ ಪತ್ತೆ ಮಾಡಲಾಗಿದೆ ಅನಧಿಕೃತವಾಗಿ 310 ಮೆಟ್ರಿಕ್ ಟನ್ ಕಟ್ಟಡ ಕಲ್ಲು ಮತ್ತು 222 ಕ್ಯೂಬಿಕ್ ಮೀಟರ್ ಅಲಂಕಾರಿಕ ಶಿಲೆಯನ್ನು ಅನಧಿಕೃತವಾಗಿ ಗಣಿಗಾರಿಕೆ ನಡೆಸಿ ತೆಗೆದಿರುವ ಸಂಬಂಧ 22. 98 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವರು ಮಾಹಿತಿ ನೀಡಿದ್ದಾರೆ.
ಕಲ್ಲು ಗಣಿ ಗುತ್ತಿಗೆ ಪ್ರದೇಶಗಳಲ್ಲಿ ತೆಗೆದಿರುವ ಉಪ ಖನಿಜವನ್ನು ನಿರ್ಧರಣೆ ಮಾಡಲು ಸದರಿ ಕಲ್ಲು ಗಣಿ ಗುತ್ತಿಗೆಗಳನ್ನು ಡಿಜಿಪಿಎಸ್ ಮತ್ತು ಟೋಟಲ್ ಸ್ಟೇಷನ್ ಸರ್ವೇ ಕಾರ್ಯ ನಡೆಸಲಾಗುತ್ತಿದೆ ಸರ್ವೇ ವರದಿ ಅಂತಿಮಗೊಂಡ ನಂತರ ಗುತ್ತಿಗೆದಾರರ ಆಡಿಟ್ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಉಪಖನಿಜ ತೆಗೆದು ಪರವಾನಿಗೆ ಇಲ್ಲದೆ ಸಾಗಾಣಿಕೆ ಮಾಡಿರುವುದು ಕಂಡು ಬಂದಲ್ಲಿ ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ತಿಳಿಸಿದರು.
ಕಲ್ಲು ಗಣಿಗಾರಿಕೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸುರಕ್ಷತಾ ಸಲಕರಣೆಗಳನ್ನು ಗುತ್ತಿಗೆದಾರರು ನೀಡುತ್ತಿಲ್ಲ. ಹೆಚ್ಚಿನ ಪ್ರಮಾಣದ ಸಿಡಿಮದ್ದು ಬಳಸಿ ಬ್ಲಾಸ್ಟಿಂಗ್ ನಡೆಸಲಾಗುತ್ತಿದೆ. 15 ಟನ್ ಅನುಮತಿ ಪಡೆದು 40 ಟನ್ಗಿಂತಲೂ ಹೆಚ್ಚು ಕಲ್ಲನ್ನು ಸಾಗಣೆ ಮಾಡಲಾಗುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗುತ್ತಿದೆ. ಅರಕೆರೆ ಹಾಗು ಅಮಲಾಪುರ ವ್ಯಾಪ್ತಿಯಲ್ಲಿ ಕೇಂದ್ರೀಯ ವಿದ್ಯಾಲಯದ ಅಕ್ಕಪಕ್ಕ ಕಲ್ಲು ಕ್ವಾರೆ ಹಾಗೂ ಕ್ರಷರ್ ಗಳಿದ್ದು ಕಷ್ಟಗಳಿಂದ ಹೊರ ಬರುವ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿದೆ. ತೀವ್ರ ಸ್ವರೂಪದ ಬ್ಲಾಸ್ಟಿಂಗ್ ಇಂದ ಬಡವರ ಮನೆಗಳು ಬಿರುಕು ಬಿಟ್ಟಿವೆ . ತುಮಕೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕೆಲ ಅಧಿಕಾರಿಗಳು ಮಾಲೀಕರೊಂದಿಗೆ ಶಾಮೀಲಾಗಿ ಅಕ್ರಮಗಳಿಗೆ ಪರೋಕ್ಷ ಕುಮ್ಮಕ್ಕು ನೀಡುತ್ತಿದ್ದಾರೆ ಎಂದುಹಂತ ಹಂತವಾಗಿ ಕಲ್ಲುಗಣಿಗಾರಿಕೆಯಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಶಾಸಕ ಡಿಸಿ ಗೌರಿಶಂಕರ್ ಗಣಿ ಮತ್ತು ಭೂವಿಜ್ಞಾನ ಸಚಿವರಿಗೆ ಮನದಟ್ಟು ಮಾಡಿದರು.
ಶಾಸಕರ ಮನವಿ ಆಲಿಸಿದ ಸಚಿವರು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಯನ್ನು ವೀಕ್ಷಿಸಲು ನಾನೇ ಖುದ್ದು ಭೇಟಿ ನೀಡುತ್ತೇನೆ. ನಾನು ಭೇಟಿ ನೀಡಿದ್ದ ವೇಳೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವವರ ವಿರುದ್ಧ ಸ್ಥಳದಲ್ಲಿಯೇ ಕ್ರಮ ಜರುಗಿಸುತ್ತೇನೆ. ಅಲ್ಲದೆ ಶೀಘ್ರವಾಗಿ ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯ ಅಧ್ಯಯನಕ್ಕಾಗಿ ಶೀಘ್ರವಾಗಿ ಗೌಪ್ಯತಾ ತಂಡವನ್ನು ನಿಯೋಜನೆ ಮಾಡಲಾಗುವುದು ಎಂದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆಗೆ ಮುಕ್ತಿ ಕಾಣಿಸಲಾಗುವುದು. ಕಮಕಳಿ ಗಣಿಗಾರಿಕೆಯಲ್ಲಿ ತೊಡಗಿರುವ ಅವರು ಇಂತಹ ಪ್ರಭಾವಿ ವ್ಯಕ್ತಿಗಳೇ ಆಗಿದ್ದರು ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಕ್ಷೇತ್ರದ ಜನತೆ ಹಾಗೂ ಬಡವರ ಹಿತ ಚಿಂತನೆಗೆ ಸದಾ ನಾನು ಬದ್ದ ಎಂದು ಶಾಸಕ ಡಿಸಿ ಗೌರಿಶಂಕರ್ ವಾಗ್ದಾನವಿತ್ತಿದ್ದಾರೆ.