ತುಮಕೂರು


ಕಾಂಗ್ರೆಸ್ ನಾಯಕರು ಚುನಾವಣೆ ಸಂದರ್ಭದಲ್ಲಿ ರಾಜ್ಯದ ಮತದಾರರಿಗೆ ನೀಡಿರುವ 5 ಗ್ಯಾರಂಟಿ ಯೋಜನೆಯನ್ನು ಯಾವುದೇ ಷರತ್ತುಗಳಿಲ್ಲದೆ ಜಾರಿಗೊಳಿಸಬೇಕು. ಇಲ್ಲದಿದ್ದರೆ ಜಿಲ್ಲೆಯಿಂದಲೇ ಬೀದಿಗಳಿದು ಸರ್ಕಾರದ ವಿರುದ್ಧ ಹೋರಾಟ ಪ್ರಾರಂಭಿಸಲಾಗುವುದು ಎಂದು ಗ್ರಾಮಾಂತರ ಶಾಸಕ ಬಿ. ಸುರೇಶ್‍ಗೌಡ ಎಚ್ಚರಿಕೆ ನೀಡಿದರು.
ಕಾಂಗ್ರೆಸ್‍ನವರು ರಾಜ್ಯದ ಮುಗ್ದ ಜನರಿಗೆ ಉಚಿತ ಯೋಜನೆಗಳ ಭರವಸೆ ನೀಡಿ ಗೆದ್ದಿದ್ದಾರೆ. ಈಗ ಅವರನ್ನು ಯಾಮಾರಿಸುವ ಕೆಲಸ ಮಾಡುವುದನ್ನು ಬಿಟ್ಟು ಚುನಾವಣೆಗೂ ಮೊದಲು ನೀಡಿರುವ 5 ಉಚಿತ ಯೋಜನೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ನಗರದ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಗ್ರಾಮಾಂತರ ಕ್ಷೇತ್ರದ ಶಾಸಕರ ಕಚೇರಿಯನ್ನು ವಿಶೇಷ ಪೂಜೆ ನೆರವೇರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆಗೂ ಮುನ್ನ ರಾಜ್ಯದ ಜನರಿಗೆ 5 ಗ್ಯಾರಂಟಿ ಯೋಜನೆಗಳಲ್ಲಿ ಷರತ್ತುಗಳನ್ನು ಹಾಕುವ ಧಮ್ ಇವರಿಗೆ ಇರಲಿಲ್ಲವೇ, ಗೆದ್ದ ಬಳಿಕ ಷರತ್ತು ಎಂದು ಹೇಳುವುದು ಎಷ್ಟು ಸರಿ. ಕೊಟ್ಟ ಮಾತು ತಪ್ಪಿದರೆ ಸರ್ಕಾರ ಎಚ್ಚೆತ್ತುಕೊಳ್ಳುವವರೆಗೂ ಹೋರಾಟ ಮಾಡುತ್ತೇವೆ ಎಂದರು.
ಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಚಿತ ಯೋಜನೆಗಳ ಕುರಿತು ನನಗೂ ಫ್ರೀ, ನಿಮಗೂ ಫ್ರೀ ಎಂದು ಹೇಳಿದ್ದಾರೆ. ಹಾಗಾಗಿ ಒಂದು ತಿಂಗಳಲ್ಲಿ ಎಲ್ಲ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪ್ರಯಾಣ ನೀಡಲೇಬೇಕು. 200 ಯೂನಿಟ್ ಉಚಿತವಾಗಿ ಎಲ್ಲರಿಗೂ ಕೊಡಬೇಕು. ನನಗೂ ಕೊಡಬೇಕು, ಬಡವರಿಗೂ ಕೊಡಬೇಕು ಎಂದು ಆಗ್ರಹಿಸಿದರು.
ಮುಗ್ದ ಜನರಿಗೆ ಭರವಸೆ ನೀಡಿ ಕಾಂಗ್ರೆಸ್ ಪಕ್ಷ ಮತ ಪಡೆದು ಅಧಿಕಾರಕ್ಕೆ ಬಂದಿದೆ. ಹಾಗಾಗಿ ಇನ್ನು 15 ದಿನಗಳಲ್ಲಿ ಭರವಸೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ತುಮಕೂರು ಜಿಲ್ಲೆಯಿಂದಲೇ ಬೀದಿಗಿಳಿದು ಹೋರಾಟ ಮಾಡಲಾಗುವುದು. ನಮ್ಮ ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದಾರೆ. ಅವರಿಗೂ ಈ ಕುರಿತು ಮನವಿ ಮಾಡುತ್ತೇನೆ ಎಂದ ಅವರು, ತಕ್ಷಣ ಈ ಯೋಜನೆಗಳನ್ನು ಜಾರಿ ಮಾಡಲೇಬೇಕು. ಒಂದು ವೇಳೆ ಷರತ್ತುಗಳನ್ನು ಹಾಕಿದರೆ ಹೋರಾಟ ಮಾಡಲಾಗುವುದು ಎಂದರು.
ಮಾಜಿ ಶಾಸಕ ಗೌರಿಶಂಕರ್ ಮತ್ತು ನಾವು ಎಂದೂ ಸಹ ಬೀದಿಗಿಳಿದು ಪರಸ್ಪರ ಜಗಳವಾಡಿಲ್ಲ. ನಾವಿಬ್ಬರೂ ರಾಜಕೀಯ ಹೋರಾಟ ಮಾತ್ರ ಮಾಡಿದ್ದೇವೆ ಅಷ್ಟೇ. ಮಾಧ್ಯಮಗಳು ವಿನಾ ಕಾರಣ ಜಿದ್ದಾಜಿದ್ದಿ , ಮಾರಾಮಾರಿ ರಾಜಕಾರಣ ಎಂದು ಬಿಂಬಿಸಬಾರದು ಎಂದರು.
ಕಳೆದ ಚುನಾವಣೆಯಲ್ಲಿ ಗೌರಿಶಂಕರ್ ನಕಲಿ ಬಾಂಡ್ ಹಂಚಿದ್ದು ಸುಳ್ಳ, ಚೆಕ್‍ಗಳು ಬೌನ್ಸ್ ಹಾಕಿದ್ದು ಸುಳ್ಳ, ನಾವು ಅವರು ಮಾಡಿರುವುದನ್ನೇ ಹೇಳಿದ್ದೇವೆ. ನಾವು ಸುಳ್ಳ ಹೇಳಿಲ್ಲ, ಅಪಪ್ರಚಾರವನ್ನೂ ಮಾಡಿಲ್ಲ. ಅವರು ಅಸಲಿ ಬಾಂಡ್ ಕೊಟ್ಟು ಗೆದ್ದಿದ್ದರೆ ನಾವೇನೂ ತಕರಾರು ಮಾಡುತ್ತಿರಲಿಲ್ಲ. ಬಡವರಿಗೆ ನಕಲಿ ಬಾಂಡ್ ಕೊಟ್ಟು ಮೋಸ ಮಾಡಿರುವುದರಿಂದ ನಾವು ಹೇಳಿದ್ದೇವೆ ಅಷ್ಟೇ. ಯಾವುದೇ ಕಾರಣಕ್ಕೂ ಗೌರಿಶಂಕರ್ ಮೇಲೆ ವೈಯುಕ್ತಿಕ ದ್ವೇಷ ನನಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕಳೆದ 5 ವರ್ಷದಲ್ಲಿ ನೆನೆಗುದಿಗೆ ಬಿದ್ದಿರುವ ಹೆಬ್ಬೂರು-ಗೂಳೂರು ಏತ ನೀರಾವರಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಶುದ್ಧ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಿ, ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿ ನಿಗದಿಯಾಗಿರುವ ಹೇಮಾವತಿ ನೀರು ಹರಿಸುವ ಸಂಬಂಧ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದರು.
ನಮ್ಮ ಕ್ಷೇತ್ರಕ್ಕೆ ಬಡವರಿಗೆ ಸಾಕಷ್ಟು ಮನೆಗಳು ಬಂದಿಲ್ಲ. ಈ ಬಗ್ಗೆಯೂ ಗಮನ ಹರಿಸಿ ಬಡವರಿಗೆ ಸೂರು ಕಲ್ಪಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವೈ.ಹೆಚ್. ಹುಚ್ಚಯ್ಯ, ಡಿ.ಎನ್. ಶಂಕರ್, ವಿಜಯಕುಮಾರ್, ಸಿದ್ದೇಗೌಡ, ಮೈದಾಳ ಮಂಜುನಾಥ್, ಮಾಯರಂಗಯ್ಯ, ರಂಗನಾಥಪ್ಪ ಮತ್ತಿತರರು ಭಾಗವಹಿಸಿದ್ದರು.

(Visited 1 times, 1 visits today)