ತುಮಕೂರು
ಪ್ರಸ್ತುತ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ವಿಚಾರದಲ್ಲಿ ಹೇರಿರುವ ನಿರ್ಬಂಧವನ್ನು ಮಠಮಾನ್ಯಗಳು, ದೇವಾಲಯಗಳ ಅಭಿವೃದ್ಧಿ ವಿಚಾರದಲ್ಲಿ ಸಡಿಲಗೊಳಿಸಿ ಸಹಾಯ ಮಾಡುವಂತೆ ಜಿಲ್ಲೆಯ ವಿವಿಧ ಮಠಾಧೀಶರು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಮನವಿ ಮಾಡಿದ್ದಾರೆ.
ನಗರದ ಎಸ್‌ಎಸ್‌ಐಟಿಯ ಅತಿಥಿಗೃಹದಲ್ಲಿ ತಿಪಟೂರಿನ ಷಡಕ್ಷರಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಅಭಿನಂದಿಸಿದ ವಿವಿಧ ಮಠಾಧೀಶರು, ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ಸರ್ಕಾರ ಸಹಾಯ ಮಾಡಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ರುದ್ರಮುನಿ ಸ್ವಾಮೀಜಿ, ಡಾ. ಜಿ. ಪರಮೇಶ್ವರ್ ಅವರು ಗೃಹ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಅವರನ್ನು ಭೇಟಿ ಮಾಡಿದ್ದು, ಗೌರವ ಸಮರ್ಪಿಸಲಾಗಿದೆ. ಜತೆಗೆ ಜಿಲ್ಲೆಗೆ ಅಗತ್ಯವಾಗಿ ಬೇಕಾಗಿರುವ ಅವಶ್ಯಕತೆಗಳ ಬಗ್ಗೆಯೂ ಅವರೊಂದಿಗೆ ಚರ್ಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಹಾದು ಹೋಗಿರುವ ಎತ್ತಿನಹೊಳೆ ಯೋಜನೆ, ಹೇಮಾವತಿ ನೀರಿನ ವಿಚಾರದ ಬಗ್ಗೆಯೂ ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು.
ತುಮಕೂರು ಇಡೀ ಪ್ರಪಂಚಕ್ಕೆ ಕೊಬ್ಬರಿ ರವಾನೆ ಮಾಡುವಂತಹ ಜಿಲ್ಲೆ. ಆದರೆ ಕೊಬ್ಬರಿ ಬೆಲೆ ಕುಸಿದಿದ್ದು, ಕೇವಲ ೮೫೦೦ ರೂ. ಗಳಿಗೆ ಇಳಿಕೆಯಾಗಿದೆ. ಇದರಿಂದ ರೈತರು ಜೀವನ ನಡೆಸುವುದು ತುಂಬಾ ಕಷ್ಟಕರವಾಗಿದೆ. ಹಾಗಾಗಿ ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ ೧೫ ಸಾವಿರ ರೂ.ಗಳನ್ನಾದರೂ ನಿಗದಿಗೊಳಿಸುವಂತೆ ಒತ್ತಾಯ ಮಾಡಲಾಗಿದೆ ಎಂದರು.
ಈ ಹಿಂದಿನ ಸರ್ಕಾರ ಕರ್ನಾಟಕದ ಸಾವಿರಾರು ಮಠಮಾನ್ಯಗಳಿಗೆ ಅನುದಾನ ನೀಡಿರುವುದು ಗೊತ್ತಿರುವ ವಿಚಾರ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರವಾಹ, ಇನ್ನಿತರ ಕಾರಣಗಳಿಂದಾಗಿ ಎಲ್ಲ ಇಲಾಖೆಗಳಿಗೂ ನಿರ್ಬಂಧ ಹೇರಲಾಗಿದೆ. ಈ ನಿರ್ಬಂಧವನ್ನು ಧಾರ್ಮಿಕ ಸಂಸ್ಥೆಗಳಿಗಾದರೂ ಸಡಿಲಗೊಳಿಸಿ ಮಠಗಳು, ದೇವಾಲಯಗಳ ಅಭಿವೃದ್ಧಿಗೆ, ಸಂಸ್ಥೆಗಳ ಅಭಿವೃದ್ಧಿಗೆ ಸಹಾಯ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಜನ ಸ್ವಾಮೀಜಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಜಿಲ್ಲೆಯ ಅಭಿವೃದ್ಧಿ, ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚಿಚಿ ಗಮನ ಸೆಳೆಯಲಾಗುವುದು ಎಂದು ಶ್ರೀಗಳು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಮಹಾಲಕ್ಷಿ÷್ಮÃ ಪೀಠದ ಶ್ರೀ ಜ್ಞಾನಾನಂದಪುರಿ ಸ್ವಾಮೀಜಿ, ಚಕ್ರಬಾವಿಯ ಜಂಗಮ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಬೆಟ್ಟದಹಳ್ಳಿ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಮಾದಿಹಳ್ಳಿ ಏಳುಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಉಪಸ್ಥಿತರಿದ್ದರು.