ತುಮಕೂರು


ಕರ್ನಾಟಕ ರಾಜ್ಯದ ಬಡ ಜನತೆಯ ಹಸಿವು ನೀಗಿಸುವ ಸದುದ್ದೇಶದಿಂದ ಕರ್ನಾಟಕ ಸರಕಾರ ಜಾರಿಗೊಳಿಸುತ್ತಿರುವ ಹತ್ತು ಕೆ.ಜಿ. ಆಹಾರಧಾನ್ಯ ಒದಗಿಸುವ ಅನ್ನ ಭಾಗ್ಯ ಯೋಜನೆಗೆ ಒಕ್ಕೂಟ ಸರಕಾರ ಬಡವರ ವಿರೋಧಿಯಾಗಿ ಅಸಹಕಾರ ತೋರುತ್ತಿರುವಾಗ, ರಾಜ್ಯದ ಬಿಜೆಪಿಯ ಎಂಪಿಗಳು ಮತ್ತು ಬಿಜೆಪಿ ಶಾಸಕರು, ಮಾಜಿ ಮುಖ್ಯಮಂತ್ರಿಗಳು ಒಕ್ಕೂಟ ಸರಕಾರದ ಮೇಲೆ ಒತ್ತಡ ಹೇರಿ ರಾಜ್ಯದ ಬಡ ಜನತೆಯ ಪರವಾಗಿ ನಿಲ್ಲುವ ಬದಲು, ಬಾಯಿ ಮುಚ್ಚಿಕೊಂಡು ಅಸಹ್ಯ ಮೌನ ವಹಿಸಿರುವುದು ತೀವ್ರ ಖಂಡನೀಯವಾಗಿದೆ. ಇದೊಂದು ನಾಚಿಕೆ ಗೇಡಿನ ವಿಚಾರವಾಗಿದೆ. ತಕ್ಷಣವೇ ತಮ್ಮ ತಮ್ಮ ಕ್ಷೇತ್ರಗಳ ಬಡ ಜನತೆಯ ಹಾಗೂ ರಾಜ್ಯದ ಪರವಾಗಿ ಒಕ್ಕೂಟ ಸರಕಾರದ ಮೇಲೆ ಒತ್ತಡ ಹೇರುವಂತೆ ಸಿಪಿಐ(ಎಂ) ಬಲವಾಗಿ ಒತ್ತಾಯಿಸುತ್ತದೆ.
ರಾಜ್ಯದ ಒಂದು ಪ್ರಬಲ ವಿರೋದ ಪಕ್ಷವಾಗಿ, ರಾಜ್ಯದ ಜನತೆಯ ಜೊತೆ ನಿಂತು ತನ್ನ ಕರ್ತವ್ಯ ನಿರ್ವಹಿಸದೇ ಇರುವುದು ಅಕ್ಷಮ್ಯವಾಗಿದೆ. ಈ ಯೋಜನೆಯು ರಾಜ್ಯದ ಸುಮಾರು ೧.೫ ಕೋಟಿ ಬಡ ಕುಟುಂಬಗಳಿಗೆ ನೇರವಾಗಿ ಪ್ರಯೋಜನವಾಗುತ್ತದೆ.
ಕೆಲವು ಬೇಜವಾಬ್ದಾರಿಯುತವಾದ ರಾಜ್ಯವನ್ನು ಪ್ರತಿನಿಧಿಸುವ ಒಕ್ಕೂಟ ಸರಕಾರದ ಮಂತ್ರಿಗಳು ಈ ಯೋಜನೆ ಜಾರಿಗೆ ತಂದದ್ದೇ ಅಪರಾಧವೆನ್ನುವಂತೆ ಮಾತನಾಡುವುದಲ್ಲದೇ, ಒಕ್ಕೂಟ ಸರಕಾರದ ಅಸಹಕಾರವನ್ನು ಪ್ರತಿಪಾದಿಸುವ ಜನ ವಿರೋದಿ ನಡೆ ತೋರುತ್ತಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ದೇಶದ ಜನತೆಯ ಒತ್ತಡಕ್ಕೆ ಮಣಿದು ಒಕ್ಕೂಟ ಸರಕಾರ ತಲಾ ಹತ್ತು ಕೆ.ಜಿ. ಅಕ್ಕಿ ದೇಶದಾದ್ಯಂತ ನೀಡಿರಲಿಲ್ಲವೇ? ಈಗಲೂ ಬೆಲೆ ಏರಿಕೆಯ ಬಿಸಿಯಲ್ಲಿ ಉಪವಾಸದಿಂದ ನರಳುವ ಜನತೆಗೆ ಆಹಾರಧಾನ್ಯ ನೀಡುವುದು ಅಪರಾಧವೇ? ಅಥವಾ ಅನ್ನ ಭಾಗ್ಯ ಯೋಜನೆ ಈ ಪ್ರಮಾಣದಲ್ಲಿ ಜಾರಿಗೊಳಿಸಿದರೇ ಕಾಳ ಸಂತೆಯ ಕಾರ್ಪೋರೇಟ್ ಲೂಟಿಗೆ ತೊಂದರೆಯಾಗುತ್ತದೆAಬ ಭಯವೇ?! ಎಂದು ಸಿಪಿಐ(ಎಂ) ಜಿಲ್ಲಾ ಸಮಿತಿ ಪ್ರಶ್ನಿಸುತ್ತದೆ.
ಅದೇ ರೀತಿ, ಒಕ್ಕೂಟ ಸರಕಾರದ ಖಾಸಗೀಕರಣದ ನೀತಿಯ ಭಾಗವಾಗಿಯೇ ವಿದ್ಯುತ್ ಬೆಲೆ ಏರಿಕೆಯಾಗಿದೆ. ಈ ಕುರಿತು ಕೂಡಾ ಮೌನ ವಹಿಸಿದ್ದೀರಿ! ಒಕ್ಕೂಟ ಸರಕಾರ ಸಾರ್ವಜನಿಕ ರಂಗದ ವಿದ್ಯುತ್ ಉದ್ದಿಮೆಗಳು ಮತ್ತು ಸಂಸ್ಥೆಗಳನ್ನು ಕಾರ್ಪೋರೇಟ್ ಲೂಟಿಗೆ ತೆರೆಯಲು ವಿದ್ಯುತ್ ತಿದ್ದುಪಡಿ ಮಸೂದೆಗೆ ಕ್ರಮವಹಿಸುತ್ತಿದೆ ಈ ಕೂಡಲೇ ರಾಜ್ಯ ಬಿಜೆಪಿ ಸಂಸದರು, ಶಾಸಕರು ಮತ್ತು ಬಿಜೆಪಿ ಪಕ್ಷ ತಾವುಗಳೆಲ್ಲಾ ಮೌನ ಮುರಿದು ಜನತೆಯ ರಕ್ಷಣೆಗೆ ಬಾಯಿತೆರೆಯಲು ಸಿಪಿಐ(ಎಂ) ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ.

(Visited 1 times, 1 visits today)