ತುಮಕೂರು
ಸಮಾಜದಲ್ಲಿ ಇರುವ ಪ್ರತಿಯೊಬ್ಬರೂ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿ ಕೊಳ್ಳಬೇಕೆಂದು ಶ್ರೀ ಅಟವಿ ಜಂಗಮ ಸುಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಅಟವೀ ಶಿವಲಿಂಗ ಮಹಾಸ್ವಾಮಿಗಳು ಕರೆ ನೀಡಿದರು.
ತಾಲೂಕಿನ ಚಿಕ್ಕತೊಟ್ಲುಕೆರೆ ಶ್ರೀ ಅಟವಿ ಜಂಗಮ ಸುಕ್ಷೇತ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಭಕಿ ನಮನ ಹಾಗೂ ಗುರುರಕ್ಷೆ ಕಾರ್ಯಕ್ರಮದ ದಿವ್ಯ ಸಾನಿದ್ಯವಹಿಸಿ ನೆರೆದಿದ್ದ ಅಪಾರ ಭಕ್ತರಿಗೆ ಆಶೀರ್ವಚನ ನೀಡುತ್ತಾ ಸಮಾಜದಲ್ಲಿ ಮಾನವೀಯ ಮೌಲ್ಯಗಳೇ ಕಡಿಮೆ ಯಾಗುತ್ತಿದೆ ಅದು ಆಗದಂತೆ ಮಾನವೀಯತೆ ಎನ್ನುವುದನ್ನು ಯಾರೂ ಮರೆಯಬಾರದು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ನುಡಿದರು.
ಹನ್ನೆರಡನೇ ಶತಮಾನದಲ್ಲಿ ಸಮಾಜದಲ್ಲಿ ಬದಲಾವಣೆ ತರಲು ಬಸವಣ್ಣ ನವರು ಸೇರಿದಂತೆ ಅನೇಕ ಶರಣರು ಪ್ರಯತ್ನ ಪಟ್ಟರು, ಕಾಯಕ ದಾಸೋಹದ ಮೂಲಕ ಸಮಾಜದಲ್ಲಿ ಸಮಸಮಾಜ ತರುವ ಪ್ರಯತ್ನ ನಡೆಸಿದರು, ಬಸವಣ್ಣ ನವರ ಹಾದಿಯಲ್ಲಿ ಅನೇಕ ಶರಣರು ಸಮಾಜವನ್ನು ಮುನ್ನೆಡಿಸಿದ್ದಾರೆ ಎಂದು ನುಡಿದರು.
ಶ್ರೀ ಅಟವಿ ಜಂಗಮ ಮಠವು ನಾಡಿನ ಪ್ರಸಿದ್ಧ ಮಠಗಳಲ್ಲಿ ಒಂದಾಗಿದೆ, ಈ ಮಠಕ್ಕೆ ೬೦೦ ವರ್ಷಗಳ ಇತಿಹಾಸವಿದೆ, ಪ್ರಾಚೀನ ಕಾಲದಿಂದಲೂ ತೀರ್ಥ ಕ್ಷೇತ್ರವೆಂದು ಜಾಗೃತ ಸ್ಥಾನವೆಂದೂ ಪ್ರಸಿದ್ಧಿ ಪಡೆದಿದೆ, ಈ ಕ್ಷೇತ್ರದಲ್ಲಿ ಪ್ರಾಚೀನ ಕಾಲದಿಂದಲೂ ಶಿವಯೋಗಿಗಳ ಸಾಧಕರ ಶರಣರ ತಪಸ್ಸಿನ ತಪೋಭೂಮಿ ಇದಾಗಿದೆ, ಶ್ರೀ ಮಠದಲ್ಲಿ ಶ್ರೀ ಓಂಕಾರ ಶಿವಯೋಗಿಗಳು, ಶ್ರೀ ಜಡೇಸ್ವಾಮಿ ಶಿವಯೋಗಿಗಳು, ಶ್ರೀ ಅಟವಿ ಶಿವಯೋಗಿಗಳು, ಶ್ರೀ ಅಟವಿ ಸಿದ್ಧಲಿಂಗೇಶ್ವರ ಮಹಾ ಶಿವಯೋಗಿಗಳ ಗದ್ದುಗೆಗಳು ಇದ್ದು ಇಲ್ಲಿ ಪವಾಡ ರೀತಿಯಲ್ಲಿ ಭಕ್ತರಿಗೆ ಪೂಜ್ಯರ ಅನುಗ್ರಹ ದೊರಯುತ್ತಿದೆ ಎಂದು ಹೇಳಿದರು.
ಶ್ರೀ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಒತ್ತು ನೀಡಲಾಗಿದೆ, ಶ್ರೀ ಮಠದಲ್ಲಿ ಈ ಹಿಂದೆ ೧೦೧ ಮಠಾಧೀಶ್ವರರ ಪಾದಪೂಜೆ ಮಾಡಲಾಗಿತ್ತು, ಕಳೆದ ವರ್ಷ ೧೦೧ ಗೋ ಪೂಜಾ ಕಾರ್ಯಕ್ರಮ ನಡೆಯಿತು, ನಮ್ಮ ಕ್ಷೇತ್ರದ ಶಾಸಕರೂ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ ಇದಕ್ಕೆ ಎಲ್ಲಾ ಭಕ್ತರ ಸಹಕಾರವೂ ಮುಖ್ಯ ಎಂದು ನುಡಿದರು.
ಶ್ರೀ ಮಠದಲ್ಲಿ ಪ್ರತಿ ತಿಂಗಳು ಎರಡನೇ ಶನಿವಾರ ಮತ್ತು ಭಾನುವಾರ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ, ದೂರ ದೂರದ ಭಕ್ತರು ರಜಾ ದಿನದಲ್ಲಿ ಶ್ರೀ ಮಠಕ್ಕೆ ಅಧಿಕ ಸಂಖ್ಯೆಯಲ್ಲಿ ಬರುವುದರಿಂದ ಭಕ್ತರಿಗೆ ಅನುಕೂಲ ವಾಗುವಂತೆ ವಿಶೇಷ ಕಾರ್ಯ ಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ ಗುರುರಕ್ಷೆ ಕಾರ್ಯಕ್ರಮವನ್ನು ಆರಂಭ ಮಾಡಲಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಪೂಜ್ಯರಿಂದ ಗುರುರಕ್ಷೆಸ್ವೀಕರಿಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ ಸಮಾಜದಲ್ಲಿ ಮಠಗಳ ಕೊಡುಗೆ ಅಪಾರವಾಗಿದೆ, ಆರ್ಥಿಕ ವಾಗಿ ಸಂಕಷ್ಟದಲ್ಲಿ ಇರುವ ಶಿಕ್ಷಣ ಪಡೆಯಲು ಸಾಧ್ಯವಾಗದೇ ಇರುವ ಬಡವರಿಗೆ ಮಠಗಳು ಶಿಕ್ಷಣ ನೀಡಿ ಬದುಕಿಗೆ ದಾರಿ ದೀಪವಾಗಿವೆ ಎಂದು ನುಡಿದರು.
ಶ್ರೀ ಅಟವೀ ಮಠದ ಮುಂದಿನ ಉತ್ತರಾಧಿಕಾರಿಗಳಾದ ಶ್ರೀ ಮಲ್ಲಿಕಾರ್ಜುನ ದೇವರು ಪ್ರಾಸ್ತಾವಿಕ ವಾಗಿ ಮಾತನಾಡಿದರು, ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಚಿ.ನಿ.ಪುರುಷೋತ್ತಮ್ ಅವರಿಗೆ ಶ್ರೀ ಮಠದ ಗುರು ರಕ್ಷೆ ನೀಡಿ ಗೌರವಿಸಿದರು. ಸಮಾರಂಭದಲ್ಲಿ ಹಿರಿಯ ಕಲಾವಿಧರಾದ ರಾಮಲಿಂಗಪ್ಪ ಗವಾಯಿ ಅವರು ಭಕ್ತಿಗೀತೆಗಳ ಭಜನೆ ಮಾಡಿ ನೆರೆದಿದ್ದ ಅಪಾರ ಭಕ್ತರಲ್ಲಿ ಭಕ್ತಿ ಭಾವ ಮೂಡುವಂತೆ ಮಾಡಿದರು.
ಪಲ್ಲಕ್ಕಿ ಉತ್ಸವ: ಶ್ರೀ ಮಠದಲ್ಲಿ ಬೆಳಿಗ್ಗೆ ಯಿಂದ ಶ್ರೀ ಅಟವೀ ಮಹಾಸ್ವಾಮೀಜಿಯವರ ಗದ್ದುಗೆ ಸೇರಿದಂತೆ ಶ್ರೀಮಠದಲ್ಲಿ ಇರುವ ಗದ್ದುಗೆ ಗಳಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಿತು, ನಂತರ ಶ್ರೀ ಮಠದಲ್ಲಿ ಶ್ರೀ ಅಟವಿ ಮಹಾಸ್ವಾಮೀಜಿಯವರ ಪಲ್ಲಕ್ಕಿ ಉತ್ಸವ ನಡೆಯಿತು, ಶ್ರೀ ಮಠಕ್ಕೆ ಆಗಮಿಸಿದ್ದ ನೂರಾರು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು.