ತುಮಕೂರು


ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿರುವ ಎಲ್ಲಾ ೧೫೮೬ ಕುಡಿಯುವ ನೀರಿನ ಆರ್.ಓ. ಪ್ಲಾಂಟ್‌ಗಳನ್ನು ಸಂಬAಧಿಸಿದ ಗ್ರಾಮ ಪಂಚಾಯಿತಿಗಳೇ ನಿರ್ವಹಣೆ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪ್ರಭು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿಯಲ್ಲಿ÷ ತಮ್ಮ ಕೊಠಡಿಯಲ್ಲಿ ಸೋಮವಾರ ಸಂಜೆ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಆರ್.ಓ. ಪ್ಲಾಂಟ್‌ಗಳನ್ನು ಖಾಸಗಿ ಏಜೆನ್ಸಿಗಳು ನಿರ್ವಹಣೆ ಮಾಡುತ್ತಿದ್ದಲ್ಲಿ ಕೂಡಲೇ ಆಯಾ ಗ್ರಾಮಪಂಚಾಯಿತಿಗೆ ಹಸ್ತಾಂತರಿಸಬೇಕು ಎಂದರಲ್ಲದೆ ಜಿಲ್ಲೆಯಲ್ಲಿರುವ ಆರ್.ಓ. ಪ್ಲಾಂಟ್‌ಗಳ ಸಣ್ಣ-ಪುಟ್ಟ ದುರಸ್ತಿಯನ್ನು ಸಂಬAಧಿಸಿದ ಪಂಚಾಯತಿಯವರೇ ನಿರ್ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಸಾಂಕ್ರಾಮಿಕವಲ್ಲದ ರೋಗ ಗಳನ್ನು ಪತ್ತೆ ಹಚ್ಚಲು ಆಶಾ/ಅಂಗನವಾಡಿ ಕಾರ್ಯಕರ್ತರನ್ನು ಬಳಸಿಕೊಂಡು ಮನೆ-ಮನೆ ಭೇಟಿ ನೀಡುವ ಕಾರ್ಯಕ್ರಮವನ್ನು ತಕ್ಷಣವೇ ಪ್ರಾರಂಭಿಸಬೇಕು. ಗ್ರಾಮೀಣ ಭಾಗದಲ್ಲಿ ಪ್ರತಿ ೩ ತಿಂಗಳಿಗೊಮ್ಮೆ ೩೦ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಪೂರ್ಣ ಆರೋಗ್ಯ ತಪಾಸಣೆಯಾಗಬೇಕು ಎಂದು ತಾಕೀತು ಮಾಡಿದರಲ್ಲದೆ, ಈ ತಪಾಸಣೆಯಲ್ಲಿ ಕ್ಯಾನ್ಸರ್, ಮಧುಮೇಹ, ರಕ್ತದೊತ್ತಡ ಹಾಗೂ ಹೈಪರ್-ಟೆನ್‌ಷನ್‌ನಿಂದ ಬಳಲುತ್ತಿರುವವರಿಗೆ ಸಕಾಲಿಕ ಚಿಕಿತ್ಸೆ ನೀಡುವುದರೊಂದಿಗೆ ಪ್ರತೀ ತಿಂಗಳೂ ರೋಗಿಗಳಿಗೆ ಔಷಧಿಯನ್ನು ವಿತರಿಸಬೇಕು. ಇದರಿಂದ ಗ್ರಾಮೀಣರ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಮಂಜುನಾಥ್ ಅವರಿಗೆ ನಿರ್ದೇಶಿಸಿದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮುಂಗಾರು ಮಳೆಯಾಗಿರುವುದರಿಂದ ಕೆಲವು ಜನವಸತಿ ಪ್ರದೇಶಗಳಲ್ಲಿ ಹಾಲಿ ಇರುವ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವುದರಿಂದ ಮುಂದಿನ ೨೦ ದಿನಗಳಲ್ಲಿ ಮಳೆ ಪರಿಸ್ಥಿತಿ ಇದೇ ರೀತಿ ಮುಂದುವರೆದಲ್ಲಿ ಉದ್ಭವಿಸಬಹುದಾದ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲು ಕಾಂಟಿಜೆನ್ಸಿ ಕ್ರಿಯಾ ಯೋಜನೆ ತಯಾರಿಸಿ ನೀರು ಮತ್ತು ನೈರ್ಮಲ್ಯ ಸಮಿತಿಯಿಂದ ಅನುಮೋದನೆ ಪಡೆದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಅದೇ ರೀತಿ ೨೦೨೨-೨೩ನೇ ಸಾಲಿನಲ್ಲಿ ಕೈಗೊಳ್ಳಲಾಗಿದ್ದ ವಿಶೇಷ ಅಭಿವೃದ್ಧಿ ಯೋಜನೆಯಡಿ ಉಳಿಕೆ ಕಾಮಗಾರಿಗಳನ್ನು ೨೦೨೩-೨೪ನೇ ಸಾಲಿಗಾಗಿ ಮುಂದುವರೆದ ಕಾಮಗಾರಿಗಳ ಕ್ರಿಯಾ ಯೋಜನೆಗೂ ಸಹ ಸಮಿತಿ ಅನುಮೋದನೆಗಾಗಿ ಮಂಡಿಸಿ ಸರ್ಕಾರಕ್ಕೆ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು.
ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರವೀಶ್ ಅವರು ಮಾತನಾಡಿ, ೨೦೨೩-೨೪ನೇ ಸಾಲಿನ ೨೨೧೫ ಮತ್ತು ೪೨೧೫ ಲೆಕ್ಕ ಶೀರ್ಷಿಕೆಯಡಿ ವಿಶೇಷ ಅಭಿವೃದ್ಧಿ ಯೋಜನೆಯ ಮುಂದುವರೆದ ಕಾಮಗಾರಿಗಳಿಗೆ ಸಂಬAಧಿಸಿದAತೆ ಜಿಲ್ಲೆಯ ೩೧೪ ಕಾಮಗಾರಿ ಕೈಗೊಳ್ಳಲು ತಯಾರಿಸಿರುವ ಕ್ರಿಯಾ ಯೋಜನೆಯನ್ನು ಸಮಿತಿಯ ಅನುಮೋದನೆಗಾಗಿ ಮಂಡಿಸಿದರು. ಈ ಪೈಕಿ ೪೨೧೫ ಲೆಕ್ಕಶೀರ್ಷಿಕೆಯಡಿ ೫.೫೮ ಕೋಟಿ ರೂ. ಹಾಗೂ ೨೨೧೫ ಲೆಕ್ಕ ಶೀರ್ಷಿಕೆಯಡಿ ೧೭.೭೩ ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕಾಮಗಾರಿ ಕೈಗೊಳ್ಳಲು ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಬೇಕಾಗಿದೆ ಎಂದರು.
ಅದೇ ರೀತಿ ೨೦೨೩-೨೪ನೇ ಸಾಲಿನ ಮುಂದುವರೆದ ಕಾಂಟಿಜೆನ್ಸಿ ಕ್ರಿಯಾ ಯೋಜನೆಯಡಿ ಸಮಸ್ಯಾತ್ಮಕ ಗ್ರಾಮಗಳಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಒಟ್ಟು ೧೨೩ ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಿದ್ದು, ಸದರಿ ಕಾಮಗಾರಿಗಳಿಗೆ ೩೬೦.೭೫ ಲಕ್ಷ ರೂ. ಗಳ ಅನುದಾನದ ಅಗತ್ಯವಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯ ಗಿಡ-ಮರಗಳನ್ನು ಬೆಳೆಸಿ ವನ ಸಂಪತ್ತನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಂದಿನ ವರ್ಷದೊಳಗೆ ೫ ಲಕ್ಷ ಸಸಿಗಳನ್ನು ಬೆಳೆಸುವ ಗುರಿಯನ್ನು ಪ್ರಾದೇಶಿಕ ಅರಣ್ಯ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್. ನಾಗರಾಜು ಅವರಿಗೆ ವಹಿಸಲಾಯಿತು.
ಸಭೆಯಲ್ಲಿ ಸಮಿತಿ ಸದಸ್ಯರಾದ ಸಹಾಯಕ ಕೃಷಿ ನಿರ್ದೇಶಕ ಚಿದಾನಂದ ಸ್ವಾಮಿ, ವಾರ್ತಾ ಇಲಾಖೆಯ ಗ್ರಂಥಪಾಲಕಿ ಆರ್. ರೂಪಕಲಾ ಸೇರಿದಂತೆ ಮತ್ತಿತರರು ಹಾಜರಿದ್ದರು.

(Visited 1 times, 1 visits today)