ಗುಬ್ಬಿ


ಕಳೆದ ಒಂದು ವರ್ಷದಲ್ಲಿ ಕೊಬ್ಬರಿಧಾರಣೆ ಇಳಿಕೆ ಕಂಡು ರೈತರ ಬದುಕಿನಲ್ಲಿ ದೊಡ್ಡ ಆರ್ಥಿಕ ಪೆಟ್ಟು ನೀಡಿದಂತಾಗಿದೆ. ಕೊಬ್ಬರಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ ಕನಿಷ್ಠ ೨೦ ಸಾವಿರ ರೂಗಳನ್ನು ಬೆಂಬಲ ಬೆಳೆಯಾಗಿ ನೀಡಬೇಕು. ಕೂಡಲೇ ಕೊಬ್ಬರಿ ಬೆಲೆ ಇಳಿಕೆಗೆ ಕಾರಣವಾದ ಅಂಶಗಳನ್ನು ಗುರುತಿಸಿ ವರ್ಷ ಪೂರ್ತಿ ನಿಗದಿ ಬೆಲೆಗೆ ಕೊಬ್ಬರಿ ಖರೀದಿ ಮಾಡಬೇಕು. ಇವೆಲ್ಲಕ್ಕೂ ಸರ್ಕಾರ ಕೂಡಲೇ ಉತ್ತರಿಸಬೇಕು ಎಂದು ಆಗ್ರಹಿಸಿ ರೈತಸಂಘದ ನೂರಾರು ಕಾರ್ಯಕರ್ತರು ಪಟ್ಟಣದ ಬಸ್ ನಿಲ್ದಾಣ ಬಳಿ ಪ್ರತಿಭಟನೆ ನಡೆಸಿದರು.
ರಾಜ್ಯದ ೧೩ ಕ್ಕೂ ಅಧಿಕ ಜಿಲ್ಲೆಯಲ್ಲಿ ಕೃಷಿಕರ ಪ್ರಮುಖ ಬೆಳೆ ಎನಿಸಿರುವ ತೆಂಗು ಲಕ್ಷಾಂತರ ಕುಟುಂಬಕ್ಕೆ ಆಧಾರವಾಗಿದೆ. ಗುಬ್ಬಿ ತಾಲ್ಲೂಕಿನಲ್ಲಿ ೩೭ ಸಾವಿರ ಹೆಕ್ಟೇರ್ ಪ್ರದೇಶ ತೆಂಗು ಇದ್ದು, ೩೦ ಸಾವಿರಕ್ಕೂ ಅಧಿಕ ಕುಟುಂಬ ಕೊಬ್ಬರಿ ನಂಬಿ ಬದುಕು ನಡೆಸಿದೆ. ಅತಿವೃಷ್ಠಿ ಅನಾವೃಷ್ಟಿ, ರೋಗ ರುಜಿನಗಳಿಗೆ ತುತ್ತಾದ ತೆಂಗು ಕಡಿಮೆ ಇಳುವರಿ ನೀಡುತ್ತದೆ. ಇಂತಹ ಸಂದರ್ಭದಲ್ಲಿ ಕೊಬ್ಬರಿ ಬೆಲೆ ಕುಸಿತ ತೀವ್ರ ಸಂಕಷ್ಟ ತಂದಿದೆ. ಈ ಹಿನ್ನಲೆ ಕೇಂದ್ರ ಸರ್ಕಾರ ೨೦ ಸಾವಿರ ಬೆಂಬಲ ಬೆಲೆ ನಿಗದಿ ಮಾಡಬೇಕು. ರಾಜ್ಯ ಸರ್ಕಾರ ೫ ಸಾವಿರ ಪ್ರೋತ್ಸಾಹ ಧನ ನೀಡಬೇಕು ಎಂದು ರೈತರು ಪ್ರತಿಭಟನಾ ಸಭೆಯಲ್ಲಿ ಒತ್ತಾಯಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ಕೊಬ್ಬರಿ ತಯಾರಿಕೆಯ ವೆಚ್ಚದಷ್ಟು ಬೆಲೆ ಸಿಗದ ಈ ಬೆಲೆ ಇಳಿಕೆ ರೈತರ ಬದುಕು ಬೀದಿಗೆ ತಂದಿದೆ. ಇವೆಲ್ಲದರ ಮಧ್ಯೆ ಕೇಂದ್ರ ಸರ್ಕಾರ ವಿದೇಶದಿಂದ ಸುಂಕ ರಹಿತ ಅಡುಗೆ ಎಣ್ಣೆ ಆಮದು ಮಾಡಿಕೊಳ್ಳುತ್ತಿರುವುದು ನಮ್ಮ ಸ್ವದೇಶಿ ತೆಂಗಿನ ಎಣ್ಣೆ, ಕೊಬ್ಬರಿ ಎಣ್ಣೆಗೆ ತೀವ್ರ ಪೆಟ್ಟು ನೀಡಿದೆ. ಈ ಜೊತೆಗೆ ನಮ್ಮ ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಕೊಡದೇ ನಮ್ಮಗಳಿಗೆ ಅವಮಾನಿಸುವ ಧೋರಣೆ ಸರಿಯಲ್ಲ. ಈ ನಿಟ್ಟಿನಲ್ಲಿ ಕೊಬ್ಬರಿ ಬೆಲೆ ನಿಗದಿಯ ಈ ಹೋರಾಟ ರಾಜ್ಯ ಮಟ್ಟಕ್ಕೆ ಹೋಗಬೇಕಿದೆ. ಗುಬ್ಬಿಯಲ್ಲಿ ಆರಂಭವಾದ ಕೊಬ್ಬರಿ ಕಿಚ್ಚು ವಿಧಾನಸೌಧಕ್ಕೆ ಮುಟ್ಟಿಸೋಣ. ಕೇಂದ್ರಕ್ಕೂ ಎಚ್ಚರಿಕೆ ಗಂಟೆ ನೀಡೋಣ ಎಂದು ರೈತರಿಗೆ ಕರೆ ನೀಡಿದರು.
ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ನಫೆಡ್ ಕೇಂದ್ರದ ಹೆಸರಿನಲ್ಲಿ ವರ್ತಕರ ಕೊಬ್ಬರಿಗೆ ಮಾನ್ಯತೆ ದೊರೆಯುತ್ತಿದೆ. ನೈಜ ರೈತನ ಕೊಬ್ಬರಿ ಸಲ್ಲದ ಕಾರಣ ನೀಡಿ ವಾಪಸ್ ಕಳುಹಿಸಲಾಗಿದೆ. ಪ್ರಕೃತಿದತ್ತ ಕೊಬ್ಬರಿಗೆ ಆಕಾರ ರೈತ ನೀಡಲು ಸಾಧ್ಯವೇ ಎಂದು ಕಿಡಿಕಾರಿದ ಅವರು ವರ್ಷವಿಡೀ ಖರೀದಿಸುವ ನಫೆಡ್ ಕೇಂದ್ರ ಸರ್ಕಾರ ತೆರೆಯಬೇಕು. ನಮ್ಮ ಕೊಬ್ಬರಿ ಬಳಸಿ ಎಣ್ಣೆ ತಯಾರಿಸಿ ಪ್ರತಿ ಪಡಿತರ ಕುಟುಂಬಕ್ಕೆ ವಿತರಿಸುವ ಪ್ರಕ್ರಿಯೆ ಆರಂಭಿಸಿ ಜೊತೆಗೆ ತೆಂಗು ಬೆಳೆಗೆ ಹನಿ ನೀರಾವರಿ ಯೋಜನೆ ಶೇಕಡಾ ೧೦೦ ರ ಸಬ್ಸಿಡಿ ನೀಡಿ, ರೋಗ ರುಜಿನಗಳಿಗೆ ತುತ್ತಾದ ನೂರು ತೆಂಗಿನಮರಕ್ಕೆ ಒಂದು ಲಕ್ಷ ಪ್ರೋತ್ಸಾಹ ಧನ ನೀಡಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ರಾಜಕೀಯ ಹೊರತಾಗಿ ನಾನು ಒಬ್ಬ ರೈತನ ಮಗನಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೇನೆ. ಕೊಬ್ಬರಿ ಬೆಲೆ ಕುಸಿತ ರೈತರಿಗೆ ಆರ್ಥಿಕ ಹೊರೆಯಾಗಿದೆ. ವರ್ಷದಲ್ಲಿ ೧೭ ಸಾವಿರದಿಂದ ೭ ಸಾವಿರಕ್ಕೆ ಇಳಿದಿದ್ದು ರೈತರಲ್ಲಿ ತಂದ ಬೇಸರ ಫಲ ಕೃಷಿ ಬಿಡುವ ಯೋಚನೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತನ ಸಂಕಟಕ್ಕೆ ಸ್ಪಂದಿಸಬೇಕು. ಕೂಡಲೇ ಕೊಬ್ಬರಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಗ್ರೇಡ್ ೨ ಶಶಿಕಲಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನೂಲೆನೂರು ಶಂಕರಪ್ಪ, ರಾಜ್ಯ ಉಪಾಧ್ಯಕ್ಷ ಎ.ಎಂ.ಮಹೇಶ್ ಪ್ರಭು, ಪ್ರಗತಿಪರ ಹೋರಾಟಗಾರ ಯತಿರಾಜ್, ತೆಂಗು ಬೆಳೆಗಾರರ ಸಂಘದ ಮೃತ್ಯುಂಜಯಪ್ಪ, ಯೋಗೀಶ್ವರಸ್ವಾಮಿ, ವೈ.ವಿ.ಶಂಕರಪ್ಪ, ರೈತಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ, ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಯುವ ಘಟಕದ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಕೆ.ಲೋಕೇಶ್ ಇತರರು ಇದ್ದರು.

(Visited 1 times, 1 visits today)