ತುಮಕೂರು


ತೆಂಗು ಬೆಳೆಯುವ ಪ್ರದೇಶದಲ್ಲಿ ಕೊಬ್ಬರಿಯ ದರ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಬ್ಬರಿ ಬೆಳೆಗಾರರ ಹಿತ ಕಾಯುವಲ್ಲಿ ವಿಫಲವಾಗಿರುವ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ದ ಆಗಸ್ಟ್ ೨೧ ರಿಂದ ೧೬ರವರೆಗೆ ಕೊಬ್ಬರಿ ಬೆಳೆಯುವ ಎಲ್ಲಾ ತಾಲೂಕುಗಳಲ್ಲಿ ಬಂದ್ ನಡೆಸಲಾಗುವುದು ಎಂದು ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಆಗಸ್ಟ್ ೦೧ ರಂದು ಚಿಕ್ಕನಾಯಕನಹಳ್ಳಿ ತಾಲೂಕು ಕೇಂದ್ರದಲ್ಲಿ ಬಂದ್ ಆಚರಿಸಲಾಗುವುದು. ತದನಂತರದಲ್ಲಿ ತೆಂಗು ಬೆಳೆಯುವ ಸುಮಾರು ೩೩ ತಾಲೂಕು ಕೇಂದ್ರಗಳಲ್ಲಿಯೂ ಬಂದ್ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಇದಕ್ಕೆ ಸಾರ್ವಜನಿಕರು, ಕೊಬ್ಬರಿ ಮತ್ತು ತೆಂಗು ಬೆಳೆಗಾರರು ಸಹಕಾರ ನೀಡಿ, ಸರಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕೆಂದರು.
ಸುಮಾರು ೪೦ ವರ್ಷಗಳ ಹಿಂದೆ ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ೯೯೦೦ ರೂ ಇತ್ತು.ನಲವತ್ತು ವರ್ಷಗಳಲ್ಲಿ ತೆಂಗು ಬೆಳೆಯಲು ಉಪಯೋಗಿಸುವ ಉಪಕರಣಗಳು, ಗೊಬ್ಬರ, ರಸಾಯನಿಕ ವಸ್ತುಗಳ ಬೆಲೆ ಎಷ್ಟು ಪ್ರಮಾಣ ದಲ್ಲಿ ಹೆಚ್ಚಾಗಿದೆ.ಆದರೆ ಕೊಬ್ಬರಿ ಬೆಲೆ ಮಾತ್ರ ದಿನದಿಂದ ದಿನಕ್ಕೆ ಕುಸಿತ ಕಾಣುತ್ತಾ,ಪ್ರಸ್ತುತ ೬೫೦೦-೭೫೦೦ ರೂಗಳಿಗೆ ನಿಂತಿದೆ.ಇಷ್ಟಾದರೂ ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರವಾಗಲಿ ಕೊಬ್ಬರಿಗೆ ಬೆಳೆಗಾರರ ನೆರವಿಗೆ ಬಂದಿಲ್ಲ. ದೇಶದಲ್ಲಿ ಸರಕಾರಗಳು ಜೀವಂತ ಇವೆ ಎಂಬ ಪ್ರಶ್ನೆ ಮೂಡುತ್ತಿದೆ.ಸದನದಲ್ಲಿ ಈ ವಿಚಾರ ಚರ್ಚೆಯಾದ ನಂತರ ರಾಜ್ಯ ಸರಕಾರ ಕ್ವಿಂಟಾಲ್‌ಗೆ ೧೨೫೦ ರೂ ಪ್ರೋತ್ಸಾಹ ನೀಡಿ ಕೈತೊಳೆದುಕೊಂಡಿದೆ.ಕೃಷಿ ಅವರ್ತ ನಿಧಿಯಿಂದಲಾದರೂ ಹೆಚ್ಚಿನ ಹಣವನ್ನು ಸರಕಾರ ಬಿಡುಗಡೆ ಮಾಡಬೇಕೆಂದು ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.
ಒಂದೆಡೆ ಕೊಬ್ಬರಿ ಸೇರಿದಂತೆ ರೈತರು ತಮ್ಮ ಉತ್ಪನ್ನಗಳಿಗೆ ಬೆಲೆ ಇಲ್ಲದೆ ಪರದಾಡುತ್ತಿದ್ದರೇ,ಯುಪಿಎ ಮತ್ತು ಎನ್.ಡಿ.ಎ ಮಿತ್ರ ಪಕ್ಷಗಳು ಮುಂಬರುವ ಲೋಕಸಭಾ ಚುನಾವಣೆ ಗೆಲ್ಲಲ್ಲು ತಂತ್ರ, ಪ್ರತಿತಂತ್ರ ರೂಪಿಸುತ್ತಿವೆ.ಕೃಷಿ ಉತ್ಪನ್ನಗಳಿಗೆ ನ್ಯಾಯೋಚಿತ ಬೆಲೆ ನೀಡಬೇಕೆಂಬುದು ನಿಮ್ಮ ಅಜೆಂಡಾದದಲ್ಲಿ ಇಲ್ಲವೆ ಎಂದು ಪ್ರಶ್ನಿಸಿದ ಕೋಡಿಹಳ್ಳಿ,ಸರಕಾರ ಆಗಸ್ಟ್ ೧೫ರೊಳಗೆ ಕೊಬ್ಬರಿಗೆ ತೋಟಗಾರಿಕಾ ಇಲಾಖೆ ಶಿಫಾರಸ್ಸು ಮಾಡಿರುವ ೧೬೭೩೦ ರೂ ಬೆಂಬಲ ಬೆಲೆ ಘೋಷಣೆ ಮಾಡದಿದ್ದರೆ ಆಗಸ್ಟ್ ೧೬ ರಿಂದ ವಿಧಾನಸೌಧ ಚಲೋ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಕೋಡಿಹಳ್ಳಿ ಚಂದ್ರಶೇಖರ್ ನುಡಿದರು.
ರಾಜ್ಯದ ಸುಮಾರು ೧೦ ಜಿಲ್ಲೆಗಳಲ್ಲಿ ಸಾಧಾರಣೆ ಮಳೆಯಾಗಿದೆ.ಆದರೆ ೨೦ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕುಂಠಿತವಾಗಿದೆ.ಕೂಡಲೇ ಸರಕಾರ ಮಳೆ ಕೊರತೆ ಇರುವ ಜಿಲ್ಲೆಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿ, ಪರಿಹಾರ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ಸರಕಾರವನ್ನು ಒತ್ತಾಯಿಸಿದರು.
ಕೋವಿಡ್ ಆರಂಭದಲ್ಲಿ ಕೆ.ಎಸ್.ಆರ್.ಟಿ.ಸಿ ನೌಕರರ ಹೋರಾಟದ ನೇತೃತ್ವ ವಹಿಸಿಕೊಂಡ ಪರಿಣಾಮ ನೌಕರರಿಗೆ ೬ನೇ ವೇತನ ಆಯೋಗದ ಪ್ರಕಾರ ವೇತನ ದೊರೆಯುವಂತಾಗಿದಲ್ಲದೆ, ಅವರ ೧೦ ಬೇಡಿಕೆಗಳಲ್ಲಿ ೯ ನ್ನು ಸರಕಾರ ಈಡೇರಿಸುವ ಲಿಖಿತ ಭರವಸೆ ನೀಡಿತ್ತು.ಆದರೆ ಅದು ಕಾರ್ಯರೂಪಕ್ಕೆ ಬರದ ಹಿನ್ನೆಲೆಯಲ್ಲಿ ೨೦೨೧ರ ಏಪ್ರಿಲ್‌ನಲ್ಲಿ ಮುಷ್ಕರ ಆರಂಭಿಸಿದ ಸಂದರ್ಭದಲ್ಲಿ ಚಳವಳಿಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಸರಕಾರ ರೂಪಿಸಿದ ಹಲವಾರು ತಂತ್ರಗಳ ಭಾಗವಾಗಿ ಪವರ್ ಟಿ.ವಿ.ಯಲ್ಲಿ ನನ್ನ ವಿರುದ್ದ ಕೆಲವು ಮಾನಹಾನಿ ವರದಿಗಳು ಪ್ರಕಟವಾದವು.ಇದನ್ನು ಪ್ರಶ್ನಿಸಿ ಬೆಂಗಳೂರಿನ ಹೆಚ್ಚುವರಿ ಮೆಟ್ರೋಪಾಲಿಟಿನ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದೆ.ಅದರ ಅನ್ವಯ ಪವರ್ ಟಿ.ವಿ.ಯವರಿಗೆ ಐಪಿಸಿ ಕಲಂ ೪೯೯,೫೦೦ ಅಡಿಯಲ್ಲಿ ಕೇಸು ದಾಖಲಿಸಿ,೨೦೨೩ರ ಜುಲಯ ೦೭ ರಂದು ಸಮನ್ಸ್ ನೀಡಿದ್ದಾರೆ.ಸದರಿ ವಾಹಿನಿ ವಿರುದ್ದ ಮಾನನಷ್ಟ ಮೊಕದೊಮ್ಮೆ ಹೂಡಲು ನಿರ್ಧರಿಸಿರುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ನುಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರುವ ಸೇನೆಯ ಉಪಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ,ಕೆಂಕೆರೆ ಸತೀಶ್,ಜಿಲ್ಲಾಧ್ಯಕ್ಷ ಆನಂದ ಪಟೇಲ್,ಗೌರವಾಧ್ಯಕ್ಷ ಧನಂಜಯ ಆರಾಧ್ಯ,ವಿವಿಧ ತಾಲೂಕುಗಳ ಅಧ್ಯಕ್ಷರುಗಳಾದ ಕೊಡ್ಲಹಳ್ಳಿ ಸಿದ್ದರಾಜು, ಅನಿಲ್‌ಕುಮಾರ್,ಮಲ್ಲಿಕಾರ್ಜುನ್,ರಾಜಣ್ಣ,ಸಣ್ಣ ದ್ಯಾಮೇಗೌಡ, ಲೊಕೇಶ್, ರುದ್ರೇಶಗೌಡ, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)