ತುಮಕೂರು


ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ “ಕರಾಮುವಿ ಶೈಕ್ಷಣಿಕ ಜಾಗೃತಿ ಪ್ರಚಾರ ಆಂದೋಲನ ವಾಹನಕ್ಕೆ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ನಗರದ ಸಿದ್ದಗಂಗಾ ಮಠದಲ್ಲಿ ಚಾಲನೆ ನೀಡಿದರು.
ಉನ್ನತ ಶಿಕ್ಷಣ ಮನೆ ಬಾಗಿಲಿಗೆ ನೀಡಲು ಕರಾಮುವಿಯ ಕುಲಪತಿ ಪ್ರೊ. ಶರಣಪ್ಪ.ವಿ. ಹಲಸೆ ಹಾಗೂ ಕುಲಸಚಿವರಾದ ಪ್ರೊ.ಕೆ.ಎಲ್.ಎನ್. ಮೂರ್ತಿ ರವರ ಮಾರ್ಗದರ್ಶನದಲ್ಲಿ ರಾಜ್ಯದಾದ್ಯಂತ ಕರಾಮುವಿಯು ಉನ್ನತ ಶಿಕ್ಷಣದ ಅವಕಾಶಗಳ ಬಗ್ಗೆ ಅರಿವು ಮೂಡಿಸುತ್ತಿರುವ ಕರಾಮುವಿ ಶೈಕ್ಷಣಿಕ ಜಾಗೃತಿ ಪ್ರಚಾರ ಆಂದೋಲನ ವಾಹನಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಶ್ರೀಗಳು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ವಿವಿಧ ಕಾರಣಗಳಿಂದ ಉನ್ನತ ಶಿಕ್ಷಣದಿಂದ ವಂಚಿತರಾದ ಸಮಾಜದ ವಿವಿಧ ವರ್ಗದ ಜನರಿಗೆ ವಿದ್ಯಾಭ್ಯಾಸ ಮುಂದುವರಿಸಲು, ಉದ್ಯೋಗಸ್ಥ ಜನರಿಗೆ, ಅಂಗವಿಕಲರಿಗೆ, ಮಹಿಳೆಯರಿಗೆ, ಜ್ಞಾನಾರ್ಜನೆ ಬಯಸುವ ಜನರಿಗೆ ಮನೆ ಬಾಗಿಲಿಗೆ ಕಡಿಮೆ ಶೈಕ್ಷಣಿಕ ವೆಚ್ಚದಲ್ಲಿ ಉತ್ತಮ ಶಿಕ್ಷಣ ನೀಡಲು ಶ್ರಮಿಸುತ್ತಿದ್ದು, ಈ ಸುವರ್ಣಾವಕಾಶವನ್ನು ತುಮಕೂರು ಜಿಲ್ಲಾ ವ್ಯಾಪ್ತಿಯ ಉದ್ಯೋಗಾಕಾಂಕ್ಷಿಗಳು ಮತ್ತು ವಿದ್ಯಾಸಕ್ತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಕೋವಿಡ್‌ನಿಂದ ಮರಣ ಹೊಂದಿದ ತಂದೆ/ತಾಯಿ ಮಕ್ಕಳಿಗೆ, ತೃತೀಯ ಲಿಂಗ ವಿದ್ಯಾರ್ಥಿಗಳಿಗೆ, ದೃಷ್ಟಿ ಹೀನ ವಿದ್ಯಾರ್ಥಿಗಳಿಗೆ ಕರಾಮುವಿಯು ಉಚಿತ ಪ್ರವೇಶಾತಿ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.
ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಮತ್ತು ಡಿಫೆನ್ಸ್- ಮಾಜಿ ಸೈನಿಕರಿಗೆ, ಅಟೋ/ಕ್ಯಾಬ್ ಚಾಲಕರು ಮತ್ತು ಅವರ ಮಕ್ಕಳಿಗೆ ಮತ್ತು ಕೆಎಸ್ಸಾರ್ಟಿಸಿ ನೌಕರರಿಗೆ ಬೋಧನ ಶುಲ್ಕದಲ್ಲಿ ರಿಯಾಯ್ತಿ ನೀಡುತ್ತಿದ್ದು, ಇದರ ಪ್ರಯೋಜನ ತುಮಕೂರು ಜಿಲ್ಲೆಯ ಜನತೆ ಪಡೆದುಕೊಳ್ಳಬೇಕು ಎಂದರು.
ತುಮಕೂರಿನ ಕರಾಮುವಿ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕರಾದ ಡಾ. ಲೋಕೇಶ.ಆರ್ ಮಾತನಾಡಿ, ಕರಾಮುವಿಯ ಪದವಿಗಳು ಯುಜಿಸಿ ನಿಯಮಾವಳಿ ಪ್ರಕಾರ ಭೌತಿಕ ಶಿಕ್ಷಣ ಪದವಿಗೆ ಸಮನಾದ ಅರ್ಹತೆ ಹೊಂದಿದ್ದು, ಕರಾಮುವಿ ನೀಡುತ್ತಿರುವ ಶಿಕ್ಷಣ ಕ್ರಮಗಳಿಗೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (ಯುಜಿಸಿ) ಮಾನ್ಯತೆ ನೀಡಿದೆ. ನ್ಯಾಕ್ ನಿಂದ “ಎ ಪ್ಲಸ್” ಗ್ರೇಡ್ ಪಡೆದಿದೆ ಎಂದು ತಿಳಿಸಿದರು.
೧೦+೨ (ಪದವಿ ಪೂರ್ವ)., ೧೦+೨+೩ (ಸ್ನಾತಕ ಪದವಿ) ವಿದ್ಯಾರ್ಹತೆ ಹೊಂದಿರುವ ಎಲ್ಲಾ ವಯೋಮಾನದ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಕರಾಮುವಿಯಲ್ಲಿ ಪ್ರವೇಶಾತಿ ಪಡೆಯಬಹುದು ಎಂದು ತಿಳಿಸಿದರು.
ಈ ಕರಾಮುವಿ ಶೈಕ್ಷಣಿಕ ಜಾಗೃತಿ ಪ್ರಚಾರ ಆಂದೋಲನ ವಾಹನವು ತುಮಕೂರು ನಗರದ ಹಲವು ಪ್ರಮುಖ ಜನನಿಬಿಡ ಪ್ರದೇಶಗಳಾದ ತುಮಕೂರು ಮಹಾನಗರ ಪಾಲಿಕೆ ಮುಂಭಾಗ, ರೈಲ್ವೆ ನಿಲ್ದಾಣ, ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ, ಡಿ.ಸಿ. ಕಛೇರಿ, ಜಿಲ್ಲಾ ನ್ಯಾಯಾಲಯ ಆವರಣ, ನಗರ ಬಸ್ ನಿಲ್ದಾಣ, ಮಾರುಕಟ್ಟೆ, ತುಮಕೂರು ವಿವಿ ಮುಂಭಾಗ, ಸಿರಾ ಗೇಟ್, ಗುಬ್ಬಿ ಗೇಟ್, ಎಂ.ಜಿ. ರಸ್ತೆ ಹಾಗೂ ನಗರದ ವಿವಿಧ ಪ್ರಮುಖ ಜನನಿಬಿಡ ಭಾಗಗಳಲ್ಲಿ ಸಂಚರಿಸಿ ಪ್ರಚಾರ ಆಂದೋಲನ ವಾಹನದ ಎಲ್.ಇ.ಡಿ. ಪರದೆಯ ಮೂಲಕ ಕರಾಮುವಿಯ ಶೈಕ್ಷಣಿಕ ಕಾರ್ಯಕ್ರಮಗಳ/ಕೋರ್ಸ್ ಗಳ ಬಗ್ಗೆ, ಪ್ರವೇಶಾತಿ ಶುಲ್ಕಗಳ ಬಗ್ಗೆ, ಶುಲ್ಕ ವಿನಾಯಿತಿ ಬಗ್ಗೆ, ಉಚಿತ ಪ್ರವೇಶಾತಿ ಬಗ್ಗೆ ಹಾಗೂ ಕರಾಮುವಿ ಇನ್ನಿತರೆ ಶೈಕ್ಷಣಿಕ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುವುದು ಮತ್ತು ಕರಾಮುವಿ ಪ್ರವೇಶಾತಿ ಕರಪತ್ರಗಳನ್ನು ವಿತರಿಸಲಾಗುವುದು ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಪ್ರಚಾರ ಆಂದೋಲನದ ಸಂಯೋಜಕರಾದ ಸಿದ್ದೇಗೌಡ, ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಪ್ರೊ. ಪರಮಶಿವಯ್ಯ, ತುಮಕೂರು ಪ್ರಾದೇಶಿಕ ಕೇಂದ್ರದ ಸಿಬ್ಬಂದಿಗಳು ಭಾಗವಹಿಸಿದ್ದರು.

(Visited 1 times, 1 visits today)