ಹುಳಿಯಾರು


ಶಾಲಾ ಮಕ್ಕಳ ಅಪೌಷ್ಠಿಕತೆ ತಡೆಯಲು ಸರ್ಕಾರ ಜಾರಿಗೆ ತಂದಿರುವ ಬಿಸಿಯೂಟವನ್ನು ಬೆಲೆ ಏರಿಕೆಯ ನಡುವೆ ಗುಣಮಟ್ಟದಿಂದ ನೀಡುವುದು ಸದ್ಯಕ್ಕೆ ಶಿಕ್ಷಕರಿಗಿರುವ ಸವಾಲಾಗಿದೆ. ಅಲ್ಲದೆ ೨ ತಿಂಗಳಿAದ ಬಿಸಿಯೂಟದ ಹಣ ಬಾರದಿರುವುದು ಸಮರ್ಪಕ ಜಾರಿಗೆ ಮತ್ತೊಷ್ಟು ತೊಡಕಾಗಿದೆ.
ಸರ್ಕಾರ ಅಕ್ಷರ ದಾಸೋಹ ಇಲಾಖೆಯ ಮೂಲಕ ಬಿಸಿಯೂಟಕ್ಕಾಗಿ ಅಕ್ಕಿ, ಬೇಳೆ, ಅಡುಗೆ ಅನಿಲ, ಗೋಧಿ, ಎಣ್ಣೆ, ಸರಬರಾಜು ಮಾಡುತ್ತಿದೆ. ಇನ್ನು ಉಳಿದಂತೆ ಸಾಂಬಾರು ಪದಾರ್ಥಗಳು, ಉಪ್ಪು, ತರಕಾರಿ ಶಾಲೆಯವರೇ ಖರೀದಿಸಬೇಕಾಗಿದೆ. ಸರ್ಕಾರ ೧ ರಿಂದ ೫ ನೇ ತರಗತಿ ಒಂದು ಮಗುವಿಗೆ ೫.೪೫ ರೂ. ನೀಡುತ್ತಿದೆ. ೬ ರಿಂದ ೧೦ ನೇ ತರಗತಿ ಮಕ್ಕಳಿಗೆ ೮.೧೭ ರೂ. ನೀಡುತ್ತಿದೆ. ಆದರೆ ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ತರಕಾರಿ ಸೊಪ್ಪು ಬೆಲೆ ದುಪ್ಪಟ್ಟಾಗಿದೆ. ಅಲ್ಪ ಅನುದಾನದಲ್ಲಿ ಒಂದು ಮಗುವಿಗೆ ತರಕಾರಿ-ಸೊಪ್ಪು ಖರೀದಿಗೆ ಸರ್ಕಾರದ ಹಣ ಸಾಕಾಗುತ್ತಿಲ್ಲ. ಪರಿಣಾಮ ಬಿಸಿಯೂಟದ ಹೊಣೆ ಹೊತ್ತ ಶಿಕ್ಷಕರ ಜೇಬಿಗೆ ಕತ್ತರಿಯಾಗುತ್ತಿದೆ.
ಪ್ರತಿದಿನ ಆಹಾರದಲ್ಲಿ ಬಳಕೆಯಾಗಲೇ ಬೇಕಾಗಿರುವ ಬೀನ್ಸ್, ಟೊಮೊಟೊ, ಹಸಿಮೆಣಸಿನಕಾಯಿ ಬೆಲೆ ಮಾರುಕಟ್ಟೆಯಲ್ಲಿ ನೂರರ ಗಡಿ ದಾಟಿದೆ. ಬದನೆ ಕಾಯಿ, ಬೆಂಡೆಕಾಯಿ, ಕ್ಯಾರೆಟ್, ಆಲೂಗಡ್ಡೆ ಸೇರಿದಂತೆ ಬಹುತೇಕ ತರಕಾರಿಗಳು ೫೦ ರೂ. ದಾಟಿವೆ. ಇನ್ನೂ ತೊಗರಿ, ಅಲಸಂದೆ, ಕಡ್ಲೇಕಾಳು, ಹೆಸರು, ಅವರೆ
ಸೇರಿದಂತೆ ಬೇಳೆಕಾಳುಗಳ ಬೆಲೆಯೂ ಕೈಗೆಟುಕದಂತ್ತಾಗಿದೆ. ಹೀಗೆ ತರಕಾರಿ. ಸೊಪ್ಪು, ಬೇಳೆಕಾಳಿನ ದರ ಏರಿಕೆ ಬಿಸಿ ಶಾಲಾ ಮಕ್ಕಳ ಬಿಸಿಯೂಟದ ಮೇಲೂ ಪರಿಣಾಮ ಬೀರಿದೆ.
ಅಲ್ಲದೆ ಈ ಹಿಂದೆ ಅಡಿಗೆಯವರು ಮತ್ತು ಮುಖ್ಯಶಿಕ್ಷಕರ ಜಂಟಿ ಖಾತೆಗೆ ತರಕಾರಿ ಹಣ ಹಾಕಲಾಗುತ್ತಿತ್ತು. ಈಗ ಎಸ್‌ಡಿಎಂಸಿ ಮತ್ತು ಮುಖ್ಯಶಿಕ್ಷಕರ ಖಾತೆ ಮಾಡಿಸಲು ಸೂಚಿಸಿರುವುದರಿಂದ ಬ್ಯಾಂಕ್‌ಗಳಲ್ಲಿ ಖಾತೆ ಚೇಂಜ್ ಮಾಡುವುದು ತಡವಾಗುತ್ತಿದೆ. ಪರಿಣಾಮ ಸರ್ಕಾರ ನೀಡುವ ತರಕಾರಿ, ಬೇಳೆಕಾಳಿನ ಜೂನ್ ಮತ್ತು ಜುಲೈ ಮಾಹೆಯ ಹಣ ಬಿಡುಗಡೆ ಮಾಡಿಲ್ಲ. ಪರಿಣಾಮ ಅಂಗಡಿಗಳಲ್ಲಿ ಶಿಕ್ಷಕರು ಸಾಲ ತರಬೇಕಿದೆ, ಇಲ್ಲಾ ಕೈಯಿಂದ ಹಣ ಹಾಕುವ ಅನಿವಾರ್ಯತೆ ಸೃಷ್ಠಿಯಾಗಿದೆ.
ಸರ್ಕಾರ ಮಕ್ಕಳಿಗೆ ಬಿಸಿಯೂಟ ಕೊಡುತ್ತಿರುವುದು ಅಭಿನಂದನಾರ್ಹ. ಆದರೆ, ಬಿಸಿಯೂಟಕ್ಕೆ ಅಗತ್ಯವಾಗಿರುವ ತರಕಾರಿ, ಸೊಪ್ಪು,
ಬೇಳೆಕಾಳುಗಳ ಬೆಲೆ ಮಾರುಕಟ್ಟೆಯಲ್ಲಿ ಏರಿಕೆಯಾಗಿದ್ದು, ಸರ್ಕಾರ ನೀಡುವ ಅನುದಾನ ಏರಿಕೆಯಾಗದೆ ಶಿಕ್ಷಕರು ಯಾವ ರೀತಿ ನಿಬಾಯಿಸುತ್ತಾರೆ ಎಂಬುದು ಪ್ರಶ್ನೆಯಾಗಿದೆ.
ಶಿಕ್ಷಕರೇ ತಮ್ಮ ಜೇಬಿಂದ ಎಷ್ಟು ದಿನ ಹೆಚ್ಚುವರಿ ಖರ್ಚು ಮಾಡಲು ಸಾಧ್ಯ. ಹಾಗಾಗಿ ಸರ್ಕಾರ ಬೆಲೆ ಪರಿಷ್ಕರಿಸಿ ಅನುದಾನ ಹೆಚ್ಚಳ ಮಾಡಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಸರ್ಕಾರದ ಗಮನ ಸೆಳೆಯುವ ಅಗತ್ಯವಿದೆ.

(Visited 1 times, 1 visits today)