ತುಮಕೂರು
ವಿಶ್ವವಿದ್ಯಾನಿಲಯಗಳ ಕಾರ್ಯಕ್ಷಮತೆ ಅಲ್ಲಿನ ಪ್ರಾಧ್ಯಾಪಕರ ಸಂಶೋಧನಾ ಪ್ರವೃತ್ತಿಯಿಂದಾಗುವ ಶೈಕ್ಷಣಿಕ ಬೆಳವಣಿಗೆಯ ಮೇಲೆ ಅವಲಂಬಿಸಿರುತ್ತದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿ (ಪಿ.ಎಂ.ಇ.ಬಿ.) ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ (ಐ.ಕ್ಯೂ.ಎ.ಸಿ.) ವತಿಯಿಂದ ಬುಧವಾರ ಆಯೋಜಿಸಿದ್ದ ‘ಧನ ಸಹಾಯ ಸಂಸ್ಥೆಗಳು ಮತ್ತು ಸಂಶೋಧನಾ ಪ್ರಸ್ತಾಪಗಳ ತಯಾರಿಕೆ’ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಹಲವು ಧನ ಸಹಾಯ ಸಂಸ್ಥೆಗಳು ನೀವು ಸಲ್ಲಿಸುವ ಯೋಜನಾಪೂರಕವಾದ ಸಂಶೋಧನಾ ಪ್ರಸ್ತಾಪಗಳನ್ನು ಮೌಲ್ಯಮಾಪನ ಮಾಡಿ, ಅವಶ್ಯಕವಾಗಿರುವ ಧನ ಸಹಾಯ ಮಾಡುತ್ತವೆ. ನಿಮ್ಮ ಕ್ಷಮತೆಯಿಂದ ಅನುಮೋದಿಸಿದ ಸಂಶೋಧನಾ ಪ್ರಸ್ತಾಪಗಳು ನಿಮ್ಮ ವೃತ್ತಿಜೀವನ ಹಾಗೂ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಶೈಕ್ಷಣಿಕ ಬೆಳವಣಿಗೆಯಲ್ಲಿ ಪ್ರತಿಬಿಂಬಿಸುತ್ತದೆ ಎಂದರು.
ಈ ಶೈಕ್ಷಣಿಕ ವರ್ಷದಲ್ಲಿ ನಮ್ಮ ವಿವಿಯಿಂದ ಆಗಲೇ ೨೦ ಸಂಶೋಧನಾ ಪ್ರಸ್ತಾಪಗಳು ವಿವಿಧ ಧನ ಸಹಾಯ ಸಂಸ್ಥೆಗಳಿಗೆ ಸಲ್ಲಿಕೆಯಾಗಿದ್ದು, ಅದರಲ್ಲಿ, ಏಳು ಪ್ರಸ್ತಾಪಗಳಿಗೆ ಧನ ಸಹಾಯದ ಅನುಮೋದನೆ ಸಿಕ್ಕಿರುವುದು ಸಂತಸದ ವಿಚಾರ. ಎರಡು ಸಂಶೋಧನಾ ಪ್ರಸ್ತಾಪಗಳ ಮುಂದಿನ ಹಂತ ಶುರುವಾಗಿರುವುದು ವಿವಿಯ ಅಭಿವೃದ್ಧಿಯೆಂದೇ ಹೇಳಬಹುದು ಎಂದು ತಿಳಿಸಿದರು.
ಯುಜಿಸಿಯ ನಿವೃತ್ತ ಅಧಿಕಾರಿ ಡಾ. ಅನಂತ್ ರಾಮ್ ಮಾತನಾಡಿ, ತುಮಕೂರು ವಿವಿಯು ಮುಂಬರುವ ದಿನಗಳಲ್ಲಿ ಪ್ರತೀ ವಿಭಾಗದಿಂದ ಹತ್ತು ಸಂಶೋಧನಾ ಪ್ರಸ್ತಾಪಗಳನ್ನು ಹಲವು ಧನಸಹಾಯ ಸಂಸ್ಥೆಗಳಿಗೆ ಸಲ್ಲಿಸುವ ಯೋಜನೆಯಿದೆ. ವರ್ಷಕ್ಕೆ ನೂರಕ್ಕಿಂತ ಹೆಚ್ಚು ಪ್ರಸ್ತಾಪಗಳ ಸಲ್ಲಿಯಾದರೆ ವಿವಿಯ ಸಂಶೋಧನೆಗಳಿಗೆ ಹೆಚ್ಚು ಧನಸಹಾಯ ಬರಲಿದೆ. ಹೆಚ್ಚು ಶೈಕ್ಷಣಿಕ ಪ್ರಗತಿ ಕಾಣಲಿದೆ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜûಮ್ ಜûಮ್ ಮಾತನಾಡಿ, ವಿವಿಯಲ್ಲಿ ಸಂಶೋಧನಾ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಪ್ರಾಧ್ಯಾಪಕರು ತಮ್ಮ ಅಮೂಲ್ಯ ಸಮಯವನ್ನು ಪಾಠದೊಂದಿಗೆ ಸಂಶೋಧನೆಯ ಕಡೆಗೂ ಗಮನ ಕೊಡಬೇಕು. ಧನ ಸಹಾಯ ಸಂಸ್ಥೆಗಳು ನೀವು ಸಲ್ಲಿಸುವ ಸಂಶೋಧನಾ ಪ್ರಸ್ತಾಪಗಳಲ್ಲಿ ಬಯಸುವುದು ‘ಸಂಶೋಧನೆಗೆ ವ್ಯಯಿಸುವ ಹಣ, ಸಂಶೋಧನೆಗೆ ಕೊಡುವ ಸಮಯ ಹಾಗೂ ಸಂಶೋಧನೆಯ ಯಶಸ್ಸಿಗೆ ನಿಮ್ಮ ಪ್ರಯತ್ನ’ ಎಂದು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಪಿ.ಎಂ.ಇ.ಬಿ. ನಿರ್ದೇಶಕ ಪ್ರೊ. ಬಿ. ಟಿ. ಸಂಪತ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಐ.ಕ್ಯೂ.ಎ.ಸಿ. ನಿರ್ದೇಶಕ ಪ್ರೊ. ರಮೇಶ್ ಬಿ. ವಂದಿಸಿದರು. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರೂಪೇಶ್ ಕುಮಾರ್ ಎ. ನಿರೂಪಿಸಿದರು.