ಶಿರಾ
ಶಿರಾ ತಾಲೂಕಿನಾದ್ಯಂತ ಒಟ್ಟು ೬೮,೫೧೨ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೊಂದಣಿ ಮಾಡಿಸಿಕೊಂಡಿರುತ್ತಾರೆ. ತುಮಕೂರು ಜಿಲ್ಲೆಯಲ್ಲೇ ಅತಿ ಹೆಚ್ಚು ನೊಂದಣಿ ಮಾಡಿಕೊಂಡಿರುವ ಹೆಗ್ಗಳಿಕೆ ನಮ್ಮ ಶಿರಾ ತಾಲೂಕಿಗೆ ಸಲ್ಲುತ್ತದೆ. ಭಾರತ ದೇಶದ ಇತಿಹಾಸದಲ್ಲೇ ಸಾಮಾಜಿಕ ನ್ಯಾಯ ದೊರಕಿಸಲು ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೈಗೊಂಡ ಗೃಹಲಕ್ಷ್ಮಿ ಯೋಜನೆ ವಿದ್ಯುಕ್ತವಾಗಿ ರಾಜ್ಯಾದ್ಯಂತ ಚಾಲನೆಗೊಂಡು ದಾಖಲೆ ನಿರ್ಮಿಸಿದೆ ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ. ಜಯಚಂದ್ರ ತಿಳಿಸಿದರು.
ಅವರು ದಿನಾಂಕ ೩೦ ೮ ೨೦೨೩ ರಂದು ಶಿರಾ ನಗರದ ಶ್ರೀ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಗೃಹಲಕ್ಷ್ಮಿ ಯೋಜನೆಯ ಚಾಲನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ತಕ್ಷಣ ಜಾರಿಗೆ ತರುತ್ತೇವೆ ಎಂಬ ಭರವಸೆ ನೀಡಿತ್ತು. ಇದಕ್ಕೆ ಅನೇಕ ವಿರೋಧ ಪಕ್ಷಗಳು ಅದು ಅಸಾಧ್ಯ ಎಂದು ಅಪಹಾಸ್ಯ ಮಾಡಿದ್ದವು. ಗೃಹಜ್ಯೋತಿ, ಅನ್ನಭಾಗ್ಯದಲ್ಲಿ ಅಕ್ಕಿ ವಿತರಣೆ ಬದಲು ತಾತ್ಕಾಲಿಕವಾಗಿ ಫಲಾನುಭವಿಗಳ ಖಾತೆಗೆ ಹಣ ಸಂದಾಯ ವಾಗಿದೆ ಹಾಗೂ ಶಕ್ತಿ ಯೋಜನೆಗಳು ಈಗಾಗಲೇ ಕಾರ್ಯರೂಪದಲ್ಲಿದ್ದು ಇಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗಿದೆ.
ಶಿರಾ ತಾಲೂಕು ಒಂದರಲ್ಲೇ ತಿಂಗಳಿಗೆ ೧೩ ಕೋಟಿ ೭೦ ಲಕ್ಷದ ೨೪ ಸಾವಿರ ರೂಗಳು ಫಲಾನುಭವಿಗಳ ಖಾತೆಗೆ
ಜಮಾ ಆಗಲಿದೆ, ಶೀಘ್ರದಲ್ಲೇ ಐದನೇ ಗ್ಯಾರೆಂಟಿ ಕಾರ್ಯರೂಪಕ್ಕೆ ಬರಲಿದೆ, ಮೈಸೂರಿನಲ್ಲಿ ನಮ್ಮ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ , ಯುವ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಂದ ಚಾಲನೆ ಕೊಂಡ ಗೃಹ ಲಕ್ಷ್ಮಿ ಯೋಜನೆಯ ನೇರ ಪ್ರಸಾರವನ್ನು ನಮ್ಮ ತಾಲೂಕಿನ ಗ್ರಾಮೀಣ ಪ್ರದೇಶದ ೪೨ ಗ್ರಾಮ ಪಂಚಾಯಿತಿಗಳಲ್ಲೂ, ನಗರದ ನಗರ ಸಭೆ, ಅಂಬೇಡ್ಕರ್ ಭವನ ಹೀಗೆ ಎಲ್ಲಾ ಕಡೆ ಜನ ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಪೂಜಾ ಪಿ, ತಹಶೀಲ್ದಾರ್ ಮುರಳಿಧರ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಅನಂತ ರಾಜ್ ಪಿಎಸ್, ನಗರಸಭೆ ಪ್ರಭಾರ ಆಯುಕ್ತೆ ಪಲ್ಲವಿ, ರೇಷ್ಮೆಇಲಾಖೆ ಅಧಿಕಾರಿ ಬಾಲಕೃಷ್ಣ, ಕೆಪಿಸಿಸಿ ಸದಸ್ಯ ಲೋಕೇಶ್, ನಗರಸಭಾ ಸದಸ್ಯರಾದ ತೇಜಸ್ವಿನಿ ಭಾನುಪ್ರಕಾಶ್, ಸಿ ಡಿ ಪಿ ಓ ರಾಜ ನಾಯಕ್, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.