ತುಮಕೂರು:
ಜಿಲ್ಲೆಯಲ್ಲಿ ಕಳೆದ 3-4 ತಿಂಗಳುಗಳಿಂದ ಪರಿತ್ಯಕ್ತ ಮಕ್ಕಳ ಪ್ರಕರಣಗಳು ಹೆಚ್ಚಾಗುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ವಿಷಾದ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಆಶಾ/ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಎ.ಎನ್.ಎಂ.ಗಳಿಗಾಗಿ ನಗರದ ಬಾಲಭವನದಲ್ಲಿಂದು ಆಯೋಜಿಸಿದ್ದ “ಪರಿತ್ಯಕ್ತ ಮಕ್ಕಳು ಮತ್ತು ರಕ್ಷಣೆ, ಕೌಟುಂಬಿಕ ದೌರ್ಜನ್ಯ ತಡೆ, ಬಾಲ್ಯ ವಿವಾಹ ನಿಷೇಧ, ವರದಕ್ಷಿಣೆ ನಿಷೇಧ, ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಣೆ ಮತ್ತು ಮಾರಾಟ ನಿಷೇಧ” ಕಾಯ್ದೆ ಕುರಿತು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕಳೆದ 6 ತಿಂಗಳ ಅವಧಿಯಲ್ಲಿ ಒಂದು ದಿನದ ಹಸುಗೂಸಿನಿಂದ ಹಿಡಿದು 4 ತಿಂಗಳಿನ ಎಳೆ ಕಂದಮ್ಮಗಳವರೆಗೆ ಒಟ್ಟು 17 ಮಕ್ಕಳು ಬೀದಿಯಲ್ಲಿ, ಕಸದ ತೊಟ್ಟಿಯಲ್ಲಿ, ದೇವಸ್ಥಾನಗಳಲ್ಲಿ, ಗಿಡದ ಪೊದೆಗಳಲ್ಲಿ ದೊರೆತಿವೆ. ಜಿಲ್ಲೆಯಲ್ಲಿ ದೊರೆತಿರುವ 17 ಪರಿತ್ಯಕ್ತ ಮಕ್ಕಳ ಪೈಕಿ 11 ಮಕ್ಕಳು ಹೆಣ್ಣು ಶಿಶುಗಳಾಗಿರುವುದು ಮತ್ತಷ್ಟು ನೋವು ತಂದಿದೆ. ಇಂತಹ ಮಕ್ಕಳ ಪೋಷಕರನ್ನು ಗುರುತಿಸಲು ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ತಾಯಂದಿರು ಯಾವುದೇ ಸಂದರ್ಭದಲ್ಲಿ ಮಗುವಿಗೆ ಜನ್ಮ ನೀಡಿದ್ದರೂ ಮಾನವೀಯ ದೃಷ್ಟಿಯಿಂದ ಮಗುವನ್ನು ಬೀದಿಗೆ ಬಿಸಾಡದೆ ಸರ್ಕಾರಿ ಆಸ್ಪತ್ರೆಗಳಲ್ಲಿರುವ “ಮಮತೆಯ ತೊಟ್ಟಿಲಿಗೆ” ಒಪ್ಪಿಸಬೇಕೆಂದು ಮನವಿ ಮಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಪರಿತ್ಯಕ್ತ ಮಕ್ಕಳ ಪ್ರಕರಣಗಳು ಹೆಚ್ಚಿದ್ದು, ಅಂಗನವಾಡಿ/ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿರುವ ಗರ್ಭಿಣಿ ಸ್ತ್ರೀಯರ ಮೇಲೆ ನಿಗಾ ಇಟ್ಟಿರಬೇಕು. ಸರ್ಕಾರಿ ನಿಯಮಗಳನ್ವಯ ಪ್ರತಿ ಗರ್ಭಿಣಿ ಸ್ತ್ರೀಯರು ಅಂಗನವಾಡಿ/ ಆರೋಗ್ಯ ಇಲಾಖೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಆಶಾ/ ಅಂಗನವಾಡಿ ಕಾರ್ಯಕರ್ತೆಯರಿಗೆ ತಮ್ಮ ವ್ಯಾಪ್ತಿಯ ಜನಸಂಖ್ಯೆ, ಕುಟುಂಬಗಳು ಗರ್ಭಿಣಿಯರು, ಮಕ್ಕಳು, ಬಾಣಂತಿಯರ, ಹೊರಗಿನಿಂದ ಗ್ರಾಮಗಳಿಗೆ ಬಂದು ಹೋಗುವವರ ಮಾಹಿತಿ ಹೊಂದಿರುತ್ತಾರೆ ಎನ್ನುವ ದೃಷ್ಟಿಯಿಂದ ಸರ್ಕಾರವು ಸ್ಥಳೀಯರನ್ನೇ ನೇಮಕ ಮಾಡುತ್ತದೆ ಎಂದು ಹೇಳಿದರಲ್ಲದೆ ಪರಿತ್ಯಕ್ತ ಮಕ್ಕಳ ಪ್ರಕರಣಗಳು ಹೆಚ್ಚದಂತೆ ಅಧಿಕಾರಿಗಳಿಗೆ ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈಗಾಗಲೇ ಸಭೆ ನಡೆಸಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಈ ನಿಟ್ಟಿನಲ್ಲಿ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕೆಂದರು.
ಜಿಲ್ಲೆಯಲ್ಲಿ ದೊರೆತಿರುವ ಪರಿತ್ಯಕ್ತ ಮಕ್ಕಳ ತಾಯಂದಿರ ಬಗ್ಗೆ ಅಂಗನವಾಡಿ/ಆರೋಗ್ಯ ಇಲಾಖೆಯಲ್ಲಿ ನೋಂದಣಿಯಾಗಿರುವುದಿಲ್ಲ. ಜಿಲ್ಲೆಯನ್ನು ಹೊರತುಪಡಿಸಿ ಬೇರೆಲ್ಲೋ ಜನಿಸಿದ ಮಕ್ಕಳನ್ನು ಇಲ್ಲಿ ಬಿಸಾಡಿ ಹೋಗಿರುವ ಸಾಧ್ಯತೆಯಿದೆ. ಪರಿತ್ಯಕ್ತ ಮಕ್ಕಳಿಗೆ ಜನ್ಮ ನೀಡಿದ ತಾಯಂದಿರು ಮಗುವಿಗೆ ಜನ್ಮ ನೀಡಿದ ವಿಷಯವನ್ನು ಮರೆಮಾಚುತ್ತಿರುವುದರಿಂದ ಇಂಥ ಪ್ರಕರಣಗಳು ಹೆಚ್ಚಾಗುತ್ತಿವೆ. ಅತ್ಯಾಚಾರದಿಂದಲೋ, ವಿವಾಹೇತರ/ ವಿವಾಹ ಪೂರ್ವ ಅನೈತಿಕ ಸಂಬಂಧಗಳಿಂದಲೋ ಮಹಿಳೆಯು ಗರ್ಭ ಧರಿಸಿದಾಗ ಜನಿಸಿದ ಮಗುವನ್ನು ಈ ರೀತಿ ಪರಿತ್ಯಜಿಸುವ ಸಾಧ್ಯತೆಯಿದೆ. ಅನೈತಿಕ ಸಂಬಂಧಗಳಿಂದ ಜನಿಸುವ ಮಗುವನ್ನು ಪೋಷಿಸಲು ಸಮಾಜವನ್ನು ಎದುರಿಸಲಾಗದೆ ಬೀದಿ ಪಾಲು ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಗರ್ಭ ಧರಿಸಿದ ಸ್ತ್ರೀಯರನ್ನು ಕಾರ್ಯಕರ್ತೆಯರು ಗೌಪ್ಯವಾಗಿ ಸಮಾಲೋಚನೆ ನಡೆಸಿ ಧೈರ್ಯ ತುಂಬು ಜನಿಸಿದ ಮಗುವನ್ನು ಆಸಕ್ತ ಪೋಷಕರಿಗೆ ದತ್ತು ನೀಡಲು ಕಾನೂನಿನಲ್ಲಿ ಅವಕಾಶವಿದೆ ಎಂದು ಮನವರಿಕೆ ಮಾಡಬೇಕೆಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಪರಿತ್ಯಕ್ತ ಮಕ್ಕಳನ್ನು ಕಾನೂನು ಬಾಹಿರವಾಗಿ ಪೋಷಿಸುವುದು, ದತ್ತು ತೆಗೆದುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಅನಿವಾರ್ಯ ಸಂದರ್ಭಗಳಲ್ಲಿ ಯಾವುದೇ ತಾಯಿ ತಾನು ಹೆತ್ತ ಮಗುವನ್ನು ಪರಿತ್ಯಜಿಸದೆ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಮಮತೆಯ ತೊಟ್ಟಿಲಿಗೆ ಒಪ್ಪಿಸಿದಲ್ಲಿ ಕಾನೂನಾತ್ಮಕವಾಗಿ ನೋಂದಾಯಿಸಿಕೊಂಡವರಿಗೆ ದತ್ತು ನೀಡಲಾಗುವುದು. ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ನಾಗರಾಜ್, ಸಿಡಿಪಿಓಗಳಾದ ಸತ್ಯನಾರಾಯಣ, ಶ್ರೀಧರ, ಸಂಪನ್ಮೂಲ ವ್ಯಕ್ತಿ ಕವಿತ, ಮಮತ, ಮತ್ತಿತರರು ಪಾಲ್ಗೊಂಡಿದ್ದರು.