ತುಮಕೂರು
ಬರ, ಮಳೆ ಕೊರತೆ ನಡುವೆಯೂ ಗೌರಿ-ಗಣೇಶ ಹಬ್ಬವನ್ನು ಕಲ್ವತರುನಾಡಿನಲ್ಲಿ ಸಡಗರ ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಮುಂಜಾನೆಯೇ ಮಹಿಳೆಯರು ತಮ್ಮ ತಮ್ಮ ಮನೆಗಳ ಬಾಗಿಲಲ್ಲಿ ಮೊರಗಳನ್ನು ಇಟ್ಟು ಪೂಜೆ ಸಲ್ಲಿಸುವ ಮೂಲಕ ಗೌರಿ ಹಬ್ಬ ಆಚರಣೆಗೆ ಸಾಂಕೇತಿಕವಾಗಿ ಚಾಲನೆ ನೀಡಿದರು.
ನಂತರ ಮನೆಯಲ್ಲಿ ಗೌರಿ ಮೂರ್ತಿ ಇಟ್ಟು ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದರು.
ಮನೆಯಲ್ಲಿ ಪೂಜೆ, ವ್ರತ ಆಚರಣೆ ಬಳಿಕ ತಮ್ಮ ಬಡಾವಣೆಗಳ ವ್ಯಾಪ್ತಿಯಲ್ಲಿ ಗೌರಿ ಮೂರ್ತಿ ಪೂಜಿಸಿ ಬಾಗಿನ ಅರ್ಪಿಸಲು ಸಿದ್ದತೆ ಮಾಡಲಾಗಿದ್ದ ದೇವಾಲಯಗಳಿಗೆ ತೆರಳಿದ ಸುಮಂಗಲಿಯರು, ಮಕ್ಕಳು, ಯುವತಿಯರು ಗೌರಿಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಆಶೀರ್ವಾದ ಪಡೆದರು.
ನಗರದ ಬಿ.ಹೆಚ್. ರಸ್ತೆಯ ಟಿಜಿಎಂಸಿ ಬ್ಯಾಂಕ್ ಆವರಣದಲ್ಲಿರುವ ಮಹಾಲಕ್ಷಿ÷್ಮ ದೇವಾಲಯ, ಭದ್ರಮ್ಮ ವೃತ್ತದಲ್ಲಿರುವ ಸೋಮನಾಥೇಶ್ವರ ದೇವಾಲಯ, ಕುಣಿಗಲ್ ರಸ್ತೆಯ ಬನಶಂಕರಿಯಮ್ಮ, ಸೇರಿದಂತೆ ನಗರದ ವಿವಿಧ ದೇವಾಲಯಗಳಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಈ ಎಲ್ಲ ದೇವಾಲಯಗಳಲ್ಲೂ ಮಹಿಳೆಯರು, ಮಕ್ಕಳು, ಯುವತಿಯರು ಗೌರಿಗೆ ಬಾಗಿನ ಅರ್ಪಿಸಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡಿದ್ದು ವಿಶೇಷವಾಗಿತ್ತು.
ಮುಂಜಾನೆಯಿAದಲೇ ನಗರದ ವಿವಿಧ ದೇವಾಲಯಗಳಲ್ಲಿ ಗೌರಿ-ಗಣೇಶ ಹಬ್ಬದ ಅಂಗವಾಗಿ ಸುಮಂಗಲಿಯರು ತವರಿನಿಂದ ಬಂದAತಹ ಬಾಗಿನವನ್ನು ಗೌರಿ ಅರ್ಪಿಸಿದ್ದಲ್ಲದೆ, ಮಹಿಳೆಯರು ಪರಸ್ಪರ ಅರಿಶಿನ ಕುಂಕುಮ ನೀಡುವ ಮೂಲಕ ಹಬ್ಬದವನ್ನು ಆಚರಿಸಿದ್ದು ಸಾಮಾನ್ಯ ದೃಶ್ಯವಾಗಿತ್ತು.
ಗೌರಿ ಮೂರ್ತಿ, ಮೊರ, ಹೂವು, ಹಣ್ಣು, ಮಾವಿನ ಎಲೆ ಸೇರಿದಂತೆ ಇನ್ನಿತರೆ ಅಗತ್ಯ ವಸ್ತುಗಳ ಬೆಲೆ ಎಷ್ಟೇ ದುಪ್ಪಟ್ಟಾದರೂ ಅದನ್ನು ಲೆಕ್ಕಿಸದೆ ಗೌರಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದ್ದು ಜಿಲ್ಲೆಯಾದ್ಯಂತ ಕಂಡು ಬಂತು.
ಈ ಬಾರಿ ಗೌರಿ-ಗಣೇಶ ಚತುರ್ಥಿ ಒಂದೇ ದಿನ ಬಂದಿದ್ದರಿAದ ಯುವಕರು, ಮಕ್ಕಳು ಗಣೇಶ ಮೂರ್ತಿ ಖರೀದಿಸಿ ತಮ್ಮ ಊರು, ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿ ಸಂಭ್ರಮಿಸಿದರು.