ಪಾವಗಡ 


ದೀಪದ ಕೆಳಗೆ ಕತ್ತಲು ಎಂಬ೦ತೆ ಪಾವಗಡ ರೈತರು ವಿದ್ಯುತ್ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಏಷ್ಯಾದ ೨ನೆ ಅತೀ ದೊಡ್ಡ ಸೋಲಾರ್ ಪಾರ್ಕ್ ಇದ್ದರೂ ರೈತರಿಗೆ ಸಮಯಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಎಂದು ಜೆಡಿಎಸ್ ಪಕ್ಷದಿಂದ ಬೆಸ್ಕಾಂ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಸೋಮವಾರ ಜೆಡಿಎಸ್ ಪಕ್ಷದಿಂದ ಬೃಹತ್ ಪ್ರತಿಭಟನೆ ನಡೆಸಿ ಮಾತನಾಡಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷರು ಆರ್.ಸಿ.ಅಂಜಿನಪ್ಪ, ಪಾವಗಡ ತಾಲ್ಲೂಕಿನಲ್ಲಿ ೨೩೦೦ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು ಆದರೆ, ತಾಲ್ಲೂಕಿನ ಸಮರ್ಪಕವಾಗಿ ವಿದ್ಯುತ್ ಪೂರೈಸದ ಕಾರಣ ಬೆಸ್ಕಾಂ ಇಲಾಖೆ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮುತ್ತಿಗೆ ಹಾಕಿದ್ದೇವೆ. ರೈತರಿಗೆ ಬೇಕಾಗುವ ಸುಮಾರು ೨೦೦ ಮೆಗಾ ವ್ಯಾಟ್ ವಿದ್ಯುತ್ ನ್ನು ಮೊದಲು ತಾಲ್ಲೂಕಿಗೆ ಬಳಸಿಕೊಂಡು ಉಳಿದ ವಿದ್ಯುತ್ ನ್ನು ಬೇರೆ ಕಡೆ ಪೂರೈಸಬೇಕೆಂದು ಒತ್ತಾಯಿಸಿದರು.
ಬೆಳಗಿನ ಸಮಯದಲ್ಲಿ ವಿದ್ಯುತ್ ನೀಡಬೇಕೆಂದು ಈ ಹಿಂದೆ ೭ ಗಂಟೆಗಳ ಕಾಲ ವಿದ್ಯುತ್ ನೀಡುತ್ತಿದ್ದರು ಈಗ ಬೆಳಿಗ್ಗೆ ೨ ತಾಸು ಮತ್ತು ಉಳಿಕೆ ವಿದ್ಯುತ್‌ನ್ನು ರಾತ್ರಿ ಸಮಯದಲ್ಲಿ ನೀಡುವುದರಿಂದ ರೈತರು ನಿದ್ದೆ ಕಟ್ಟಿ ಆರೋಗ್ಯ ಕೆಡಿಸಿಕೊಂಡು ವಿದ್ಯುತ್ ಗಾಗಿ ಕಾಯಬೇಕಾಗಿದೆ. ಕೆಲವೊಮ್ಮೆ ಕಾಡು ಪ್ರಾಣಿಗಳು, ವಿಷ ಜಂತುಗಳ ಹಾವಳಿಗೆ ತುತ್ತಾಗಬೇಕಾಗಿದೆ. ಇದನ್ನು ತಪ್ಪಿಸಲು ಬೆಳಗಿನ ಸಮಯದಲ್ಲಿ ವಿದ್ಯುತ್ ಪೂರೈಸಬೇಕೆಂದು ಜಿಲ್ಲಾಧ್ಯಕ್ಷರು ಒತ್ತಾಯಿಸಿದರು.
ಮನವಿಯನ್ನು ಸ್ವೀಕರಿಸಿದ ಬೆಸ್ಕಾಂ ಎಇಇ ಕೃಷ್ಣಮೂರ್ತಿ ಮಾತನಾಡಿ, ರೈತರ ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಇಂದು ನೀವುಗಳು ಮನವರಿಕೆ ಮಾಡಿದ್ದೀರಾ ಇಲ್ಲೇ ಉತ್ಪತ್ತಿಯಾಗುವ ವಿದ್ಯುತ್ತಿಗೆ ಮೊದಲ ಆದ್ಯತೆ ನೀಡಿ ತಾಲ್ಲೂಕಿಗೆ ಪೂರೈಸಿದ ನಂತರ ಉಳಿಕೆ ವಿದ್ಯುತ್ ನ್ನು ರಾಜ್ಯದ್ಯಂತ ಪೂರೈಸಬೇಕೆಂದು ಹೇಳಿರುವ ವಿಷಯವನ್ನು ಮೇಲಾಧಿಕಾರಿಗಳೊಂದಿಗೆ ಚರ್ಚಿಸುತ್ತೇನೆಂದು ತಿಳಿಸಿದರು.
೨-೩ ತಾಸು ಕಳೆದ ೧ ವಾರದಿಂದ ವಿದ್ಯುತ್ ನೀಡುತ್ತಿದ್ದು ಕಂಡು ಬಂದಿದೆ. ಮಳೆಯ ಅಭಾವ ಮತ್ತು ಬೆಳಗಿನ ಒತ್ತು ೭ ತಾಸು ವಿದ್ಯುತ್ ನೀಡಿದಾಗ ಕೆಲವು ರೈತರು ನಮ್ಮ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಯಂತ್ರೋಪಕರಣಗಳು ಸುಟ್ಟು ಹೋಗುತ್ತಿವೆ ಎಂದು ತಿಳಿಸಿರುತ್ತಾರೆ. ಇನ್ನು ೨-೩ ದಿನದಲ್ಲಿ ಆಯಾ ಪ್ರದೇಶದ ಅನುಗುಣವಾಗಿ ವಿದ್ಯುತ್ ನ್ನು ಪೂರೈಸುತ್ತೇವೆ ಎಂದು ಸ್ಪಷ್ಟನೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎನ್.ತಿಮ್ಮಾರೆಡ್ಡಿ, ತಾಲ್ಲೂಕು ಅಧ್ಯಕ್ಷ ಎನ್.ಎ.ಈರಣ್ಣ, ಮಹಾ ಪ್ರಧಾನ ಕಾರ್ಯದರ್ಶಿ ಸೊಗಡು ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಗೋವಿಂದ ಬಾಬು,
ನಿಕಟ ಪೂರ್ವ ಅಧ್ಯಕ್ಷ ಬಲರಾಮ ರೆಡ್ಡಿ, ರೈತ ಘಟಕದ ಅಧ್ಯಕ್ಷ ಗಂಗಾಧರ್ ನಾಯ್ಡು, ನಗರಾಧ್ಯಕ್ಷ ಗಡ್ಡಂ ತಿಮ್ಮರಾಜು, ಮಾಜಿ ಪುರಸಭೆ ಸದಸ್ಯರಾದ ಮನು ಮಹೇಶ್, ಜಿ.ಎ.ವೆಂಕಟೇಶ್, ಗುಟ್ಟಹಳ್ಳಿ ಮಣಿ, ಮುಖಂಡರುಗಳಾದ ರಾಮಕೃಷ್ಣರೆಡ್ಡಿ, ತೆಂಗಿನಕಾಯಿ ವೆಂಕಟೇಶ್ ಮತ್ತು ಹಲವು ತಾಲ್ಲೂಕಿನ ಪದಾಧಿಕಾರಿಗಳು ಇದ್ದರು.

 

ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ಅತಿಹೆಚ್ಚು ವಿದ್ಯುತ್ ತಾಲ್ಲೂಕಿನಲ್ಲಿ ಉತ್ಪತ್ತಿಯಾಗುತ್ತಿದ್ದರು ತಾಲ್ಲೂಕಿಗೆ ಉಪಯೋಗವಾಗುತ್ತಿಲ್ಲ ಎಂದು ನಿಮ್ಮ ಇಲಾಖೆಯ ಮೇಲೆ ಜನರ ಮನಸ್ಸಿನಲ್ಲಿ ಆಕ್ರೋಶವಿದೆ. ತಾಲ್ಲೂಕಿಗೆ ಬೇಕಾಗಿರುವ ವಿದ್ಯುತ್‌ನ್ನು ಯಾವ ಕಾರಣದಿಂದ ಕಾಯ್ದಿರಿಸಲ್ಪಡುತ್ತಿಲ್ಲ ನಿಮ್ಮ ಸರ್ಕಾರ ಮತ್ತು ನಿಮ್ಮ ಇಲಾಖೆ ಯಾವ ನಿಯಮಾವಳಿಯನ್ನು ಅನುಸರಿಸುತ್ತಿದ್ದೀರಾ ಇದನ್ನು ರೈತರಿಗೆ ಮತ್ತು ಸಾರ್ವಜನಿಕರಿಗೆ ಬಹಿರಂಗ ಪಡೆಸಬೇಕೆಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಬೆಸ್ಕಾಂ ಅಧಿಕಾರಿಗಳನ್ನು ಒತ್ತಾಯಿಸಿದರು.

(Visited 1 times, 1 visits today)