ತಿಪಟೂರು
ಗ್ರಾಮೀಣ ಮಹಿಳೆಯರಿಗೆ ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸುವ ಸದುದ್ದೇಶದಿಂದ ತಿಪಟೂರಿನಲ್ಲಿ ಪ್ರಾರಂಭವಾಗಿರುವ ನಮ್ಮ ಆರೋಗ್ಯ ಕೇಂದ್ರಗಳಿಗೆ ಯಶಸ್ವಿ ಮೊದಲ ವರ್ಷದ ಹರ್ಷ. ನಮ್ಮ ಆರೋಗ್ಯ ಕೇಂದ್ರಗಳು ಆರಂಭವಾಗಿ ಇಂದಿಗೆ ಒಂದು ವರ್ಷ ಪೂರೈಸಿದೆ. ಈ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಕ್ಕೆ ನಾವು ನಿಜಕ್ಕೂ ಹೆಮ್ಮೆಪಡುತ್ತೇವೆ.
ತಿಪಟೂರಿನ ಹಾಲ್ಕುರಿಕೆ ಗ್ರಾಮದಲ್ಲಿ ಮೊದಲ ಬಾರಿಗೆ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲಾಯಿತು. ನಂತರ ಕೆ.ಬಿ ಕ್ರಾಸ್ ನಲ್ಲಿ ಇನ್ನೊಂದು ಆರೋಗ್ಯ ಕೇಂದ್ರದ ಘಟಕವನ್ನು ಆರಂಭಿಸಲಾಯಿತು. ಈ ಎರಡು ಘಟಕಗಳು ನೂರಾರು ಮಹಿಳೆಯರ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವಾರು ರೀತಿಯಲ್ಲಿ ಇಂದು ವರ್ಷದಿಂದ ಯಶಸ್ವಿಯಾಗಿ ಮತ್ತು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಇದು ತುಮಕೂರು ಜಿಲ್ಲೆಯಲ್ಲಿಯೇ ಮೊದಲ ಖಾಸಗಿ ಯೋಜನೆಯಾಗಿದೆ ಎಂಬುದು ನಮ್ಮ ಹೆಮ್ಮೆ.
‘ನಮ್ಮ ಆರೋಗ್ಯ ಕೇಂದ್ರ’ ಸ್ಥಾಪಿಸಿದ ಕೀರ್ತಿ ಜನಸ್ಪಂದನ ಟ್ರಸ್ಟ್ ಗೆ ಸಲ್ಲುತ್ತದೆ. ಜನಸ್ಪಂದನ ಟ್ರಸ್ಟ್ ಮುಖ್ಯಸ್ಥ ಮತ್ತು ಕಾಂಗ್ರೆಸ್ ಮುಖಂಡ ಸಿ.ಬಿ. ಶಶಿಧರ್ ಟುಡ, ನಮ್ಮ ಆರೋಗ್ಯ ಕೇಂದ್ರದ ಸಹ ಸಂಸ್ಥಾಪಕರು ಮತ್ತು ಆರ್ಟಿಸ್ಟ್ ಫಾರ್ ಹರ್ ನ ಸಿಇಒ ಡಾ.ಹೇಮಾ ದಿವಾಕರ್, ಎಂಜೆಎಸ್ಪಿಆರ್ ನ ಮುಖ್ಯಸ್ಥ ಮತ್ತು ನಮ್ಮ ಆರೋಗ್ಯ ಕೇಂದ್ರದ ಸಹ ಸಂಸ್ಥಾಪಕ ಹಾಗೂ ಜನಸ್ಪಂದನ ಟ್ರಸ್ಟ್ ನ ಟ್ರಸ್ಟಿಯಾದ ಶ್ರೀ ಎಂ. ಜೆ. ಶ್ರೀಕಾಂತ್ ಅವರು ನಮ್ಮ ಆರೋಗ್ಯ ಕೇಂದ್ರದ ಸ್ಥಾಪನೆಯ ನೇತೃತ್ವ ವಹಿಸಿದ್ದರು.
ನಮ್ಮ ಆರೋಗ್ಯ ಕೇಂದ್ರವು ಸೋಮವಾರ- ಶುಕ್ರವಾರದಿಂದ ೩ ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತದೆ. ನಮ್ಮ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಬಿಪಿ, ಶುಗರ್ ಪರೀಕ್ಷೆ, ಜ್ವರ ತಪಾಸಣೆ ಮಾಡಲಾಗುತ್ತದೆ. ಆರೋಗ್ಯ ಸಖಿಯರು ‘ಹೆಲ್ತ್ ಫಾರ್ ಹರ್’ ಅಪ್ ಮೂಲಕ ರೋಗಿಗಳನ್ನು ಒಬಿಜಿ ತಜ್ಞರೊಂದಿಗೆ ಸಂಪರ್ಕಿಸಿ ಪರಿಹಾರಗಳನ್ನು ಪಡೆಯಲು ನೆರವಾಗುತ್ತಾರೆ. ವೈದ್ಯಕೀಯ ಸಹಾಯಕ್ಕಾಗಿ ನಮ್ಮ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವ ಮಹಿಳೆಯರು ಆರೋಗ್ಯ ಸಖಿಗಳಿಂದ ಮಾರ್ಗದರ್ಶನ ಮತ್ತು ಸಲಹೆಗಳನ್ನು ಪಡೆಯುತ್ತಾರೆ.
ನಮ್ಮ ಆರೋಗ್ಯ ಕೇಂದ್ರದಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಮಹಿಳೆಯರಿಗೆ ಮನವರಿಕೆ ಮಾಡಿಸಿ, ಅವರನ್ನು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸುತ್ತಾರೆ.
ನಮ್ಮ ಆರೋಗ್ಯ ಕೇಂದ್ರದಿAದ ಮಹಿಳೆಯರಿಗೆ ಆಗುವ ಪ್ರಯೋಜನದ ಕುರಿತು ಮತ್ತು ಮಹಿಳೆಯರು ಪ್ರಸ್ತುತ ದಿನಗಳಲ್ಲಿ ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳಾದ ಬಂಜೆತನ, ಗರ್ಭಕೋಶ ಸಮಸ್ಯೆ, ಬಿಳಿಮುಟ್ಟು , ಅನೀಮಿಯಾ, ಮುಟ್ಟಿನ ಸಮಸ್ಯೆ, ಕಾಲುನೋವು, ಮಂಡಿನೋವು ಇನ್ನಿತರ ಯಾವುದೇ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಮಹಿಳೆಯರಿಗೆ ಮಾಹಿತಿ ನೀಡುವ ಮೂಲಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವಂತೆ ಅವರಿಗೆ ಮನದಟ್ಟು ಮಾಡಿಸುತ್ತಾರೆ.
ಮುಖ್ಯವಾಗಿ ಗ್ರಾಮೀಣ ಮಹಿಳೆಯರ ಉತ್ತಮ ಆರೋಗ್ಯಕ್ಕಾಗಿ ವಿಶೇಷವಾಗಿ, ಸ್ತ್ರೀರೋಗ ಸಮಸ್ಯೆಗಳನ್ನು ಸಮಾಲೋಚಿಸಲು ನಮ್ಮ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಿದ್ದು, ಮಹಿಳೆಯರು ಭೇಟಿ ನೀಡಿ ನುರಿತ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರೊಂದಿಗೆ ವರ್ಚುಯೆಲ್ ಕನ್ಸಲ್ಟೇಷನ್ ಮೂಲಕ ಮಹಿಳೆಯರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾಹಿತಿ ಪಡೆದುಕೊಳ್ಳುತ್ತಾರೆ.
ನಮ್ಮ ಆರೋಗ್ಯ ಕೇಂದ್ರದ ಒಡಂಬಡಿಕೆಯ ಸಂಸ್ಥೆಗಳಾದ ಆರ್ಟಿಸ್ಟ್ ಫಾರ್ ಹರ್, ದಿವಾಕರ್ ಸ್ಪೆಷಾಲಿಟಿ ಆಸ್ಪತ್ರೆ, ಎಂಜೆಎಸ್ ಪಿಆರ್ ಸಂಸ್ಥೆ ಮತ್ತು ಜನಸ್ಪಂದನಾ ಟ್ರಸ್ಟ್ ವತಿಯಿಂದ ಕಾರ್ಯಾರಂಭ ಮಾಡಿರುವ ನಮ್ಮ ಆರೋಗ್ಯ ಕೇಂದ್ರಗಳು ತಿಪಟೂರು ತಾಲೂಕಿನ ಗ್ರಾಮೀಣ ಹೆಣ್ಣು ಮಕ್ಕಳ ಭವಿಷ್ಯದಲ್ಲಿ ತಮ್ಮದೇ ಆದ ಚಾಪು ಮೂಡಿಸಿವೆ. ಹೀಗಾಗಿ ಇಂದು ಈ ಆರೋಗ್ಯ ಕೇಂದ್ರಗಳು ತಮ್ಮ ಯಶಸ್ವಿ ಮೊದಲ ವರ್ಷವನ್ನು ಪೂರೈಸಿ ಹೆಣ್ಣುಮಕ್ಕಳ ಉತ್ತಮ ಆರೋಗ್ಯಕ್ಕಾಗಿ ವಿಶೇಷವಾಗಿ ಆರೋಗ್ಯ ಶಿಬಿರಗಳು ಹಾಗೂ ಆರೋಗ್ಯ ಮಾಹಿತಿ ಕುರಿತ ಕಾರ್ಯಗಾರಗಳನ್ನು ರೂಪಿಸುವುದರೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಹೀಗೆ ಸಾವಿರಾರು ಮಹಿಳೆಯರು ನಮ್ಮ ಆರೋಗ್ಯ ಕೇಂದ್ರಗಳ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.