ತುಮಕೂರು:
ಮನೆಯಲ್ಲಿ ಉತ್ಪತ್ತಿಯಾಗುವ ಕಸದಿಂದ ವಿದ್ಯುತ್‍ಚ್ಛಕ್ತಿ ತಯಾರಿಸುವುದು, ಸೈಪೋನ್ ತಂತ್ರಜ್ಞಾನ, ರಸ್ತೆಯಲ್ಲಿ ಸೋಲಾರ್ ಫಲಕ ಅಳವಡಿಕೆ, ರಾಕೇಟ್ ಒಲೆ ಸೇರಿದಂತೆ ವಿಜ್ಞಾನ ತಂತ್ರಜ್ಞಾನದ ಆವಿಷ್ಕಾರಗಳ ಪ್ರದರ್ಶನಕ್ಕೆ ತುಮಕೂರು ನಗರದ ಎಂಪ್ರೆಸ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಸಾಕ್ಷಿಯಾಯಿತು.
ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಡಿ.ಎಸ್.ಇ.ಆರ್.ಟಿ. ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಇನ್ಸ್‍ಪೈರ್ ಅವಾರ್ಡ್ ವಿಜ್ಞಾನ ವಸ್ತುಪ್ರದರ್ಶನದಲ್ಲಿ 10 ತಾಲ್ಲೂಕುಗಳ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು 435 ವಿಭಿನ್ನ ರೀತಿಯ ವಿಜ್ಞಾನ ವಸ್ತುಪ್ರದರ್ಶನವನ್ನು ಪ್ರದರ್ಶಿಸಿದರು.
ಮಕ್ಕಳ ಈ ವಿಜ್ಞಾನ ವಸ್ತುಪ್ರದರ್ಶನಕ್ಕೆ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಮಕ್ಕಳಲ್ಲಿರುವ ಚಿಂತನೆ ಮತ್ತು ಪ್ರತಿಭೆ ಬೆಳೆಯಲು ಇನ್ಸ್‍ಪೈರ್ ಅವಾರ್ಡ್ ತಂತ್ರಜ್ಞಾನ ಪ್ರಮುಖ ವೇದಿಕೆಯಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮವು ಭಾರತ ಸರ್ಕಾರದಿಂದ ಅನಾವರಣಗೊಂಡ ಕಾರ್ಯಕ್ರಮವಾಗಿದೆ. ಇದರ ಉದ್ದೇಶವೇನೆಂದರೆ ತಂತ್ರಜ್ಞಾನದಲ್ಲಿ ಮಕ್ಕಳಿಗೆ ಅತಿ ಹೆಚ್ಚಿನ ಜ್ಞಾನವನ್ನು ನೀಡುವುದು.
ವಿಜ್ಞಾನ ತಂತ್ರಜ್ಞಾನದ ಮೂಲಕ ಸಾಮಾಜಿಕ ಅವಶ್ಯಕತೆಯನ್ನು ಪೂರೈಸಿ ಶಾಲೆಗಳಲ್ಲಿ ಹೊಸ ಸಂಸ್ಕøತಿಯನ್ನು ಬೆಳೆಸುವ ಗುರಿಯನ್ನು ಹೊಂದಿದೆ ಮತ್ತು ವಿದ್ಯಾರ್ಥಿಗಳನ್ನು ಚುರುಕು ತೋರುವಂತೆ ಮಾಡುತ್ತದೆ ಎಂದು ಅವರು ತಿಳಿಸಿದರು.
ಇನ್ಸ್‍ಪೈರ್ ಅವಾರ್ಡ್ ಪಡೆದ ವಿದ್ಯಾರ್ಥಿಗಳಿಂದ ವರ್ಷ-ವರ್ಷ ಹೊಸ ತಂತ್ರಜ್ಞಾನದ ಬೆಳವಣಿಗೆಗೆ ಅವಕಾಶ ಮಾಡಿ ಕೊಡುತ್ತದೆ ಹಾಗೂ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ತಮ್ಮದೇ ಆದ ಜ್ಞಾನವನ್ನು ಪ್ರದರ್ಶಿಸಲು ಸೂಕ್ತವಾದ ವೇದಿಕೆಯಾಗಿದೆ. ನಮ್ಮ ದೇಶದಲ್ಲಿ ಹೊಸ ಹೊಸ ಪ್ರತಿಭೆಯನ್ನು ಸೃಷ್ಟಿಸಲು ಉತ್ತಮವಾದ ಅವಕಾಶವನ್ನು ಸೃಷ್ಠಿಸಿದೆ ಎಂದು ಅವರು ಹೇಳಿದರು.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಪ್ರತಾಪ್ ವಿದ್ಯಾರ್ಥಿಯು ಚಿಕ್ಕಂದಿನಿಂದಲೂ ವಿಜ್ಞಾನಿಯಾಗುವ ಕನಸು ಕಂಡು ಕಡು ಬಡತನದಿಂದ ತನ್ನ ತಾಯಿಯ ಮಾಂಗಲ್ಯ ಸರವನ್ನು ಒತ್ತೆ ಇಟ್ಟು ಗರುಡ ಕಲ್ಪನೆಯ ಹಾರಾಡುವ ದ್ರೋಣವನ್ನು ಕಂಡು ಹಿಡಿದು ನಮ್ಮ ದೇಶದ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಗಿಸಿದ ಕೀರ್ತಿ ಈತನಿಗೆ ಸಲ್ಲುತ್ತದೆ. ಆದ್ದರಿಂದ ಇಂತಹ ತಂತ್ರಜ್ಞಾನವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆ. ಮಂಜುನಾಥ ಅವರು, ತಾಲ್ಲೂಕು ಮಟ್ಟದಲ್ಲಿ ಸ್ಪರ್ಧೆಯನ್ನು ನಡೆಸಿ ಈಗ ಜಿಲ್ಲಾ ಹಂತದಲ್ಲಿ ಬಂದಿದ್ದೇವೆ. ತಮ್ಮದೇ ಆದ ಪ್ರತಿಭೆಯನ್ನು ಹೊರ ಹೊಮ್ಮುವ ಒಂದು ತಂತ್ರಜ್ಞಾನದ ಕಲೆ ಇದು. ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ತಿಳುವಳಿಕೆ ನೀಡುವ ಮುಖಾಂತರ ಸುಮಾರು 10 ತಾಲ್ಲೂಕುಗಳಿಂದ ಆಗಮಿಸಿರುವ 435 ವಿವಿಧ ರೀತಿಯಲ್ಲಿ ವಿಜ್ಞಾನ ವಸ್ತುಪ್ರದರ್ಶನವನ್ನು ಸಿದ್ಧಪಡಿಸಿದ್ದಾರೆ. ಇದನ್ನು ಬೇರೆಯವರು ಸದುಪಯೋಗಪಡಿಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸಹ ಅವರದೇ ಆದ ಜ್ಞಾನ ಇರುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಂಪ್ರೆಸ್ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜಯ್ಯ, ಡಯಟ್ ಪರಿವೀಕ್ಷಕ ಡಾ: ಎಂ.ಆರ್.ಡಿ.ಶೃತಿ, ಜಿಲ್ಲಾ ಪಂಚಾಯತ್ ಸದಸ್ಯರಾದ ನರಸೇಗೌಡರು ಮತ್ತು ಜಿಲ್ಲೆಯ ವಿವಿಧ ಶಾಲೆಯ ಶಿಕ್ಷಕರುಗಳು ಹಾಜರಿದ್ದರು.