ಹುಳಿಯಾರು:
ಅವೈಜ್ಞಾನಿಕ ಮತ್ತು ಅಪೂರ್ಣ ಚರಂಡಿ ಕಾಮಗಾರಿಯಿಂದಾಗಿ ಮನೆ ಮತ್ತು ಅಂಗಡಿಗಳಿಗೆ ಮಳೆ ಹಾಗೂ ಕೊಳಚೆ ನೀರು ನುಗ್ಗಿ ಅವಾಂತರ ಸೃಷ್ಠಿಸುತ್ತಿದ್ದರೂ ಸಹ ಹುಳಿಯಾರು ಪಪಂ ಅಧಿಕಾರಿಗಳು ಮಾತ್ರ ಜಾಣ ಕುರುಡು ಮತ್ತು ಜಾಣ ಮೌನ ಪ್ರದರ್ಶಿಸುತ್ತಿದ್ದಾರೆ.
ಹುಳಿಯಾರಿನ ಸಂತೆ ಬೀದಿಯಲ್ಲಿನ ಮನೆಗಳ ಕೊಳಚೆ ನೀರು ಹರಿಸಲು ಹುಳಿಯಾರು ಕೆರೆಯ ತೂಬು ನಾಲೆಯನ್ನೇ ಚರಂಡಿಯನ್ನಾಗಿ ಮಾರ್ಪಡಿಸಿದಾಗಲೇ ಇಲ್ಲಿನ ನಿವಾಸಿಗಳು ತಕರಾರು ತೆಗೆದಿದ್ದರು. ನಾಲೆಯನ್ನು ಈಗಾಗಲೇ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ಕಟ್ಟಿದ್ದಾರೆ, ಮೊದಲು ಅವುಗಳನ್ನು ತೆರವು ಮಾಡಿ ನಂತರ ನಾಲೆಯಲ್ಲಿ ನೀರು ಸರಾಗವಾಗಿ ಹರಿಯುವುದನ್ನು ಪರೀಕ್ಷಿಸಿ ಚರಂಡಿ ಮಾಡಿ ಎಂಬ ಸಲಹೆಯನ್ನೂ ಸಹ ಕೊಟ್ಟಿದ್ದರು.
ಅಲ್ಲಿನ ನಿವಾಸಿಗಳ ಸಲಹೆ ಕೇಳದೆ ಚರಂಡಿ ಕಾಮಗಾರಿ ಆರಂಭಿಸಿದರು. ಸಂತೆ ಬೀದಿಯಿಂದ ಒತ್ತುವರಿ ಮಾಡಿಕೊಂಡು ಉಳಿಸಿರುವ ಅಳಿದುಳಿದ ಜಾಗದಲ್ಲೇ ಚರಂಡಿ ಕಾಮಗಾರಿ ಮಾಡಿದರು. ಆದರೆ ರಾಮಗೋಪಾಲ್ ಸರ್ಕಲ್ ಬಳಿ ನಾಲೆ ಸಂಪೂರ್ಣವಾಗಿ ಒತ್ತುವಾರಿಯಾಗಿ ಮುಂದೆ ಚರಂಡಿ ಕಾಮಗಾರಿ ಮಾಡಲಾಗದೆ ಸ್ಥಗಿತಗೊಳಿಸಿದರು. ಆಗ ಅಲ್ಲಿನ ನಿವಾಸಿಗಳು ಕಾಮಗಾರಿ ಪೂರ್ಣ ಮಾಡದೆ ಅರ್ಧಕ್ಕೆ ನಿಲ್ಲಿಸಿದರೆ ನಮ್ಮ ಮನೆ, ಅಂಗಡಿಗಳಿಗೆ ಮೇಲಿಂದ ಬರುವ ಕೊಳಚೆ ನೀರು ನುಗ್ಗುತ್ತದೆ ಎಂದು ಎಚ್ಚರಿಸಿದ್ದರು.
ಶೀಘ್ರ ಒತ್ತುವರಿ ತೆರವು ಮಾಡಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿ ಹೋದವರು ಪುನಃ ಅತ್ತ ತಿರುಗಿಯೂ ಸಹ ನೋಡಲಿಲ್ಲ, ಪರಿಣಾಮ ಶನಿವಾರ ಬಿದ್ದ ಅಲ್ಪ ಮಳೆಯ ನೀರೇ ಸರಾಗವಾಗಿ ಹರಿಯಲಾಗದೆ ಚರಂಡಿ ತುಂಬಿ ಅಕ್ಕಪಕ್ಕದ ಮನೆ, ಅಂಗಡಿಗೆ ನುಗ್ಗಿತು. ಇದರಿಂದ ದಿನಸಿ, ಬಟ್ಟೆ ಸೇರಿದಂತೆ ಸಾವಿರಾರು ರೂ. ಮೌಲ್ಯದ ವಸ್ತುಗಳು ನೀರಿನಲ್ಲಿ ನೆನೆಯಿತು. ಮಳೆ ನಿಂತ ಮೇಲೆ ನೀರು ತೋಡಿ ಹಾಕಲು ಪ್ರಯತ್ನಿಸಿದರೂ ಸಹ ಸಾಧ್ಯವಾಗದೆ ಮೋಟರ್‌ನಿಂದ ನೀರು ಹೊರಗೆ ಹೊಡೆಯುವಂತ ಅನಿವಾರ್ಯ ಕರ್ಮ ನಿರ್ಮಾಣವಾಯಿತು.
ಇದರಿಂದ ಆಕ್ರೋಶಗೊಂಡ ಅಲ್ಲಿನ ನಿವಾಸಿಗಳು ಪಪಂ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತಮ್ಮ ಅಳಲನ್ನು ತೋಡಿಕೊಂಡರೂ ಸಹ ಯಾರೊಬ್ಬರೂ ಬಂದು ನೋಡಲಿಲ್ಲ.
ಪರಿಣಾಮ ತಕ್ಷಣ ಚರಂಡಿ ಕಾಮಗಾರಿ ಪೂರ್ಣಗೊಳಿಸಿ ನೀರು ಸರಾಗವಾಗಿ ಹರಿಯದಂತೆ ಮಾಡದಿದ್ದರೆ ಚರಂಡಿಗೆ ಮಣ್ಣು ಸುರಿದು ಮುಚ್ಚಬೇಕಾಗುತ್ತದೆ ಎಂದು ಎಚ್ಚರಿಸಿದರು.