ನವದೆಹಲಿ :


ಕೊಬ್ಬರಿ ಬೆಳೆಗಾರರು ಹೆಚ್ಚು ಇರುವ ತುಮಕೂರು, ಹಾಸನ ಮುಂತಾದ ಕಡೆಗಳಲ್ಲಿ ನಫೆಡ್ ಖರೀದಿ ಕೇಂದ್ರಗಳನ್ನು ಹೊಸ ವರ್ಷದ ಜನವರಿ ತಿಂಗಳಲ್ಲಿಯೇ ತೆರೆದು ಕೊಬ್ಬರಿ ಖರೀದಿ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಅರ್ಜುನ ಮುಂಡಾ ಅವರು ಭರವಸೆ ನೀಡಿದ್ದಾರೆ.
ನವದೆಹಲಿಯಲ್ಲಿ ತಮ್ಮನ್ನು ಭೇಟಿ ಮಾಡಿದ ರಾಜ್ಯದ ನಿಯೋಗಕ್ಕೆ ಮುಂಡಾ ಅವರು ಈ ಭರವಸೆ ನೀಡಿದ್ದಾರೆ ಎಂದು ನಿಯೋಗದಲ್ಲಿ ಇದ್ದ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್ ಗೌಡರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆಯಾದ ಶೋಭಾ ಕರಂದ್ಲಾಜೆ ಅವರ ನೆರವಿನಿಂದ ಅರ್ಜುನ ಮುಂಡಾ ಅವರ ಜತೆಗಿನ ಈ ಭೇಟಿಯನ್ನು ನಿಗದಿ ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ.
ನಿಯೋಗದಲ್ಲಿ ಸುರೇಶ್ ಗೌಡರು ಮಾತ್ರವಲ್ಲದೇ, ಮಾಜಿ ಸಚಿವ ಎಚ್.ಡಿ. ರೇವಣ್ಣ, ಶ್ರವಣ ಬೆಳಗೊಳದ ಶಾಸಕ ಎಚ್.ಸಿ. ಬಾಲಕೃಷ್ಣ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮುಂತಾದವರೂ ಇದ್ದರು.
ರಾಜ್ಯದಲ್ಲಿ ಬೆಲೆ ಕುಸಿತದಿಂದ ಕೊಬ್ಬರಿ ಬೆಳೆಗಾರರು ಸಂಕಷ್ಟಕ್ಕೆ ಈಡಾಗಿರುವುದನ್ನು ಸಚಿವರ ಗಮನಕ್ಕೆ ಜಂಟಿ ಮನವಿ ಮೂಲಕ ತರಲಾಯಿತು. ಸಚಿವರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಕೊಬ್ಬರಿ ಬೆಳೆಗಾರರಿಗೆ ಸಾಧ್ಯವಾದಷ್ಟು ಹೆಚ್ಚಿನ ನೆರವು ನೀಡುವುದಾಗಿ ಭರವಸೆ ನೀಡಿದರು ಎಂದು ಸುರೇಶ್ ಗೌಡರು ತಿಳಿಸಿದ್ದಾರೆ.
ನಫೆಡ್ ನಿಗದಿ ಮಾಡಿರುವ ಬೆಂಬಲ ಬೆಲೆಯನ್ನು ಹೆಚ್ಚಿಸಬೇಕು ಹಾಗೂ ಖರೀದಿ ಪ್ರಮಾಣವನ್ನೂ ಶೇಕಡ ೨೫ ಕ್ಕೆ ಏರಿಸಬೇಕು ಎಂದು ನಿಯೋಗವು ಕೇಂದ್ರ ಸಚಿವರಿಗೆ ಮನವಿ ಮಾಡಿತು.
ಈಗಾಗಲೇ ಕೇಂದ್ರ ಸರ್ಕಾರವು ನಫೆಡ್ ಮೂಲಕ ಖರೀದಿ ಮಾಡಲು ಕ್ವಿಂಟಲ್ ಕೊಬ್ಬರಿಗೆ ೧೧,೭೫೦ ರೂಪಾಯಿ ಬೆಂಬಲ ಬೆಲೆ ಘೋಷಿಸಿದೆ. ರಾಜ್ಯ ಸರ್ಕಾರವು ೧,೨೫೦ ರೂಪಾಯಿ ಬೆಂಬಲ ಬೆಲೆ ಮತ್ತು ಹೆಚ್ಚುವರಿಯಾಗಿ ೨೫೦ ರೂಪಾಯಿಗಳ ಪ್ರೋತ್ಸಾಹ ಧನ ಘೋಷಿಸಿದೆ. ಆದರೆ, ಖರೀದಿ ಕೇಂದ್ರಗಳನ್ನು ತೆರೆಯದೇ ಇರುವುದರಿಂದ ಸಮಸ್ಯೆಯಾಗಿದೆ ಎಂಬ ವಿಚಾರವನ್ನು ಕೇಂದ್ರ ಸಚಿವರ ಗಮನಕ್ಕೆ ತರಲಾಯಿತು ಎಂದು ಅವರು ತಿಳಿಸಿದ್ದಾರೆ.
ಬರ ಸ್ಥಿತಿಯಿಂದ ಕಂಗಾಲಾಗಿರುವ ರೈತರ ನೆರವಿಗೆ ಬರಬೇಕು ಮತ್ತು ತಕ್ಷಣದಲ್ಲಿಯೇ ಪರಿಹಾರ ಘೋಷಣೆ ಮಾಡಬೇಕು ಎಂದು ಈಚೆಗೆ ಸುರೇಶ್ ಗೌಡರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

(Visited 1 times, 1 visits today)