ಹುಳಿಯಾರು:


ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ, ಕಾಲೇಜು, ಹುಳಿಯಾರು-ಕೆಂಕೆರೆ, ಇಲ್ಲಿನ ಸಾಂಸ್ಕöÈತಿಕ ಸಂಘದ ವತಿಯಿಂದ ಏರ್ಪಡಿಸಿದ್ದ “ಕಿರುನಾಟಕಗಳ ಸ್ಪರ್ಧೆ’’ಯಲ್ಲಿ ವಿಜೇತರಾದವರಿಗೆ ಮಂಗಳವಾರ ಬಹುಮಾನ ವಿತರಿಸಲಾಯಿತು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ವೀರಣ್ಣ ಎಸ್.ಸಿ. ಅವರು ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಿದ್ದು, ಈ ನಿಟ್ಟಿನಲ್ಲಿ ರಂಗ ಅಭಿನಯ ಕೂಡ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಸಂಚಾಲಕರಾದ ಡಾ. ಮೋಹನ್ ಕುಮಾರ್ ಮಿರ್ಲೆ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡುತ್ತಾ, ವಿದ್ಯಾರ್ಥಿಗಳಲ್ಲಿ ಅಡಗಿರುವ ಅಭಿನಯ ಕೌಶಲ್ಯವನ್ನು ಗುರುತಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ರಂಗಭೂಮಿಯು ಸಾಮಾಜಿಕ ಜಾಗೃತಿ ಮೂಡಿಸುವ ಪ್ರಭಾವಶಾಲಿ ಮಾಧ್ಯಮವಾಗಿದ್ದು, ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಕಲಾವಿದರ ಚಿಂತನಾ ಲಹರಿಗಳ ಮೇಲೂ ಇದು ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಸ್ಪರ್ಧೆಯಲ್ಲಿ ಒಟ್ಟು ಏಳು ತಂಡಗಳು ಭಾಗವಹಿಸಿದ್ದು, ಐತಿಹಾಸಿಕ ಮತ್ತು ಪೌರಾಣಿಕ ಸಂಗತಿಗಳು, ಸಾಮಾಜಿಕ ಜಾಗೃತಿ, ಆರ್ಥಿಕ ಜಾಗೃತಿ, ಕನ್ನಡಾಭಿಮಾನ, ಸಂವಿಧಾನದ ಮಹತ್ವ, ಮಹಿಳಾ ಸಬಲೀಕರಣ, ಹಾಸ್ಯ, ಹೀಗೆ ವೈವಿಧ್ಯಮಯ ವಸ್ತು ವಿಷಯಗಳ ಕಿರು ನಾಟಕಗಳನ್ನು ಪ್ರದರ್ಶಿಸಿದರು.
“ಸಂವಿಧಾನ ಇಲ್ಲದೆ ಹೋದರೆ?!’’ ಎಂಬ ಕಿರುನಾಟಕವನ್ನು ಅಭಿನಯಿಸಿದ ಅಂತಿಮ ಬಿ.ಎ. ವಿದ್ಯಾರ್ಥಿಗಳಾದ ರಂಜಿತ ಆರ್. ಮತ್ತು ತಂಡದವರು ಪ್ರಥಮ ಬಹುಮಾನ ಪಡೆದರೆ, “ಮಹಿಳಾ ಸಬಲೀಕರಣ’’ ಎಂಬ ಕಿರುನಾಟಕವನ್ನು ಅಭಿನಯಿಸಿದ ಅಂತಿಮ ಬಿ.ಕಾಂ. ವಿದ್ಯಾರ್ಥಿಗಳಾದ ಕೋಮಲ ಎನ್. ಮತ್ತು ತಂಡದವರು ದ್ವಿತೀಯ ಬಹುಮಾನ ಪಡೆದರು. ಇನ್ನು “ಆರ್ಥಿಕ ವಂಚನೆ’’ ಎಂಬ ಕಿರುನಾಟಕವನ್ನು ಅಭಿನಯಿಸಿದ ಪ್ರಥಮ ಬಿ.ಕಾಂ. ವಿದ್ಯಾರ್ಥಿಗಳಾದ ರಕ್ಷಿತ ಸಿ. ಮತ್ತು ತಂಡದವರು ತೃತೀಯ ಬಹುಮಾನ ಪಡೆದರು. ಈ ಕಿರುನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ಪ್ರೊ. ಮಂಜುನಾಥ ಕೆ.ಎಸ್., ಡಾ. ಸುಷ್ಮಾ ಎಲ್. ಬಿರಾದಾರ್ ಮತ್ತು ಪ್ರೊ. ಸಂಗೀತಾ ಪಿ. ಅವರು ಕಾರ್ಯ ನಿರ್ವಹಿಸಿದ್ದರು. ವಾಣಿಜ್ಯಶಾಸ್ತç ವಿಭಾಗದ ಮುಖ್ಯಸ್ಥರಾದ ಪ್ರೊ. ಮಲ್ಲಿಕಾರ್ಜುನ ಮತ್ತು ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

(Visited 1 times, 1 visits today)