ಹುಳಿಯಾರು:


ಹುಳಿಯಾರು ಹೋಬಳಿಯ ಬೋರನ ಕಣಿವೆ ಜಲಾಶಯದಿಂದ ಹಿರಿ ಯೂರು ತಾಲೂಕಿನ ಗಾಯಿತ್ರಿ ಜಲಾ ಶಯಕ್ಕೆ ನೀರು ಬಿಡುವುದನ್ನು ವಿರೋಧಿಸಿ ಜಲಾಶಯದ ಬಳಿ ಅಚ್ಚು ಕಟ್ಟುದಾರರು ಪ್ರತಿಭಟನೆಗೆ ಮುಂದಾದರು. ಶಾಸಕ ಸಿ.ಬಿ.ಸುರೇಶ್‌ಬಾಬು ಅವರು ದೂರವಾಣಿ ಮೂಲಕ ೧೫ ದಿನ ಹಳ್ಳಕ್ಕೆ, ೧೫ ದಿನ ನಾಲೆಗೆ ಹರಿಸುವ ಸೂತ್ರದೊಂದಿಗೆ ರೈತರ ಮನವೊಲಿಸುವಲ್ಲಿ ಯಶ್ವಿಯಾದರು.
@ ಘಟನೆಯ ಹಿನ್ನೆಲೆ
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಜೆಜಿಹಳ್ಳಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ಅಭಾವ ಎದುರಾಗಿದ್ದು ಬೋರನಕಣಿವೆ ಜಲಾಶಯದಿಂದ ಗಾಯಿತ್ರಿ ಜಲಾಶಯಕ್ಕೆ ಹಳ್ಳದ ಮುಖಾಂತರ ೩ ಅಡಿ ನೀರು ಹರಿಸಲು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು ಕೋರಿದ್ದರು. ಅದರಂತೆ ಪ್ರದೇಶಿಕ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ೩ ದಿನಗಳ ಕಾಲ ನಿರಂತರವಾಗಿ ಗಾಯಿತ್ರಿ ಜಲಾಶಯಕ್ಕೆ ನೀರು ಬಿಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದರು.
@ ಜಯಚಂದ್ರ ಪತ್ರ
ಪ್ರದೇಶಿಕ ಆಯುಕ್ತರು ೩ ದಿನಗಳ ಕಾಲ ನೀರು ಬಿಡಲು ಬರೆದ ಪತ್ರಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರದ ನವದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ಪತ್ರ ಬರೆದು ಜಲಾಶಯದಲ್ಲಿ ೨೪ ಅಡಿ ಲೈವ್ ಸ್ಟೋರೇಜ್ ಇದ್ದು ಗಾಯಿತ್ರಿ ಜಲಾಶಯಕ್ಕೆ ನೀರು ಹರಿಯಬೇಕಾದರೆ ೨೭ ಕಿಮೀ ಹಳ್ಳದ ಮುಖೇನ ಕ್ರಮಿಸಬೇಕಿದೆ. ನಡುವೆ ಹಳ್ಳದಲ್ಲಿ ಇರುವ ೧೦ ಚೆಕ್ ಡ್ಯಾಂಗಳು ತುಂಬಿ ಹರಿಯಬೇಕಾದರೆ ೨ ರಿಂದ ೩ ಅಡಿ ನೀರು ಹರಿಸಬೇಕಾಗುತ್ತದೆ ಎಂದು ಕೋರಿದ್ದರು.
@ ಹಿರಿಯೂರು ರೈತರ ಪ್ರವೇಶ
ಬೋರನಕಣಿವೆ ಜಲಾಶಯದಿಂದ ಹಿರಿಯೂರು ತಾಲ್ಲೂಕಿನ ಗಾಯತ್ರಿ ಜಲಾಶಯಕ್ಕೆ ನೀರು ಹರಿಸಲು ಪ್ರಾದೇಶಿಕ ಆಯುಕ್ತರ ಆದೇಶದ ಮೇರೆಗೆ ಗಾಯತ್ರಿ ಜಲಾಶಯ ಭಾಗದ ಗ್ರಾಮಗಳ ರೈತರು ಗುರುವಾರ ಸಂಜೆ ಜಲಾಶಯದ ಬಳಿ ಬಂದು ನಾಲೆ ಒಡೆದು ಹಳ್ಳಕ್ಕೆ ನೀರು ಹರಿಸಲು ಸಜ್ಜುಗೊಳಿಸಿದರು. ಇದರಿಂದ ಸಹಜವಾಗಿ ಬೋರನಕಣಿವೆ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರು ಆಕ್ರೋಶಗೊಂಡು ಹಿರಿಯೂರಿಗೆ ನೀರು ಬಿಡುವುದಿಲ್ಲವೆಂದು ಪಟ್ಟು ಹಿಡಿದು ಶುಕ್ರವಾರ ಜಲಾಶಯದ ಬಳಿ ಧರಣಿ ಕುಳಿತರು.
@ ನಮ್ಮಲ್ಲೇ ನೀರಿಗೆ ಬರ
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲೇ ನೀರಿಗೆ ಬರವಿದ್ದು ಸಾವಿರ ಅಡಿ ಕೊರೆದರೂ ನೀರು ಸಿಗದಂತಾಗಿದೆ. ದನಕರುಗಳಿಗೆ ನೀರು, ಮೇವಿಲ್ಲದೆ ಪರಿತಪಿಸುತ್ತಿದ್ದಾರೆ. ಹಾಗಾಗಿಯೇ ಅಂತರ್ಜಲ ವೃದ್ಧಿಯ ಜೊತೆಗೆ ಮೇವು ಬೆಳೆಯಲು ನೆರವಾಗಲೆಂದು ಬೋರನಕಣಿವೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡಲಾಗಿತ್ತು. ಅಲ್ಲದೆ ಈಗ ಬೆಳೆಗಳಿಗೆ ಎರಡನೇ ಹಂತದ ನೀರು ಬಿಡುವ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಗಾಯಿತ್ರಿ ಜಲಾಶಯಕ್ಕೆ ನೀರು ಬಿಡಲು ನಮ್ಮ ಸಹಮತಿ ಇಲ್ಲ ಎಂದು ಧರಣಿ ನಿರತ ರೈತರು ಪಟ್ಟು ಹಿಡಿದಿದ್ದರು.
ಧರಣಿ ನಿರತರ ಬಳಿ ಶಾಸಕ ಸಿ.ಬಿ.ಸುರೇಶ್‌ಬಾಬು ಅವರು ದೂರವಾಣಿ ಮೂಲಕ ಮಾತನಾಡಿದಾಗ ರೈತರು ೧೦ ಚೆಕ್ ಡ್ಯಾಂ ತುಂಬಿ ೨೭ ಕಿ.ಮೀ ಕ್ರಮಿಸಿ ಗಾಯಿತ್ರಿ ಜಲಾಶಯಕ್ಕೆ ನೀರು ಹರಿಯಬೇಕಾದರೆ ಕನಿಷ್ಟ ಎಂದರೂ ಮರ‍್ನಲ್ಕು ಟಿಎಂಸಿ ನೀರು ಬೇಕು. ಇಷ್ಟು ನೀರು ಜಲಾಶಯದಲ್ಲಿ ಖಾಲಿಯಾದರೆ ನಮ್ಮ ತಾಲೂಕಿನಲ್ಲೇ ನೀರಿನ ಹಾಹಾಕಾರ ಹೆಚ್ಚಾಗುತ್ತದೆ ಎಂದು ವಿವರಿಸಿದರು. ಇದಕ್ಕೆ ಶಾಸಕರು ಅಲ್ಲಿನ ಜನರಿಗೂ ನೀರಿನ ಸಮಸ್ಯೆಯಿದ್ದು ನಮ್ಮನಮ್ಮಲ್ಲಿ ಸಂಘರ್ಷ ಮಾಡಿಕೊಳ್ಳುವುದು ಬೇಡ. ೧೫ ದಿನಗಳ ಕಾಲ ಹಳ್ಳದ ಮೂಲಕ ಅವರಿಗೆ, ನಂತರದ ೧೫ ದಿನಗಳ ಕಾಲ ನಾಲೆ ಮೂಲಕ ನಮ್ಮ ರೈತರಿಗೆ ನೀರು ಬಿಡೋಣ. ಅಷ್ಟರಲ್ಲಿ ಆಯುಕ್ತರಿಗೆ ಚಿಕ್ಕನಾಯಕನಹಳ್ಳಿ ತಾಲೂಕಿನ ನೀರಿನ ಸಮಸ್ಯೆ ತಿಳಿಸಿ ಆದೇಶವನ್ನು ಹಿಂಪಡೆಯುವAತೆ ಮಾಡೋಣ ಎಂಬ ಸೂತ್ರ ಎಣೆದು ಧರಣಿ ಹಿಂಪಡೆಯುವAತೆ ಮಾಡಿದರು.

(Visited 1 times, 1 visits today)