ದೇಶ ತೊರೆದು ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ ಹಾಗೂ 58 ವಿತ್ತಪರಾಧಿಗಳನ್ನು ಕರೆ ತರಲು ಶತಾಯಗತಾಯ ಕಾರ್ಯಪ್ರವೃತ್ತವಾಗಿರುವುದಾಗಿ ಕೇಂದ್ರ ಸರಕಾರ ಸಂಸತ್ತಿಗೆ ತಿಳಿಸಿದೆ.
ನೀರವ್ ಮೋದಿ, ಮೆಹುಲ್ ಚೋಕ್ಸಿ ಅಷ್ಟೇ ಅಲ್ಲದೆ ಒಟ್ಟು 58 ವಿತ್ತಪರಾಧಿಗಳನ್ನು ಕರೆ ತರಲು ಕಾರ್ಯಚರಣೆ ನಡೆಸಿರುವುದಾಗಿ ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಕೆ ಸಿಂಗ್ ಈ ಸಂಬಂಧ ಲೋಕಸಭೆಗೆ ವಿವರಗಳನ್ನು ನೀಡಿದ್ದಾರೆ.
ಒಟ್ಟು 58 ಆರೋಪಿಗಳ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಸಚಿವ ವಿ.ಕೆ ಸಿಂಗ್ ಮಾಹಿತಿ ನೀಡಿದ್ದಾರೆ. ಒಟ್ಟು 58 ವಿತ್ತಪರಾಧಿಗಳ ಪೈಕಿ 16 ಮಂದಿಯ ಗಡಿಪಾರು ಕೋರಿ ಬ್ರಿಟನ್, ಯುಎಇ, ಬೆಲ್ಜಿಯಂ, ಈಜಿಪ್ತ್, ಅಮೆರಿಕ, ಅಂಟಿಗುವಾ ಮತ್ತು ಬಾರ್ಬುಡಾಗೆ ಮನವಿ ಸಲ್ಲಿಸಲಾಗಿದೆ.
ನೀರವ್ ಮೋದಿ, ಮೆಹುಲ್ ಚೋಕ್ಸಿ, ಲಲಿತ್ ಮೋದಿ, ನೀರವ್ ಮೋದಿ ಸೋದರ ನೀಶಲ್, ಆಪ್ತನಾದ ಸುಭಾಷ್ ಪರಬ್, ನಿತಿನ್ ಮತ್ತು ಚೇತನ್ ಸಂದೇಸರ, ಯುರೋಪಿನ ಮಧ್ಯವರ್ತಿ ಗುಯಿಡೊ ರಾಲ್ಫ್ ಹಷ್ಕೆ, ಕಾರ್ಲೊ ಜೆರೋಸಾ, ನೀರವ್, ಗುಜರಾತ್ ಮೂಲದ ಉದ್ಯಮಿ ಆಶಿಶ್ ಜೋಬಾನ್ ಪುತ್ರ ಮತ್ತು ಪತ್ನಿ ಪ್ರೀತಿ ದೇಸಾಯಿ ಮತ್ತಿತರ ಪ್ರಮುಖರು ಈ 58 ಆರೋಪಿಗಳ ಪಟ್ಟಿಯಲ್ಲಿದ್ದಾರೆ. ವಿದೇಶಗಳಲ್ಲಿ ತಲೆಮರೆಸಿಕೊಂಡವರಲ್ಲಿ ಗುಜರಾತ್ ರಾಜ್ಯದವರೇ ಹೆಚ್ಚಿದ್ದಾರೆ.