ತುಮಕೂರು
ಜನಪ್ರತಿನಿಧಿಗಳು ಜಾತಿ ನಾಯಕ ರಾಗುವು ದರಿಂದ ಜನನಾಯಕರಾಗಲು ಸಾಧ್ಯವಿಲ್ಲ.ಎಲ್ಲ ವರ್ಗದ ಜನರ ವಿಶ್ವಾಸ ಗಳಿಸಿದಾಗ ಮಾತ್ರ ಹೆಚ್ಚು ದಿನ ರಾಜಕೀಯ ಅಧಿಕಾರ ಅನುಭವಿಸಲು ಸಾಧ್ಯ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ನಗರದ ಎಂಪ್ರೆಸ್ ಕೆಪಿಎಸ್ ಶಾಲೆ ಸಭಾಂಗಣದಲ್ಲಿ ತುಮಕೂರು ಜಿಲ್ಲಾ ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ಧಿ ಸಂಘ (ರಿ) ,ಶ್ರೀ ವಾಲ್ಮೀಕಿ ವಿದ್ಯಾವರ್ಧಕ ಸಂಘ, ಜಿಲ್ಲ ನಾಯಕ ಮಹಿಳಾ ಸಮಾಜ, ಶಬರಿ ಮಹಿಳಾ ಪತ್ತಿನ ಸಹಕಾರ ಸಂಘ.ನಿ, ತುಮಕೂರು ವಾಲ್ಮೀಕಿ ಸಹಕಾರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ೨೦೨೩-೨೪ ನೇ ಸಾಲಿನ ವಾಲ್ಮೀಕಿ ಸಮಾಜದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ರಾಜಕೀಯ ಅಧಿಕಾರವೆಂಬುದು ಅತಿ ಮುಖ್ಯ ಅಂಗವಾಗಿದೆ.ಅಧಿಕಾರ ದೊರೆತ ಸಂದರ್ಭದಲ್ಲಿ ದ್ವನಿ ಇಲ್ಲದ ಸಮುದಾಯಗಳ ಪರವಾಗಿ ಕೆಲಸ ಮಾಡಿದಾಗ ಮಾತ್ರ ಜನರ ಪ್ರೀತಿಗಳಿಸಲು ಸಾಧ್ಯ ಎಂದರು.
ನಾಯಕ ಸಮುದಾಯದ ಮಕ್ಕಳು ಜಿಲ್ಲಾಮಟ್ಟದಲ್ಲಿ ೨೫೦ ಕ್ಕೂ ಹೆಚ್ಚು ಮಕ್ಕಳು ಶೇ ೮೦ ಫಲಿತಾಂಶ ಪಡೆದಿದ್ದಾರೆ.ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ,ಮಕ್ಕಳು ಹೆಚ್ಚು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ,ವಿದ್ಯೆ ಇಂದಿನ ಸಮಾಜದಲ್ಲಿ ಒಂದು ಪ್ರಮುಖ ಸಾದನ,ಸಮಾಜದಲ್ಲಿ ಗೌರವವನ್ನು ಸಂಪಾದನೆ ಮಾಡಬೇಕಾದರೆವಿದ್ಯೆ ಅನಿ ವಾರ್ಯ ಎಂದ ಅವರು, ಪ್ರತಿಯೊಬ್ಬರಿಗೂ ಸಮಾನಾದ ಬುದ್ಧಿಶಕ್ತಿ ಇರುತ್ತದೆ ಅದನ್ನು ಸರಿಯಾಗಿಬಳಸಿಕೊಳ್ಳಬೇಕು ಎಂದು ಸಚಿವ ರಾಜಣ್ಣ ಕಿವಿಮಾತು ಹೇಳಿದರು.
ಇಂದಿನ ಕಾರ್ಯಕ್ರಮದಲ್ಲಿ ಸಮಾಜದ ಹಿತ ಬಯಸುವವರು,ಸಮಾಜ ಕಟ್ಟಿ ಬೆಳಸುವ ಎಲ್ಲರೂ ಒಂದು ಕಡೆ ಸೇರಿರುವುದು ಖುಷಿಕೊಟ್ಟಿದೆ.ಸಮಾಜದ ಮಕ್ಕಳನ್ನು ಪ್ರೊತ್ಸಾಹಿಸುವ ಉದ್ದೇಶದಿಂದ ಪ್ರತಿ ತಾಲೂಕಿನಲ್ಲೂ ಮುಂದಿನ ವರ್ಷದಿಂದ ಪ್ರತಿಭಾ ಪುರಸ್ಕಾರ ನಡೆಸಿದರೆ ಹೆಚ್ಚಿನ ಮಕ್ಕಳಿಗೆ ಸ್ಪೂರ್ತಿ ನೀಡಿದಂತಾಗುತ್ತದೆ ಎಂದ ಅವರು,ಪ್ರತಿಯೊಬ್ಬರು ರಾಜಕೀಯವಾಗಿ ಬೆಳಯಲು ಅಸಾಧ್ಯ,ರಾಜಕೀಯವಾಗಿ ಬೆಳದವರು,ಜನಾಂಗದವರ ಹಿತ ಕಾಪಾಡಬೇಕು.ರಾಜಕೀಯ ಅಧಿಕಾರವನ್ನು ಎಲ್ಲಾರ ಜೊತೆ ಹಂಚಿಕೊAಡರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತಾರೆ,ಇಲ್ಲವೆಂದರೆ ಸೋಲುತ್ತಾರೆ.ಇಂದಿನ ಚುನಾವಣೆಗಳು ಬಾರಿ ದುಬಾರಿಯಾಗಿವೆ,ಸಮಾಜದವರು ಎಲ್ಲಾ ರಾಜಕೀಯ ಪಕ್ಷದಲ್ಲೂ ಗುರುತಿಸಿ ಕೊಂಡು ಬೆಳೆಯರಿ,ಸಮಾಜದ ವಿಚಾರ ಬಂದಾಗ ಸಂಘಟಿತರಾಗಿ ರಾಜಕೀಯ ಅಧಿಕಾರ ಪಡೆಯಿರಿ ಎಂದು ಸಲಹೆ ನೀಡಿದರು.
ಮರ್ಹಷಿ ವಾಲ್ಮೀಕಿಯನ್ನು ದರೋಡೆಕೋರ ಎನ್ನುವವರು ಆಯೋಗ್ಯರು,ಮೇಲ್ವರ್ಗದ ಜನ ಸುಖ ಸುಮ್ಮನೆ ತಳ ಸಮುದಾಯದ ಜನರನ್ನು ಕೀಳುಮಟ್ಟದಿಂದ ಕಾಣುವ ಪರಿಸ್ಥಿತಿ ಹೋಗಬೇಕು.ವಾಲ್ಮೀಕಿ ದರೋಡೆಕೋರ ಎಂದು ಯಾರಾದರೂ ಸಭೆಗಳಲ್ಲಿ ಹೇಳಿದರೆ ಅಲ್ಲೇ ಖಂಡನೆ ಮಾಡಿ,ತಳ ಸಮುದಾಯಗಳಪರ ನಾಯಕತ್ವ ವಹಿಸಿ ಅಸಹಾಯಕ ಸಮುದಾಯದವರ ಬೆನ್ನಿಗೆ ನಿಂತು ನಾವು ನಾಯಕರಾಗಿ ಬೆಳಯಬೇಕು ಎಂದು ಯುವ ರಾಜಕಾರಣಿಗಳಿಗೆ ಕಿವಿ ಮಾತು ಹೇಳಿದರು. ಉಪನ್ಯಾಸಕ ಡಾ.ಎಲ್.ಪಿ.ರಾಜು ಮಹರ್ಷಿ ವಾಲ್ಮೀಕಿಗಳ ಕುರಿತು ವಿಶೇಷ ಉಪನ್ಯಾಸ ನೀಡಿ,ದ್ರೋಣರಿಗೆ ಗುರುಕಾಣಿಕೆಯಾಗಿ ತನ್ನ ಹೆಬ್ಬೆರಳು ನೀಡಿದ ಏಕಲವ್ಯ,ಭಕ್ತಿಗಾಗಿ ಶಿವನಿಗೆ ಕಣ್ಣು ನೀಡಿದ ಬೇಡರ ಕಣ್ಣಪ್ಪನ ಸಮುದಾಯ ನಮ್ಮದು.ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯ ರಚಿಸಿದ ರಾಮಾಯಣ ಇಡೀ ಜಗತ್ತಿಗೆ ದಾರಿದೀಪವಾಗಿದೆ.ವಾಲ್ಮೀಕಿ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡದ ಮನುವಾದಿಗಳು ವಾಲ್ಮೀಕಿಯನ್ನು ದರೋಡೆಕಾರ ಎಂದು ಬಿಂಬಿಸಿದ್ದಾರೆ. ವಾಲ್ಮೀಕಿಯನ್ನು ತೇಜೋವದೆ ಮಾಡುತ್ತಾ ರಾಮನನ್ನು ವೈಭವೀಕರಣ ಮಾಡುವ ಕೆಲಸವಾಗುತ್ತಿದೆ.ಪಂಜಾಬ್ ಹೈಕೋರ್ಟು ಸಹ ವಾಲ್ಮೀಕಿ ದರೋಡಕೊರ ಅಲ್ಲ,ಆತ ಬೇಡ ಕುಲದ ವ್ಯಕ್ತಿ ಎಂದು ತಿರ್ಪು ನೀಡಿದೆ.ರಾಮನ ವಿಜೃಂಭಣೆಯಲ್ಲಿ ಹಾಗೂ ರಾಮನಬೇಕು,ಬೇಡಗಳ ಮಧ್ಯದಲ್ಲಿ ವಾಲ್ಮೀಕಿಯನ್ನು ನೇಪಥ್ಯಕ್ಕೆ ತಳಲಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ತುಮಕೂರು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಶ್ರೀಮತಿ ಶಾಂತಲರಾಜಣ್ಣ,ಸಮುದಾಯವನ್ನು ಶೈಕ್ಷಣಿಕವಾಗಿ ಬೆಳೆಸುವ ನಿಟ್ಟಿನಲ್ಲಿ ಸಂಘಟನೆ ಕೆಲಸ ಮಾಡುತ್ತಿದೆ.ಪ್ರಾಮಾಣಿಕವಾಗಿ ಶಿಕ್ಷಣಕ್ಕೆ ಹಣಕಾಸಿನ ಕೊರತೆ ಇದ್ದರೆ ಸಂಘ ನಿಮಗೆ ಸ್ಪಂದಿಸಿ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಕೆ.ಆರ್.ರಾಜಕುಮಾರ್ ಇಲಾಖೆಯಿಂದ ಶೈಕ್ಷಣಿಕ ಅಭಿವೃದ್ದಿಗಾಗಿ ದೊರೆಯುವ ಸೌಲಭ್ಯಗಳ ಕುರಿತು ವಿವರ ನೀಡಿ,ಪ್ರಬುದ್ದ ಯೋಜನೆಯ ಮೂಲಕ ವಿದೇಶದಲ್ಲಿ ಕಲಿಯಲು ಅವಕಾಶವಿದೆ ಎಂದು ತಿಳಿಸಿದರು.
ಇದೇ ವೇಳೆ ೨೦೨೩-೨೪ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಶೇ೮ಕ್ಕೀಂತಲು ಅತಿ ಹೆಚ್ಚು ಅಂಕ ಪಡೆದ ೨೨೦ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪುರುಷೋತ್ತಮ್ ವಹಿಸಿದ್ದರು.
ವೇದಿಕೆಯಲ್ಲಿ ಸಿರಾ ಮಾಜಿ ಶಾಸಕ ಸಾ.ಲಿಂಗಯ್ಯ,ತುಮಕೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಬಿ.ಜಿ ಕೃಷ್ಣಪ್ಪ,ತುಮಕೂರು ಜಿಲ್ಲಾ ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ದಿ ಸಂಘ ಅಧ್ಯಕ್ಷೆ ಶ್ರೀಮತಿ ಶಾಂತಲರಾಜಣ್ಣ,ಮಾಜಿ ಜಿ.ಪಂ.ಸದಸ್ಯ ರಾಮಚಂದ್ರಪ್ಪ, ಅಧಿಕಾರಿಗಳಾದ ಡಾ.ಕೆ.ಆರ್.ರಾಜಕುಮಾರ್,ಕೆ.ಎಸ್.ಗಂಗಾಧರ್,ಡಿ.ಸಿ ಸಿ ಬ್ಯಾಂಕನ ಜಂಗಮಪ್ಪ,ಸಮಾಜದ ಮುಖಂಡರಾದ ಪ್ರತಾಪ್,ಸಿಂಗದಳ್ಳಿ ರಾಜಕುಮಾರ್,ನಿವೃತ್ತ ಬಿ ಇ ಓ,ಬಸವರಾಜ ಮತ್ತಿತರರು ಸೇರಿದಂತೆ ಹಲವರು ಉಪಸ್ಥಿತರಿದ್ದರು.