ತುರುವೇಕೆರೆ:


ತಾಲ್ಲೂಕಿನಾದ್ಯಂತ ನಿರಂತರ ಸುರಿಯುತ್ತಿರುವ ಮಳೆಗೆ ಕೆಲವೆಡೆಗಳಲ್ಲಿನ ಕೆರೆಗಳು ಕೋಡಿ ಬಿದ್ದು ನೀರು ರಸ್ತೆ ಮೇಲೆ ಹರಿದು ಸಂಚಾರಕ್ಕೆ ಅಡಚಣೆಯಾಗಿದ್ದರೆ, ರಾತ್ರಿ ಮಳೆಗೆ ಮನೆ ಗೋಡೆ ಕುಸಿದಿದೆ.
ತಾಲ್ಲೂಕಿನ ದಂಡಿನಶಿವರ ಹೋಬಳಿಯ ಡಿ.ಹೊಸಹಳ್ಳಿ ಗ್ರಾಮದ ಪಾರ್ವತಮ್ಮನವರ ವಾಸದ ಮನೆಯ ಒಂದು ಭಾಗದ ಗೋಡೆ ಬುಧವಾರ ರಾತ್ರಿ ಕುಸಿದು ಬಿದ್ದು ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು ಮನೆಯ ದವಸ, ದಾನ್ಯ ಸೇರಿದಂತೆ ಹಲವು ಪರಿಕರಗಳು ಹಾಳಾಗಿವೆ.
ಪಟ್ಟಣದ ೧೩ನೇ ವಾರ್ಡ್ನಲ್ಲಿ ಕೆಲವರು ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮುಚ್ಚಿರುವುದರಿಂದ ಮಳೆ ನೀರು ಇಲ್ಲಿನ ವೆಂಕಟೇಶ್, ಕೆಂಪೇಗೌಡ, ಮರಿಯಪ್ಪ ಸೇರಿದಂತೆ ನಾಲ್ವರ ಮನೆಗಳು ಮಳೆ ನೀರು ನುಗ್ಗಿ ಮನೆಯ ದಿನ ನಿತ್ಯದ ಪರಿಕರಗಳೆಲ್ಲ ಹಾನಿಯಾಗಿವೆ.
ತಹಶೀಲ್ದಾರ್ ಎನ್.ಎ.ಕುಂಞಅಹಮದ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಆಶಾ, ಸದಸ್ಯ ಅಂಜನ್ ಕುಮಾರ್, ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಶಿರಸ್ತೆದಾರ್ ಸುನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿ ತೆರವು ಮಾಡಿಸಿ, ಕಾಲುವೆ ನೀರು ಸರಾಗವಾಗಿ ಹೋಗುವಂತೆ ಮಾಡಿಸಿದರು.
ತಾಲ್ಲೂಕಿನ ಕೊಂಡಜ್ಜಿ ಕ್ರಾಸ್ ಸೊಪ್ಪನಹಳ್ಳಿ ಮಧ್ಯೆ ಕೊಂಡಜ್ಜಿ ಹಳ್ಳ ರಭಸವಾಗಿ ರಸ್ತೆ ಮೇಲೆ ಹರಿಯುತ್ತಿರುವುದರಿಂದ ದಂಡಿನಶಿವರ ಪೊಲೀಸರು ಮತ್ತು ಕೊಂಡಜ್ಜಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬ್ಯಾರಿಕೇಡ್ ಹಾಕಿಸಿ ರಸ್ತೆ ಬಂಧ್ ಮಾಡಿಸಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಇದೇ ಜಾಗದಲ್ಲಿ ಹಳ್ಳದಾಟುವಾಗ ಕಾರುಕೊಚ್ಚಿ ಹೋಗಿ ಚಾಲಕ ಸಾವನ್ನಪ್ಪಿದ್ದನು. ಆದ ಕಾರಣ ಗೋರಾಘಟ್ಟ-ಕಲ್ಲೂರ್ ಕ್ರಾಸ್ ಭಾಗದ ಬಸ್ ಸೇರಿದಂತೆ ಇನ್ನಿತರ ವಾಹನಗಳ ಸಂಚಾರ ನಿಷೇಧಿಸಲಾಗಿದೆಂದು ಸ್ಥಳೀಯರೊಬ್ಬರು ತಿಳಿಸಿದರು.
ಮಲ್ಲಾಘಟ್ಟ ಕೆರೆ ಕೋಡಿ ನೀರು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪಟ್ಟಣದ ಪೊಲೀಸರು ಇಲ್ಲಿನ ರಸ್ತೆ ನಿರ್ಭಂದಿಸಿ ಬ್ಯಾರಿಕೇಡ್ ಹಾಕಲಾಗಿದೆ. ಸಾರಿಗೇಹಳ್ಳಿಕೆರೆ ಕೋಡಿಯಲ್ಲಿ ನೀರು ಹೆಚ್ಚಾಗಿ ರಸ್ತೆ ಮೇಲೆ ಹರಿಯುತ್ತಿದೆಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ತುರುವೇಕೆರೆ ಪಟ್ಟಣದ ಮುನಿಯೂರು ಗೇಟ್ ಬಳಿಯ ಶಿಂಷಾ ನದಿ ತುಂಬಿ ಮುನಿಯೂರು ಗದ್ದೆ ಬಯಲಿನ ವರೆವಿಗೂ ನೀರು ಆವರಿಸಿಕೊಂಡಿ ಅಪಾಯ ಮಟ್ಟದಲ್ಲಿ ತುಂಬಿ ಹರಿಯುತ್ತಿದೆ. ಶಿಂಷಾ ನದಿ ರಸ್ತೆ ಸೇತುವೆ ಎರಡೂ ಕಡೆ ಯಾವುದೇ ತಡೆಗೋಡೆ ನಿರ್ಮಿಸದೇ ಇರುವ ಕಾರಣ ವಾಹನ ಸವಾರರು ಮತ್ತು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.
ತಾಲ್ಲೂಕಿನ ಜಡೆಯ ಕೆರೆ ತುಂಬಿದ್ದು ಬುಧವಾರ ರಾತ್ರಿ ಕೆರೆ ಏರಿ ಮಧ್ಯೆ ಬಿರುಕು ಉಂಟಾಗಿ ಇಡೀ ಕೆರೆಯೇ ಒಡೆದು ಹೋಗುವ ಸ್ಥಿತಿಯಲ್ಲಿದ್ದಾಗ ಗ್ರಾಮಸ್ಥರು ಹೇಮಾವತಿ ನಾಲಾ ಎಂಜಿಯರ್ ಗೆ ಮಾಹಿತಿ ತಿಳಿಸಿ ಜೆಸಿಬಿ ಮೂಲಕ ಕೋಡಿ ಒಡೆಸಿ ನೀರು ಬಿಡಲಾಯಿತೆಂದು ಗ್ರಾಮಸ್ಥರೊಬ್ಬರು ತಿಳಿಸಿದರು.

(Visited 1 times, 1 visits today)