ಹುಳಿಯಾರು: ಖಾಸಗಿ ಒಡತನದ ಸೋಲಾರ್ ಕಂಪನಿಗೆ ಸರ್ಕಾರಿ ಭೂಮಿ ಗುತ್ತಿಗೆ ನೀಡುವ ಮೂಲಕ ಆ ಭೂಮಿಯಲ್ಲಿ ಅನ್ನ ತಿನ್ನುತ್ತಿದ್ದ ದಲಿತರನ್ನು ಒಕ್ಕಲೆಬ್ಬಿಸಿ, ಬೀದಿಗೆ ತಳ್ಳಿರುವ ಘಟನೆ ಹುಳಿಯಾರು ಸಮೀಪದ ಕಂದಿಗೆರೆ ಹೋಬಳಿಯ ಚಿಕ್ಕರಾಂಪುರದಲ್ಲಿ ನಡೆದಿದೆ.
ಸರ್ಕಾರಿ ಸರ್ವೇ ನಂ. 14 ರಲ್ಲಿರುವ 148 ಎಕರೆ ಸರ್ಕಾರಿ ಭೂಮಿಯನ್ನು ಚಿಕ್ಕರಾಂಪುರದ ಪರಿಶಿಷ್ಟ ಜಾತಿಯ ಒಂದೇ ಕೋಮಿನ ನೂರಾರು ಜನ ಕಳೆದ 30-40 ವರ್ಷಗಳಿಂದ ಉಳುಮೆ ಮಾಡಿಕೊಂಡಿದ್ದು ತಮ್ಮ ಹಸಿದ ಹೊಟ್ಟೆಯ ತುಂಬಲು ಹಿಡಿ ಅನ್ನ ಬೆಳೆದುಕೊಳ್ಳುತ್ತಿದ್ದರು. ಮಳೆಯಾಶ್ರಿತ ಬೆಳೆಯಾದ ರಾಗಿ, ಹುರುಳಿ ಬೆಳೆದು ವರ್ಷ ಪೂರ್ತಿ ಈ ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸುತ್ತಿದ್ದರು.
ಸರ್ವೇ 14 ರಲ್ಲಿ ಸುಮಾರು 62 ಕುಟುಂಬ ತಲಾ ಎರಡೆರಡು ಎಕರೆ ಭೂಮಿಯನ್ನು 1980 ರಿಂದಲೂ ಬಗರ್ ಹುಕುಂ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. 1990 ಮತ್ತು 1998 ಹಾಗೂ 2018 ರಲ್ಲಿ ಈ ಭಾಗದ ಭೂರಹಿತ ದಲಿತ ವರ್ಗದ ರೈತರು ಫಾರಂ: 50, 53, ಮತ್ತು 57 ನಲ್ಲಿ ಅರ್ಜಿ ಹಾಕಿ ಸಕ್ರಮಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಅವರ ಅನುಭವದ ಮೇಲೆ ಹಿಂದೆ ಕೆಲವರಿಗೆ ಟಿಟಿ ಕಟ್ಟಿಸಿಕೊಳ್ಳಲಾಗಿದೆ. ಕೆಲವರಿಗೆ ಸರ್ವೇ ಮಾಡಿ ಸ್ಕೆಚ್ ಸಹ ಮಾಡಲಾಗಿದೆ. ಕೆಲವರಿಗೆ ಸಾಗುವಳಿ ಚೀಟಿ ಕೊಡಲಾಗಿದೆ. ಕೆಲವು ಖಾತೆಗಳೂ ಆಗಿದೆ.
ಆದರೆ ಕಳೆದ ಎರಡು ಮೂರು ತಿಂಗಳ ಹಿಂದಷ್ಟೆ ಮೆಘಾ ಇಂಜಿನಿಯರಿAಗ್ ಮತ್ತು ಇನ್‌ಫ್ರಾಸ್ಟçಕ್ಚರ್ ಲಿಮಿಟೆಡ್ ಎಂಬ ಕಂಪನಿ ರೈತರು ಸ್ಚಾಧೀನದಲ್ಲಿರುವ ಸುಮಾರು 40 ಕ್ಕೂ ಹೆಚ್ಚು ಭೂಮಿಯನ್ನು ಸಮತಟ್ಟು ಮಾಡಿ ಸೋಲಾರ್ ಪ್ಯಾನಲ್ ಅಳವಡಿಸಲು ಮುಂದಾಗಿದೆ. ವಿಷಯ ತಿಳಿದ ಗ್ರಾಮದ ದಲಿತರು, ಬಗರ್‌ಹುಕುಂ ಸಾಗುವಳಿದಾರರು ಸ್ಥಳಕ್ಕೆ ಧಾವಿಸಿ, ತಮ್ಮ ಭೂಮಿ ತಮಗೆ ಬಿಡಿ, ಯೋಜನೆ ಬೇರೆ ಕಡೆ ಮಾಡಿ, ಬಡ ದಲಿತರಿಗೆ ಅನ್ಯಾಯ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಸದರಿ ಜಮೀನು ತಮಗೆ ಲೀಸ್‌ಗೆ ನೀಡಿದ್ದು, ಯೋಜನೆ ಅನುಷ್ಠಾನ ಮಾಡುವುದಾಗಿ ಸಿಬ್ಬಂಧಿ ಬೆದರಿಕೆ ಹಾಕಿ, ದೌರ್ಜನ್ಯದಿಂದ ದಲಿತರನ್ನು ಸದರಿ ಸ್ಥಳದಿಂದ ಹೊರ ಹಾಕಿದೆ. ದಿಕ್ಕು ಕಾಣದ ದಲಿತರು ನ್ಯಾಯ ಮತ್ತು ರಕ್ಷಣೆಗಾಗಿ ಕಂದಾಯ ಇಲಾಖೆ ಹಾಗೂ ಸ್ಥಳೀಯ ಆಡಳಿತದ ಮೊರೆ ಹೋಗಿದೆ. ಈ ಭಾಗದಲ್ಲಿ ನೂರಾರು ಎಕರೆ ಸರ್ಕಾರದ ಖಾಲಿ ಭೂಮಿ ಇದ್ದರೂ ದಲಿತರ ವಿರುದ್ಧ ಇರುವ ಅಧಿಕಾರಿಗಳು ದಲಿತರು ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ಭೂಮಿಯನ್ನೇ ಆಮೀಷಕ್ಕೊಳಗಾಗಿ ಗುತ್ತಿಗೆ ನೀಡಿ, ದಲಿತರಿಗೆ ಅನ್ಯಾಯ ಮಾಡುವ ಜೊತೆಗೆ ಪರೋಕ್ಷವಾಗಿ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾರೆ.
ಈಗ ನೊಂದ ಜನ ಸರ್ಕಾರ ಮತ್ತು ಖಾಸಗೀ ಕಂಪನಿ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದು, ಪ್ರಾಣ ಹೋದರೂ ಭೂಮಿ ಬಿಡುವುದಿಲ್ಲ ಎಂದು ಹೋರಾಟಕ್ಕೆ ಇಳಿದಿದ್ದಾರೆ. ದಲಿತ ಭೂರಹಿತರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಲು ಕರ್ನಾಟಕ ರಾಜ್ಯ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ತಿಪಟೂರು ಕೃಷ್ಣ, ರಾಘವೇಂದ್ರ ಯಗಚಿಕಟ್ಟೆ, ಶಿವಕುಮಾರ್ ಮತ್ತಿಘಟ್ಟ ಮತ್ತಿತರು ಸ್ಥಳಕ್ಕೆ ಬೇಟಿ ನೀಡಿ ಮಾಹಿತಿ ಮತ್ತು ದಾಖಲೆ ಸಂಗ್ರಹಿಸಿದರು. ನ್ಯಾಯ ಸಿಗದಿದ್ದರೆ ಅನ್ಯಾಯದ ವಿರುದ್ಧ ಹೋರಾಟ ಮಾಡುವುದಾಗಿ ಭರವಸೆ ನೀಡಿದರು.
————————
ಗುಡ್ಡಕ್ಕೆ ಪ್ಯಾನ್ ಹಾಕುತ್ತಾರೆಂದು ಕೊಂಡಿದ್ದೆವು
ಮೊದಲು ಗುಡ್ಡದ ಕೆಳಗೆ ಸಮತಟ್ಟು ಮಾಡುತ್ತಿದ್ದರು. ನಾವು ಪವನಯಂತ್ರ ಅಳವಡಿಸಲು ರಸ್ತೆ ಮಾಡುತ್ತಿದ್ದಾರೆ ಎಂದುಕೊAಡಿದ್ದೆವು. ಹೀಗೆ 40 ಎಕರೆ ಸಮತಟ್ಟು ಮಾಡಿದಾಗ ಅನುಮಾನ ಬಂದು ಹೋಗಿ ಕೇಳಿದಾಗ ಸೋಲಾರ್ ಹಾಕುತ್ತಿದ್ದೇವೆ ಎಂದರು. ಆಗ ಎಲ್ಲರೂ ಒಗ್ಗಟ್ಟಾಗಿ ಇಲ್ಲಿ ಮರ‍್ನಲ್ಕು ದಶಕಗಳಿಂದ ಸಾಗುವಳಿ ಮಾಡುತ್ತಿದ್ದೇವೆ. ಈ ಭೂಮಿ ಬಿಟ್ಟರೆ ಬೇರೆ ಭೂಮಿಯಿಲ್ಲ. ನಮ್ಮನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದೇವೆ. ಈಗ ಕೆಲಸ ನಿಲ್ಲಿಸಿದ್ದಾರೆ. ಮತ್ತೆ ಆರಂಭಿಸಿದರೆ ಉಗ್ರ ಹೋರಾಟಕ್ಕೆ ಧುಮುಕುತ್ತೇವೆ.
– ವೆಂಕಟೇಶ್, ಸಾಗುವಳಿದಾರ, ಚಿಕ್ಕರಾಮಪುರ
————————-
– ಕೃಷಿಗೆ ಯೋಗ್ಯವಾದ ಭೂಮಿ ಅಲ್ಲ
ಚಿಕ್ಕರಾಮಪುರದಲ್ಲಿ ಸೋಲಾರ್ ಪ್ಲಾಂಟ್ ಮಾಡುತ್ತಿರುವ ಸ್ಥಳ ಪರಿಶೀಲಿಸಿದ್ದೇನೆ. ಅಲ್ಲಿ ವಾಸ್ತವವಾಗಿ ಸಾಗುವಳಿ ಮಾಡಿರುವ ಲಕ್ಷಣ ಕಂಡುಬAದಿಲ್ಲ. ಅಲ್ಲದೆ ಕಡಿದಾದ ಕಾಡುಗಲ್ಲು ಹಾಗೂ ಕುರುಚಲು ಗಿಡಗಳಿರುವ ಪ್ರದೇಶ. ಆಜೂಬಾಜಿನಲ್ಲೂ ಸಾಗುವಳಿ ಮಾಡಿಲ್ಲ. ಮುಖ್ಯವಾಗಿ ಈ ಭೂಮಿ ಕೃಷಿಗೆ ಯೋಗ್ಯವಾದ ಭೂಮಿಯಲ್ಲ. ಈ ವರದಿಯನ್ನೇ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುತ್ತೇನೆ.
ಕೆ.ಪುರಂದರ್, ತಹಸೀಲ್ದಾರ್, ಚಿಕ್ಕನಾಯಕನಹಳ್ಳಿ
————————–
ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ
ಸಾಗು ಮಾಡುತ್ತಿದ್ದ ಸ್ಥಳವನ್ನೇ ಜೆಸಿಬಿ ಮೂಲಕ ಡೋಸಿಂಗ್ ಮಾಡಿದ್ದಾರೆ. ಪಕ್ಕದಲ್ಲೇ ತೆಂಗು ಸಹ ಬೆಳೆದಿದ್ದಾರೆ. ದಿಣ್ಣೆಯಲ್ಲಿ ರೈತರು ಈಗಲೂ ಜೋಳ ಬೆಳೆಯುತ್ತಿದ್ದಾರೆ. ಕೆಲವರಿಗೆ ಸಾಗುವಳಿ ಚೀಟಿ ಕೊಟ್ಟಿದ್ದಾರೆ. ಸಾಗು ಮಾಡುತ್ತಿರುವವರೆಲ್ಲರೂ ದಲಿತರೆನ್ನುವ ಕಾರಣಕ್ಕೆ ಆ ಭೂಮಿಗೆ ಕೈ ಹಾಕಿದ್ದಾರೆ. ಆದರೆ ರಾಜ್ಯ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ದಲಿತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ.
ನಾವೂ ಸಹ ದಾಖಲೆ ಸಹಿತ ಜಿಲ್ಲಾಧಿಕಾರಿಗೆ ಒಕ್ಕಲೆಬ್ಬಿಸದಂತೆ ಕೇಳಿಕೊಳ್ಳುತ್ತೇವೆ. ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿಗಳ ಕಛೇರಿ ಎದುರು ಅನ್ಯಾಯಕ್ಕೊಳಗಾದ ದಲಿತರೊಂದಿಗೆ ಅಹೋರಾತ್ರಿ ಧರಣಿ ನಡೆಸುತ್ತೇವೆ.
– ತಿಪಟೂರು ಕೃಷ್ಣ, ರಾಜ್ಯ ಸದಸ್ಯ, ರಾಜ್ಯ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ
———————-

(Visited 3 times, 1 visits today)
FacebookTwitterInstagramFacebook MessengerEmailSMSTelegramWhatsapp