ತುಮಕೂರು: ನಗರದ ಖಾಸಗಿ ಬಸ್ ನಿಲ್ದಾಣದ ಸಮೀಪವಿರುವ ಡಾ. ಶಿವಕುಮಾರ ಸ್ವಾಮೀಜಿ ಆಟೋ ನಿಲ್ದಾಣ ಹಾಗೂ ಕಲ್ಪತರು ಆಟೋ ನಿಲ್ದಾಣದ ಚಾಲಕರ ವತಿಯಿಂದ ಕನ್ನಡ ಚಲನಚಿತ್ರ ರಂಗದ ಮೇರು ನಟ ದಿ. ಶಂಕರ್‌ನಾಗ್ ರವರ ಜನ್ಮ ಜಯಂತಿಯನ್ನು ಆಚರಿಸಲಾಯಿತು.

ಆಟೋ ಚಾಲಕರು ಹಮ್ಮಿಕೊಂಡಿದ್ದ ನಟ ದಿ. ಶಂಕರ್‌ನಾಗ್ ಅವರ ಜನ್ಮಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರು ಶಂಕರ್‌ನಾಗ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿ ಮಾತನಾಡಿ, ಆಟೋ ಚಾಲಕರು ಶ್ರಮ ಜೀವಿಗಳು, ಸ್ವಾಭಿಮಾನಿಗಳು. ಸಾಲ ಮಾಡಿ ಆಟೋ ಖರೀದಿಸಿ ದೇಶ ಕಟ್ಟುವ ಕೆಲಸ ಮಾಡುತ್ತಾ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುತ್ತಿರುವುದು ಶ್ಲಾಘನೀಯ ಎಂದರು.

ಆಟೋ ಚಾಲಕರು ಸ್ವತಃ ದುಡ್ಡು ಹಾಕಿಕೊಂಡು ಮೇರು ನಟ ದಿ. ಶಂಕರ್‌ನಾಗ್ ರವರ ಜನ್ಮ ಜಯಂತಿ ಆಚರಣೆ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ. ಶಂಕರ್‌ನಾಗ್ ಅವರು ಇಡೀ ಕರ್ನಾಟಕದ ಜನರ ಪ್ರೀತಿಯ ನಟ ಎಂದರು.
ಆಟೋ ಚಾಲಕರ ಸಮಸ್ಯೆಗೆ ಸ್ಪಂದಿಸಲು ನಾನು ಸದಾ ಸಿದ್ದನಿರುತ್ತೇನೆ ಎಂದು ಭರವಸೆ ನೀಡಿದ ಅವರು, ಸಮಾಜದಲ್ಲಿ ಹಾಗೂ ಟ್ರಾಫಿಕ್‌ನಲ್ಲಿ ಸಣ್ಣಪುಟ್ಟ ತೊಂದರೆಗಳಾಗುತ್ತವೆ. ಅದನ್ನು ನಿವಾರಿಸಿಕೊಂಡು ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ಒದಗಿಸುವ ಕೆಲಸವನ್ನು ಪ್ರತಿಯೊಬ್ಬ ಆಟೋ ಚಾಲಕರು ಮಾಡಬೇಕು ಎಂದು ಸಲಹೆ ನೀಡಿದರು.

ಆಟೋ ಚಾಲಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರತಾಪ್ ಮಾತನಾಡಿ, ಆಟೋ ಚಾಲಕರು ಈ ನಾಡಿನ ಸೇವಕರು. ವೈಯುಕ್ತಿಕವಾಗಿ ಎಷ್ಟೇ ಸಮಸ್ಯೆಗಳಿದ್ದರೂ ಅದನ್ನೆಲ್ಲಾ ಬದಿಗೊತ್ತಿ ಪ್ರಯಾಣಿಕರ ಸೇವೆಗೆ ಬೆಳಿಗ್ಗೆಯಿಂದ ರಾತ್ರಿವರೆಗೆ ದುಡಿಯುತ್ತೇವೆ. ನಮ್ಮ ಆಟೋ ಚಾಲಕರ ಸಮಸ್ಯೆಗಳಿಗೆ ಶಾಸಕರು ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ನಗರದಲ್ಲಿ 8 ಸಾವಿರ ಅಧಿಕೃತ ಆಟೋರಿಕ್ಷಾಗಳಿವೆ. 3 ಸಾವಿರ ಅನಧಿಕೃತ ಆಟೋರಿಕ್ಷಾಗಳಿವೆ. ಈ ಎಲ್ಲಾ ಆಟೋ ಚಾಲಕರು ಸಮರ್ಪಕ ಆಟೋ ನಿಲ್ದಾಣಗಳಿಲ್ಲದೆ ಪ್ರತಿನಿತ್ಯ ಸಮಸ್ಯೆ ಎದುರಿಸುವಂತಾಗಿದೆ. ನಗರದಲ್ಲಿದ್ದ 175 ಆಟೋ ನಿಲ್ದಾಣಗಳನ್ನು ಸ್ಮಾರ್ಟ್ಸಿಟಿ ಹೆಸರಲ್ಲಿ ಕಿತ್ತ ಹಾಕಲಾಗಿದೆ. ಇದುವರೆಗೂ ಯಾವುದೇ ಒಂದು ಆಟೋ ನಿಲ್ದಾಣವನ್ನು ನಿರ್ಮಿಸಿಕೊಟ್ಟಿಲ್ಲ. ಇದರಿಂದಾಗಿ ಆಟೋಗಳನ್ನು ಎಲ್ಲಿ ನಿಲ್ಲಿಸಿದರೂ ಪೊಲೀಸರು ದಂಡ ಹಾಕುತ್ತಿಲ್ಲ. ಆದರೆ ಆನ್‌ಲೈನ್‌ನಲ್ಲಿ ದಂಡ ಹಾಕಲಾಗುತ್ತಿದೆ. ಆಟೋ ಚಾಲಕರು ಬೆಳಿಗ್ಗೆಯಿಂದ ರಾತ್ರಿವರೆಗೆ ದುಡಿದ ಹಣವನ್ನು ಈ ರೀತಿ ಪೊಲೀಸ್ ಇಲಾಖೆಯವರು ಹಾಕುವ ದಂಡಕ್ಕೆ ಕಟ್ಟಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿ ಹೆಂಡತಿ, ಮಕ್ಕಳು, ಸಂಸಾರವನ್ನು ಸಾಕುವ ಹೊಣೆಗಾರಿಕೆಯೂ ಆಟೋ ಚಾಲಕರ ಮೇಲಿದೆ. ಈ ಬಗ್ಗೆ ತಾವು ಗಮನ ಹರಿಸಿ ಆಟೋ ಚಾಲಕರಿಗೆ ಆಗುತ್ತಿರುವ ನಿಲ್ದಾಣದ ತೊಂದರೆಯನ್ನು ನಿವಾರಿಸಬೇಕು ಎಂದು ಶಾಸಕರಿಗೆ ಕೋರಿದರು.

ನಟ ದಿ. ಶಂಕರ್‌ನಾಗ್ ಹೆಸರಿನಲ್ಲಿ ಆಟೋ ನಿಲ್ದಾಣ ಮಾಡಲು ಚಿಂತನೆ ಇದೆ. ಇದಕ್ಕೆ ತಾವು ಪೊಲೀಸ್ ಇಲಾಖೆಯಿಂದ ಅನುಮತಿ ಕೊಡಿಸಬೇಕು ಎಂದು ಇದೇ ಸಂದರ್ಭದಲ್ಲಿ ಶಾಸಕರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆಟೋ ಚಾಲಕರ ಉಪಾಧ್ಯಕ್ಷ ಭೀಮಸಂದ್ರ ಲಿಂಗಣ್ಣ. ಇಂತಿಯಾಜ್ ಪಾಷ, ನವೀನ್‌ಗೌಡ, ರಾಮಸ್ವಾಮಿಗೌಡ, ತಿಪ್ಪೇಸ್ವಾಮಿ, ಜಗದೀಶ್, ಕುಪ್ಪೂರು ರಂಗಪ್ಪನಾಯಕ್, ಗಂಗಾಧರ್, ಉಲ್ಲಾಸ್, ಕುಮಾರ್, ಮಹೇಶ್, ದರ್ಶನ್, ಮೊಹಮಿನ್ ಪಾಷ ಸೇರಿದಂತೆ ವಿವಿಧ ನಿಲ್ದಾಣಗಳ ಆಟೋ ಚಾಲಕರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ನಟ ದಿ. ಶಂಕರ್‌ನಾಗ್ ಜನ್ಮ ಜಯಂತಿ ಅಂಗವಾಗಿ ಅನ್ನಸಂತರ್ಪಣೆ ಮಾಡಲಾಯಿತು.

(Visited 1 times, 1 visits today)