ಬೆಂಗಳೂರು:
ಸಮ್ಮಿಶ್ರ ಸರಕಾರದ ಬಹು ನಿರೀಕ್ಷಿತ ಸಂಪುಟ ವಿಸ್ತರಣೆ ಶನಿವಾರ ಸಂಜೆ ನಿಗದಿಯಂತೆ ನಡೆದಿದ್ದು, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ 8 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಉಪಸ್ಥಿತರಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಅವರು ಸಂಪುಟ ದರ್ಜೆ ಸಚಿವರಾಗಿ ನೇಮಕಗೊಂಡಿರುವ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
ಮೊದಲಿಗೆ ಎಂ.ಬಿ. ಪಾಟೀಲ್ ಪ್ರಮಾಣ ವಚನ ಸ್ವೀಕರಿಸಿದರು. ಎರಡನೆಯವರಾಗಿ ಆರ್.ಬಿ. ತಿಮ್ಮಾಪುರ ; ಮೂರನೆಯವರಾಗಿ ಸತೀಶ್ ಜಾರಕಿಹೊಳಿ ಅವರು ಬುದ್ಧಬಸವ ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ನಾಲ್ಕನೆಯವರಾಗಿ ಸಿ.ಎಸ್. ಶಿವಳ್ಳಿ, ಐದನೆಯವರಾಗಿ ಪಿ.ಟಿ. ಪರಮೇಶ್ವರ್ನಾಯ್ಕ್ಶ್ರೀ ತುಳಜಾಭಾನಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಆರನೆಯವರಾಗಿ ಇ. ತುಕಾರಾಂ, ಏಳನೆಯವರಾಗಿ ರಹೀಂ ಖಾನ್ ಹಾಗೂ ಕೊನೆಯವರಾಗಿ ಎಂಟಿಬಿ ನಾಗರಾಜ್ ಪ್ರಮಾಣ ವಚನ ಸ್ವೀಕರಿಸಿದರು.
ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಡುವುದರ ಜತೆಗೆ ಸಂಪುಟದಲ್ಲಿ ಖಾಲಿ ಇದ್ದ 6 ಸ್ಥಾನಗಳ ಭರ್ತಿಗೆ ತೀರ್ಮಾನ ಆಗಿರುವುದರಿಂದ ಈಗ ಒಟ್ಟು 8 ಮಂದಿ ಹೊಸಬರು ಸೇರ್ಪಡೆಗೆ ಅವಕಾಶ ದೊರೆತಿದೆ. ರಮೇಶ್ ಜಾರಕಿಹೊಳಿ ಸ್ಥಾನಕ್ಕೆ ಅವರ ಸಹೋದರ ಸತೀಶ ಜಾರಕಿಹೊಳಿ, ಆರ್.ಶಂಕರ್ ಸ್ಥಾನಕ್ಕೆ ಕುಂದಗೋಳು ಶಾಸಕ ಕುರುಬ ಸಮುದಾಯ ಸಿ.ಎಸ್.ಶಿವಳ್ಳಿ ನೇಮಕಗೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ, ಸಂಸದ ವೀರಪ್ಪ ಮೊಯ್ಲಿ, ಸೇರಿದಂತೆ ಹಿರಿಯ ನಾಯಕರು ಪಾಲ್ಗೊಂಡಿದ್ದರು. ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಇಂದು ಸಂಜೆ ನಡೆದ ಕಾರ್ಯಕ್ರಮದ ಅಂಗವಾಗಿ ರಾಜಭವನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.