ತುಮಕೂರು: ಶಿಕ್ಷಣದಿಂದ ಮಾತ್ರ ಮಹಿಳಾ ಸಬಲೀಕರಣ ಸಾಧ್ಯವಾಗಲಿದೆ. ಪುರುಷ ಸಮಾಜವು ಮಹಿಳೆಯ ಜೊತೆ ನಿಂತು ಸರ್ವರೀತಿಯಲ್ಲೂ ಶಕ್ತಿ ತುಂಬಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷೀ ಚೌಧರಿ ಹೇಳಿದರು.
ತುಮಕೂರು ವಿವಿಯ ಮಹಿಳಾ ಅಧ್ಯಯನ ಕೇಂದ್ರವು ಪೊಲೀಸ್ ಬೇಟೆ ಕನ್ನಡ ವಾರ ಪತ್ರಿಕೆಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಹಿಳಾ ಸಬಲೀಕರಣ ಎತ್ತ ಸಾಗಿದೆ?’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಶೇ.27 ಮಹಿಳೆಯರು ಮಾತ್ರ ಉನ್ನತ ಶಿಕ್ಷಣದ ಮೆಟ್ಟಿಲೇರಿ ಬದುಕನ್ನು ರೂಪಿಸಿಕೊಳ್ಳುತ್ತಿದ್ದಾರೆ. ಶಾಲಾ, ಕಾಲೇಜು, ಪದವಿ ಹಂತದಲ್ಲೇ ಬಹುತೇಕ ಹೆಣ್ಣುಮಕ್ಕಳು ವಿದ್ಯಾಭ್ಯಾಸ ನಿಲ್ಲಿಸಿ ಸಾಂಸಾರಿಕ ಜೀವನಕ್ಕೆ ಧುಮುಕುತ್ತಿರುವುದು ವಿಪರ್ಯಾಸ ಎಂದರು.
ಹರೆಯದ ವಯಸ್ಸಿನಲ್ಲಿ ಪ್ರೀತಿ-ಪ್ರೇಮದ ಬಲೆಯಲ್ಲಿ ಬಿದ್ದು ವಿದ್ಯಾರ್ಥಿಗಳು ಬದುಕನ್ನು ನಾಶಮಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳೇ ಬದುಕೆಂದು ನಿರ್ಧರಿಸಿ ನಡೆಯುತ್ತಿದ್ದಾರೆ. ಮೊಬೈಲ್ ಬಳಕೆ ಉಸಿರಾಟಕ್ಕಿಂತಲೂ ಮುಖ್ಯವೆಂದು ಭಾವಿಸಿರುವವರನ್ನು ಸಬಲೀಕರಣದತ್ತ ಕೊಂಡೊಯ್ಯುವುದಾದರೂ ಹೇಗೆಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು.
ಕುಲಸಚಿವೆ ನಾಹಿದಾ ಜûಮ್ ಜûಮ್ ಮಾತನಾಡಿ, ಬದುಕಿನ ಶೇ.16.6 ಭಾಗವನ್ನು ಋತುಸ್ರಾವದ ನೋವಿನಲ್ಲೇ ಕಳೆಯುವ ಹೆಣ್ಣನ್ನು, ಪುರುಷ ಸಾಮ್ರಾಜ್ಯದಲ್ಲಿ ತನ್ನ ವೃತ್ತಿ ಜೀವನವನ್ನು, ಆಸೆಗಳನ್ನು ಕೊಂದು ಬದುಕನ್ನು ಕುಟುಂಬಕ್ಕಾಗಿ ತ್ಯಜಿಸುವ ಹೆಣ್ಣನ್ನು ಶೋಷಿಸುವುದು ಯಾವ ನ್ಯಾಯ? ಮಹಿಳೆಯರನ್ನು ಸಮಾನವಾಗಿ ಕಂಡಾಗ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ದಾವಣಗೆರೆ ಜಿಲ್ಲೆಯ ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಮಾತನಾಡಿ, 12ನೆಯ ಶತಮಾನದಲ್ಲಿ ಬಸವಣ್ಣನವರ ಅಕ್ಕನ ಧಾರ್ಮಿಕ ಸ್ವಾತಂತ್ರö್ಯಕ್ಕಾಗಿ ಶುರುವಾದ ಮಹಿಳಾ ಸಬಲೀಕರಣವೂ ಇಂದು ಕೇವಲ ಬಾಯಿಮಾತಾಗಿ ಭಾಷಣಗಳಲ್ಲಿ ಉಳಿದಿದೆ. ಉಚಿತ ಶಿಕ್ಷಣ, ಉಚಿತ ಚಿಕಿತ್ಸೆ, ಹೆಣ್ಣುಮಕ್ಕಳಿಗೆ ಉನ್ನತ ಸ್ಥಾನಮಾನ ನೀಡುವ ದೇಶ ಅಭಿವೃದ್ಧಿ ಹೊಂದಲಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿದೇರ್ಶಕ ಡಾ. ಎಸ್. ಸಿದ್ದರಾಮಣ್ಣ, ತುಮಕೂರು ವಿವಿಯ ಮಹಿಳಾ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ಜ್ಯೋತಿ, ಪೊಲೀಸ್ ಬೇಟೆ ಕನ್ನಡ ವಾರ ಪತ್ರಿಕೆ ಸಂಪಾದಕ ಪ್ರಸನ್ನ ಉಪಸ್ಥಿತರಿದ್ದರು.
(Visited 1 times, 1 visits today)