ತುಮಕೂರು: ರಾಜ್ಯದಲ್ಲಿ ರೈತರ, ಮಠಮಾನ್ಯಗಳ, ದೇವಾಲಯಗಳ, ಸರ್ಕಾರಿ ಶಾಲೆಗಳ, ಸಾರ್ವಜನಿಕರ ಆಸ್ತಿಗೆ ವಕ್ಫ್ ನೋಟಿಸ್ ನೀಡಿರುವುದನ್ನು ವಿರೋಧಿಸಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ಶನಿವಾರ ನಗರದಲ್ಲಿ ನಮ್ಮ ಭೂಮಿ- ನಮ್ಮ ಹಕ್ಕು ಹೆಸರಿನ ಹೋರಾಟ ನಡೆಸಿದರು.
ಬಿಜಿಎಸ್ ವೃತ್ತದಲ್ಲಿ ಸಮಾಗಮಗೊಂಡ ಮುಖಂಡರು, ಹಿಂದೂಗಳ ಜಮೀನನ್ನು ವಕ್ಫ್ಗೆ ಪರಭಾರೆ ಮಾಡುವ ಪ್ರಯತ್ನ ನಡೆದಿದೆ ಎಂದು ಆಪಾದಿಸಿ, ವಕ್ಫ್ ಸಮಸ್ಯೆ ಪರಿಹರಿಸಲು ಸರ್ಕಾರವನ್ನು ಒತ್ತಾಯಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಲ್ಪಂಸAಖ್ಯಾತರ ತುಷ್ಟೀಕರಣವನ್ನು ಮುಖ್ಯ ವಿಷಯವನ್ನಾಗಿಸಿಕೊಂಡು ಗೊಂದಲ ಮೂಡಿಸುತ್ತಿದೆ. ರೈತರ ಜಮೀನು, ದೇವಸ್ಥಾನ, ಮಠಮಾನ್ಯಗಳ ಜಾಗ, ಸಾರ್ವಜನಿಕ ಆಸ್ತಿಯನ್ನು ವಕ್ಫ್ಗೆ ನೀಡುವ ಸಂಚು ನಡೆದಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರದ ಅಭಿವೃದ್ಧಿ ಶೂನ್ಯ ಎಂಬುದು ಜನಸಾಮಾನ್ಯರಿಗೂ ಗೊತ್ತಾಗಿದೆ. ಸರ್ಕಾರದಲ್ಲಿ ಯವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ಕೇವಲ ವೋಟಿಗಾಗಿ ಯಾರನ್ನೋ ತುಷ್ಟೀಕರಣ ಮಾಡಿಕೊಂಡು ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ. ಯಾವುದೋ ಸಮುದಾಯದ ಓಲೈಕೆಗಾಗಿ ದೇಶದ ಭದ್ರತೆಯನ್ನು ಹಾಳು ಮಾಡಿ ದೇಶವನ್ನು ಒತ್ತೆ ಇಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ರಾಜ್ಯದ ಹಿಂದೂಗಳ ಆಸ್ತಿ ಮೇಲೆ ವಕ್ಫ್ ಕಣ್ಣು ಹಾಕಿದೆ. ಇದರ ವಿರುದ್ಧ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತಿದೆ. ಸಾರ್ವಜನಿಕರ, ರೈತರ ಹಿತಾಸಕ್ತಿ ಮರೆತು ಸರ್ಕಾರ ಒಂದು ಸಮುದಾಯದ ಪರ ಹೊರಟಿದೆ ಎಂದು ಟೀಕಿಸಿದರು.
ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿರುವ ರಾಜ್ಯ ಸರ್ಕಾರ ಅನರ್ಹರಿಗೆ ಪಡಿತರ ಚೀಟಿ ನೀಡಿ ನಿಜವಾದ ಬಡವರ ಪಡಿತರ ಕಾರ್ಡ್ಗಳನ್ನು ರದ್ದು ಮಾಡಿದೆ. ಸೃಷ್ಟಿಸಿರುವ ವಕ್ಫ್ ಸಮಸ್ಯೆಯನ್ನು ಬಗೆಹರಿಸಬೇಕು, ತುಮಕೂರು ಜಿಲ್ಲೆಯಲ್ಲೇ 300ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಹೇಳಿದರು.ರಾಜ್ಯ ಬಿಜೆಪಿ ಕಾರ್ಯದರ್ಶಿ ವಿನಯ್ ಬಿದರೆ, ಸಂಸತ್ತಿನಲ್ಲಿ ವಕ್ಫ್ ಬಿಲ್ ಮಂಡನೆಗೆ ಬಿಜೆಪಿಯ ಬೆಂಬಲವಿದೆ. ವಕ್ಫ್ ವಿರುದ್ಧ ಬಿಜೆಪಿಯ ಹೋರಾಟ ನಿಲ್ಲುವುದಿಲ್ಲ ಎಂದರು.ಮುಖAಡರಾದ ಎಸ್.ಶಿವಪ್ರಸಾದ್, ದಿಲೀಪ್‌ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗಂಗರಾಜು, ಸಂದೀಪ್‌ಗೌಡ, ಕಾರ್ಯದರ್ಶಿ ಹೆಚ್.ಎಂ.ರವೀಶಯ್ಯ, ನಗರ ಅಧ್ಯಕ್ಷ ಟಿ.ಹೆಚ್.ಹನುಮಂತರಾಜು ಭಾಗವಹಿಸಿದ್ದರು.

(Visited 1 times, 1 visits today)