ತುಮಕೂರು: ಜಿಲ್ಲೆಯ ಪಾವಗಡ ತಾಲ್ಲೂಕು ನಾಗಲಮಡಿಕೆ ಗ್ರಾಮದ ಎಸ್.ಆರ್. ಎಂಟರ್ ಪ್ರೆöÊಸಸ್ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತಿದ್ದ ಕಳಪೆ ದರ್ಜೆಯ 2 ಜೈವಿಕ ಪ್ರಚೋದಕ(ಜೈವಿಕ/ಸಾವಯವ) ಪರಿಕರಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ.
ಜಪ್ತಿ ಮಾಡಲಾದ ಪರಿಕರಗಳಲ್ಲಿ ಹೆಚ್ಚಿನ ಪ್ರಮಾಣದ ಕೀಟನಾಶಕ ಅಂಶಗಳಿರುವ ಬಗ್ಗೆ ವಿಶ್ಲೇಷಣಾ ಪ್ರಯೋಗಾಲಯಗಳ ವರದಿಯಿಂದ ದೃಢಪಟ್ಟಿರುವುದರಿಂದ ಕೃಷಿ ಇಲಾಖೆಯ ಜಾರಿದಳ ವಿಭಾಗದಿಂದ ಕಳಪೆ ದರ್ಜೆಯ ಪರಿಕರಗಳನ್ನು ಜಪ್ತಿ ಮಾಡಿ ಇಲಾಖೆ ವಶಕ್ಕೆ ಪಡೆಯಲಾಗಿದೆ.
ಕೃಷಿ ಇಲಾಖೆಯ ಜಾರಿದಳ ವಿಭಾಗವು ನವೆಂಬರ್ 25ರಂದು ಎಸ್.ಆರ್.ಎಂಟರ್ ಪ್ರೆöÊಸಸ್ ಮಾರಾಟ ಮಳಿಗೆ ಮೇಲೆ ದಾಳಿ ಮಾಡಿ ನಿಯಮಾನುಸಾರ ಪರಿಶೀಲಿಸಿದಾಗ, ಅಂದಾಜು 29,400 ರೂ. ಮೌಲ್ಯದ 4.90 ಲೀಟರ್ ಪ್ರಮಾಣದ ಹೈದರಾಬಾದ್ ಉತ್ಪಾದಕ ಕಂಪನಿಗಳಾದ ಆಸ್ಕರ್ ಕ್ರಾಪ್ ಕೇರ್ ಹಾಗೂ ವಾಯು ಎಂಬ 2 ಜೈವಿಕ ಪರಿಕರ ಮಾದರಿಗಳನ್ನು ಅನುಮತಿ ಪಡೆಯದೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.
ಕಳೆದ ಬಾರಿ ಕ್ಷೇತ್ರ ಭೇಟಿ ಸಂದರ್ಭದಲ್ಲಿ ಸಂಶಯಾಸ್ಪದ ಹಿನ್ನೆಲೆಯಲ್ಲಿ ಕೀಟನಾಶಕ ತೇಷಾಂಶ ವಿಶ್ಲೇಷಣೆಗಾಗಿ ಗುಣಮಟ್ಟ ಖಾತ್ರಿಗಾಗಿ 2 ಪ್ರಯೋಗಾಲಯಗಳಿಗೆ ಕಳುಹಿಸಿಕೊಡಲಾಗಿತ್ತು. ಪ್ರಯೋಗಾಲಯಗಳ ವಿಶ್ಲೇಷಣಾ ವರದಿಯನ್ವಯ ಜಪ್ತಿ ಮಾಡಲಾದ ಜೈವಿಕ ಪರಿಕರದಲ್ಲಿ ಕ್ರಮವಾಗಿ ಘೋಷಿತ ಕೀಟನಾಶಕಗಳಾದ ಥಯೋಮೆತಾಕ್ಸಾಮ್ ಮತ್ತು ಹಿಮಾಮೆಕ್ಟಿನ್ ಬೆಂಜೋಯೇಟ್ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿರುವುದು ದೃಢಪಟ್ಟಿದೆ.
ರಸಗೊಬ್ಬರ ಮಾರಾಟ ನಿಯಮಗಳನ್ನು ಉಲ್ಲಂಘನೆ ಮಾಡಿರುವುದರಿಂದ ಎಸ್.ಆರ್. ಎಂಟರ್ ಪ್ರೆöÊಸಸ್ ಮಳಿಗೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದಾಳಿಯಲ್ಲಿ ಸಹಾಯಕ ಕೃಷಿ ನಿರ್ದೇಶಕ(ಜಾರಿದಳ-2) ಅಶ್ವತ್ಥನಾರಾಯಣ ವೈ., ಕೃಷಿ ಅಧಿಕಾರಿ ಶಂಷದ್ ಉನ್ನಿಸಾ ಅವರು ಪಾಲ್ಗೊಂಡಿದ್ದರು.